ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ತವರು ಜಿಲ್ಲೆಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬೆನ್ನಲ್ಲೇ ಗುರುವಾರ ಹಾಸನ ದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶ ಕುತೂಹಲದ ಕೇಂದ್ರಬಿಂದುವಾಗಿದೆ.
ನಗರದಿಂದ 4 ಕಿ.ಮೀ. ದೂರದ ಅರಸೀಕೆರೆ ರಸ್ತೆಯ ಎಸ್‌ಎಂಕೆ ನಗರದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೆವಾಲ ಪಾಲ್ಗೊಳ್ಳುತ್ತಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರ ದಂಡೇ ಹಾಸನಕ್ಕೆ ಗುರುವಾರ ಆಗಮಿಸುತ್ತಿದೆ.
ಸಿದ್ದರಾಮಯ್ಯ ಅವರ ಆಪ್ತ ಸಚಿವರು, ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಕೇಂದ್ರೀಕರಿಸಿ “ಸ್ವಾಭಿಮಾನಿ ಸಮಾವೇಶ’ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ ಸಮಾವೇಶಕ್ಕೆ ಒಂದೆರಡು ದಿನಗಳಿರುವಾಗ “ರಂಗ ಪ್ರವೇಶ’ ಮಾಡಿದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಪಕ್ಷದ ನೇತೃತ್ವದಲ್ಲೇ ನಡೆಯುವ ಸಮಾವೇಶ, ನನ್ನ ಅಧ್ಯಕ್ಷತೆಯಲ್ಲೇ “ಜನ ಕಲ್ಯಾಣ ಸಮಾವೇಶ’ ಹೆಸರಿನಲ್ಲೇ ನಡೆಯುತ್ತದೆ ಎಂದು ಘೋಷಣೆ ಮಾಡಿದರು.
2 ಲಕ್ಷ ಜನ ಸೇರುವ ನಿರೀಕ್ಷೆ
ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ವಿವಿಧ ಜಿಲ್ಲೆಗಳು ಹಾಗೂ ಹಾಸನದ ವಿವಿಧ ತಾಲೂಕುಗಳಿಂದ 1,000ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಸ್ವಾಭಿಮಾನಿಯೋ,
ಜನಕಲ್ಯಾಣವೋ ಗೊಂದಲ!
ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಂದ್ರೀಕರಿಸಿ “ಸ್ವಾಭಿಮಾನಿ ಸಮಾವೇಶ’ ನಡೆಸಲು ಸಿದ್ಧತೆ ನಡೆಸಲಾಗಿತ್ತಾದರೂ ಅನಂತರ “ಜನ ಕಲ್ಯಾಣ ಸಮಾವೇಶ’ ಹೆಸರಿನಡಿ ಸಮಾವೇಶ ನಡೆಸಲಾಗುತ್ತದೆ ಎನ್ನಲಾಗಿತ್ತು. ಈ ಗೊಂದಲದ ನಡುವೆಯೇ ಹಾಸನ ನಗರದಲ್ಲಿ ಅಳವಡಿಸಿರುವ ಬಹುತೇಕ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ “ಶೋಷಿತ ವರ್ಗಗಳ ಸ್ವಾಭಿಮಾನಿ ಸಮಾವೇಶ’ ಎಂದು ರಾರಾಜಿಸುತ್ತಿದ್ದು, ಕೆಲವೇ ಕಡೆ “ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ’ ಎಂಬ ಫ್ಲೆಕ್ಸ್, ಬ್ಯಾನರ್‌ಗಳು ಕಾಣಿಸಿಕೊಂಡಿವೆ.