ಮಧ್ಯಪ್ರದೇಶ: ದೇಹದಾರ್ಢ್ಯ ಸ್ಪರ್ಧೆಯೊಂದು ರಾಜಕೀಯ ತಿಕ್ಕಾಟಕ್ಕೆ ಕಾರಣವಾದ ಘಟನೆ ಮಧ್ಯ ಪ್ರದೇಶದ ರತ್ಲಾಮ್ ನಲ್ಲಿ ನಡೆದಿದೆ.
ಮಾರ್ಚ್ 4,5 ರಂದು ರತ್ಲಾಮ್ ನಲ್ಲಿ 13ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆ ನಡೆದಿದೆ. ವೇದಿಕೆಯಲ್ಲಿ ಹನುಮಂತನ ಕಟೌಟ್ ವೊಂದನ್ನು ಹಾಕಲಾಗಿದ್ದು, ದೇಹದಾರ್ಢ್ಯ ಸ್ಪರ್ಧೆಯ ಅಂಗವಾಗಿ ಮಹಿಳಾ ಬಾಡಿ ಬಿಲ್ಡರ್ಸ್ ಗಳು ಬಿಕಿನಿ ತೊಟ್ಟು ತಮ್ಮ ದೇಹದಾರ್ಢ್ಯದ ಪ್ರದರ್ಶನ ನೀಡಿದ್ದಾರೆ. ನಾನಾ ಬಗೆಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದೇ ವಿಚಾರ ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ಬಿಜೆಪಿ ಮೇಯರ್ ಪ್ರಹ್ಲಾದ್ ಪಟೇಲ್ ಅವರನ್ನೊಳಗೊಂಡ ರತ್ಲಂನ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ ಪೋಷಕರಾಗಿರುವ ಸಮಿತಿ ಈ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ವೇದಿಕೆಯಲ್ಲಿ ಹನುಮಂತನ ಕಟೌಟ್ ವೊಂದನ್ನು ಆಳವಡಿಸಿದ್ದಾರೆ. ಅದರ ಮುಂದೆಯೇ ಬಂದು ಮಹಿಳಾ ಬಾಡಿ ಬಿಲ್ಡರ್ಸ್ ಗಳು ಬಿಕಿನಿಯಂತಿರುವ ಉಡುಪನ್ನು ಧರಿಸಿಕೊಂಡು ದೇಹದಾರ್ಢ್ಯ ಪ್ರದರ್ಶನ ಮಾಡಿರುವುದು ಅಸಭ್ಯ, ಆಶ್ಲೀಲವೆಂದು ಕಾಂಗ್ರೆಸ್ ಆರೋಪಿಸಿದೆ.
ಸ್ಪರ್ಧೆ ನಡೆದ ಬಳಿಕ ಆ ಸ್ಥಳವನ್ನು ಕಾಂಗ್ರೆಸ್ ಮುಖಂಡರು ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
Related Articles
ಇದನ್ನೂ ಓದಿ: ಕೋವಿಡ್ ನಂತೆಯೇ ಹರಡುತ್ತದೆ ‘ಎಚ್3ಎನ್2 ವೈರಸ್’; ಮಾಸ್ಕ್- ಅಂತರ ಮತ್ತೆ ಜಾರಿ ಸಾಧ್ಯತೆ!
ಯಾರೆಲ್ಲ ಈ ಸ್ಪರ್ಧೆಯಲ್ಲಿ ಸೇರಿಕೊಂಡಿದ್ದಾರೆಯೋ ಅವರನ್ನು ಹನುಮಂತ ದೇವರು ಶಿಕ್ಷಿಸದೇ ಬಿಡುವುದಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಯಾಂಕ್ ಜಾಟ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ವಕ್ತಾರ ಹಿತೇಶ್ ಬಾಜಪೇಯಿ ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುವುದನ್ನು ನೋಡುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ. ಕಾರ್ಯಕ್ರಮದ ಕೆಲ ಸಂಘಟಕರು ಪೊಲೀಸರಿಗೆ ಮನವಿ ಸಲ್ಲಿಸಿ, ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ.