Advertisement

Congress-BJP 3ನೇ ಪಟ್ಟಿಗಿಲ್ಲ ಮುಕ್ತಿ; ಆಕಾಂಕ್ಷಿಗಳು ತುದಿಗಾಲಲ್ಲಿ

11:01 PM Apr 14, 2023 | Team Udayavani |

ಬೆಂಗಳೂರು: ಕ್ಷಣಕ್ಕೊಂದು ತಿರುವು ಪಡೆದು ಆಕಾಂಕ್ಷಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಟಿಕೆಟ್‌ ಹಂಚಿಕೆ ಪ್ರಹಸನಕ್ಕೆ ಶುಕ್ರವಾರವೂ ಮುಕ್ತಿ ಸಿಕ್ಕಿಲ್ಲ.

Advertisement

ಬಿಜೆಪಿಯ 12 ಕ್ಷೇತ್ರಗಳ ಮೂರನೇ ಪಟ್ಟಿ ಹಾಗೂ ಕಾಂಗ್ರೆಸ್‌ನ 58 ಕ್ಷೇತ್ರಗಳ ಮೂರನೇ ಪಟ್ಟಿ ಶುಕ್ರವಾರ ಹೊರಬೀಳುತ್ತದೆ ಎಂದು ಹೇಳಲಾಗಿತ್ತು. ಆದರೆ ಆಕಾಂಕ್ಷಿಗಳಿಗೆ ಶುಕ್ರವಾರ ಶುಭ ಸುದ್ದಿ ತರಲಿಲ್ಲ.

ಎರಡನೇ ಪಟ್ಟಿ ಹೊರಬಿದ್ದ ಮೇಲೆ ಬಿಜೆಪಿಯಲ್ಲಿ ಸ್ಫೋಟಗೊಂಡಿರುವ ಬಂಡಾಯದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಟಿಕೆಟ್‌ ವಿಚಾರಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಕೆ.ಎಸ್‌. ಈಶ್ವರಪ್ಪ ಅವರ ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ನಿರ್ಧಾರವಾಗಿಲ್ಲ. ಉಳಿದಂತೆ ಅರವಿಂದ ಲಿಂಬಾವಳಿ, ಎಸ್‌.ಎ. ರಾಮದಾಸ್‌ ಅವರೂ ಕಾದು ಕುಳಿತಿದ್ದಾರೆ. ದ್ವಿಕ್ಷೇತ್ರದಿಂದ ಸ್ಪರ್ಧೆಗಿಳಿಯಲಿರುವ ವಿ. ಸೋಮಣ್ಣ ಅವರ ತವರು ಕ್ಷೇತ್ರ ಗೋವಿಂದರಾಜನಗರದ ಟಿಕೆಟ್‌ ಹಂಚಿಕೆ ಕಾಯ್ದಿಡಲಾಗಿದೆ. ಈ ರೀತಿ 12 ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಬಿಜೆಪಿ ಬಾಕಿ ಉಳಿಸಿದೆ.

ಎ. 16ರ ಬಳಿಕ ಕೈ ಪಟ್ಟಿ
ಅತ್ತ ಎರಡು ಹಂತಗಳಲ್ಲಿ ಪಟ್ಟಿ ಬಿಡುಗಡೆ ಮಾಡಿ ನಮ್ಮಲ್ಲಿ ಅಷ್ಟೇನೂ ಬಂಡಾಯ ಇಲ್ಲ ಎಂದು ಬೀಗುತ್ತಿರುವ ಕಾಂಗ್ರೆಸ್‌ಗೆ 3ನೇ ಪಟ್ಟಿ ಸವಾಲಾಗಿದೆ. 58ರಲ್ಲಿ 30 ಹೆಸರು ಅಂತಿಮ ಆಗಿದೆ. ಇನ್ನೇನು ಪಟ್ಟಿ ಬಿಡುಗಡೆ ಮಾಡಬೇಕು ಎಂದು ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಹೇಳುತ್ತಿದೆ. ಆದರೆ ಪಟ್ಟಿಗೆ ಮುಕ್ತಿ ಸಿಕ್ಕಿಲ್ಲ. 28 ಕ್ಷೇತ್ರಗಳಲ್ಲಿ “ವಲಸೆ ವಿದ್ಯಾಮಾನ’ಗಳನ್ನು ಆಧರಿಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಮತ್ತೂಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎ. 16ರಂದು ಕೋಲಾರಕ್ಕೆ ಬರುತ್ತಿದ್ದು, ಅದರ ಬಳಿಕವಷ್ಟೇ 3ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next