ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಿಡಿ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಗಳ ಮೂಲಕ ತಿರುಗಿಬಿದ್ದಿದ್ದ ಕಾಂಗ್ರೆಸ್ ನಾಯಕರು ಇದೀಗ ಗೋಕಾಕ ತಾಲೂಕಿನ ಹಿರೇನಂದಿಯ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಸಾಲದ ಬಾಕಿ ಹಾಗೂ ಆರ್ಥಿಕ ದಿವಾಳಿ ವಿಚಾರ ಮುಂದಿಟ್ಟು ಮತ್ತೂಂದು ಹೋರಾಟ ಆರಂಭಿಸಲಿದ್ದಾರೆಯೇ?
ನೂರಾರು ಕೋಟಿ ರೂ. ಸಾಲದ ಬಾಕಿ ಪಾವತಿ ಮಾಡದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್ ಮುಖಂಡರು, ಈ ವಿಷಯದಲ್ಲಿ ಸರ್ಕಾರ ರಮೇಶ ಜಾರಕಿಹೊಳಿ ಅವರನ್ನು ರಕ್ಷಿಸಲು ಮುಂದಾಗಿದೆ ಎಂದು ದೂರಿರುವುದು ಈ ರೀತಿಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಸಾಲದ ಬಾಕಿ ಮತ್ತು ಆರ್ಥಿಕ ದಿವಾಳಿ ಘೋಷಣೆಗೆ ಸರ್ಕಾರದ ಮೇಲೆ ಒತ್ತಡದ ತಂತ್ರದ “ಅಸ್ತ್ರ’ ದೊಂದಿಗೆ ರಾಜ್ಯಮಟ್ಟದ ನಾಯಕರು ಮತ್ತೂಂದು ಹೋರಾಟಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ನಾಯಕರ ಆರೋಪದ ಪ್ರಕಾರ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ವಿವಿಧ ಸಹಕಾರಿ ಸಂಸ್ಥೆಗಳಿಂದ ಪಡೆದಿರುವ 360 ಕೋಟಿ ರೂ. ಸಾಲವನ್ನು ಇದುವರೆಗೆ ಪಾವತಿ ಮಾಡಿಲ್ಲ. ಇದಲ್ಲದೆ ವಿವಿಧ ಸಹಕಾರಿ ಸೊಸೈಟಿಗಳಿಂದ ಕೋಟ್ಯಂತರ ರೂ. ಸಾಲ ಪಡೆದಿದೆ. ಕಳೆದ 10 ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಸುಮಾರು 50 ಕೋಟಿ ರೂ.ಬಾಕಿ ಹಣ ಪಾವತಿ ಮಾಡಬೇಕಿದೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ರಮೇಶ ಜಾರಕಿಹೊಳಿ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿಯಲ್ಲಿ ಇಲ್ಲ. ಈ ರೀತಿಯ ವರದಿಗಳು ನಿರಾಧಾರ. ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಇನ್ನೂ 50 ಕೋಟಿ ರೂ ಬಾಕಿ ಬರಬೇಕಿದೆ. ಈ ವಿಷಯ ನ್ಯಾಯಾಲಯದಲ್ಲಿದೆ. ಆರ್ಥಿಕ ದಿವಾಳಿ ವಿಷಯ ನಿಜವೇ, ರಾಜಕೀಯ ಉದ್ದೇಶವೇ ಎಂಬುದರ ಬಗ್ಗೆ ಇಲಾಖೆ ಪರಿಶೀಲನೆ ಮಾಡಬೇಕು. ●
ಸಿದಗೌಡ ಮೋದಗಿ, ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ
ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ ಮೇಲೆ ಅದನ್ನು ಪಾವತಿ ಮಾಡದೇ ಇದ್ದರೆ ಅದು ಮಹಾ ವಂಚನೆ. ಈ ವಿಷಯದಲ್ಲಿ ಮೌನವಾಗಿರುವ ಸರಕಾರ ರಾಜಕೀಯವಾಗಿ ರಮೇಶ ಜಾರಕಿಹೊಳಿ ಅವರಿಗೆ ಅನುಕೂಲ ಮಾಡಿಕೊಡುತ್ತಿದೆ. ಕಾಂಗ್ರೆಸ್ ಆರೋಪ ಸುಳ್ಳು ಎಂದಾದರೆ ಅದನ್ನು ದಾಖಲೆ ಸಮೇತ ಸಾಬೀತುಮಾಡಬೇಕು. ಇಲ್ಲದಿದ್ದರೆ ಸರಕಾರ ಸಕ್ಕರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು.
● ಅಶೋಕ ಪೂಜಾರಿ, ಕಾಂಗ್ರೆಸ್ ಮುಖಂಡ