Advertisement

Election Commission ವಿರುದ್ಧ ಕಾಂಗ್ರೆಸ್‌ ಸಮರ

01:12 AM Nov 02, 2024 | Team Udayavani |

ಹೊಸದಿಲ್ಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪರವಾಗಿ ಫ‌ಲಿತಾಂಶ ಬರದ ಕಾರಣ ಚುನಾವಣ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ವೃಥಾ ಆರೋಪ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದ ಚುನಾವಣ ಆಯೋಗದ ವಿರುದ್ಧ ಕಾಂಗ್ರೆಸ್‌ ಈಗ ಸಮರ ಸಾರಿದೆ. ಆಯೋಗ ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಳ್ಳುವ ಮೂಲಕ ತಟಸ್ಥ ನೀತಿ, ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, “ಈ ಹೇಳಿಕೆಯನ್ನು ಆಯೋಗವು ತೆಗೆದುಹಾಕದೆ ಇದ್ದರೆ, ಅದನ್ನು ತೆಗೆದುಹಾಕುವಂತೆ ನಾವೇ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

Advertisement

ಹರಿಯಾಣ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೀಡಿದ್ದ ದೂರಿಗೆ ಉತ್ತರಿಸುವ ವೇಳೆ ಆಯೋಗವು, “ಕಾಂಗ್ರೆಸ್‌ನ ಆರೋಪಗಳೆಲ್ಲ ಆಧಾರರಹಿತ. ತನ್ನ ಪರ ಫ‌ಲಿತಾಂಶ ಬಾರದ ಕಾರಣ ಈ ರೀತಿ ಆರೋಪ ಮಾಡುತ್ತಿದೆ’ ಎಂದು ಹೇಳಿತ್ತು. ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್‌ ಶುಕ್ರವಾರ ಆಯೋಗಕ್ಕೆ ಖಾರವಾಗಿ ಪತ್ರ ಬರೆದಿದೆ. ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಪತ್ರಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಜೈರಾಮ್‌ ರಮೇಶ್‌, ಕೆ.ಸಿ. ವೇಣುಗೋಪಾಲ್‌, ಅಶೋಕ್‌ ಗೆಹ್ಲೋಟ್‌, ಭೂಪಿಂದರ್‌ ಹೂಡಾ, ಅಜಯ್‌ ಮಾಕನ್‌, ಅಭಿಷೇಕ್‌ ಮನು ಸಿಂಘವಿ, ಉದಯಭಾನ್‌, ಪ್ರತಾಪ್‌ ಬಾಜ್ವಾ, ಪವನ್‌ ಖೇರಾ ಸಹಿ ಹಾಕಿದ್ದಾರೆ.

“ನೀವು ನೀಡಿರುವ ಉತ್ತರವನ್ನು ನಾವು ಎಚ್ಚರಿಕೆಯಿಂದ ಗಮ ನಿಸಿದ್ದೇವೆ. ನೀವು ನೀಡಿರುವ ಪ್ರತಿಕ್ರಿಯೆಯಿಂದ ಯಾವುದೇ ಅಚ್ಚರಿಯಾಗಿಲ್ಲ. ನಿಮ್ಮ ವಿರುದ್ಧ ಬಂದಿರುವ ದೂರುಗಳಿಗೆ ಸಂಬಂಧಿಸಿ ನಿಮಗೆ ನೀವೇ ಕ್ಲೀನ್‌ ಚಿಟ್‌ ಕೊಟ್ಟುಕೊಂಡಿದ್ದೀರಿ.

ಇವಿಎಂಗಳಲ್ಲಿ ಬ್ಯಾಟರಿ ಸಮಸ್ಯೆ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವ ಬದಲು ಗೊಂದಲವನ್ನು ಮತ್ತಷ್ಟು ಹೆಚ್ಚು ಮಾಡಿದ್ದೀರಿ. ಮತಯಂತ್ರದ ಬಗ್ಗೆ ಕೇಳಲಾಗಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬ ಹಿಂದಿನ ಉತ್ತರವನ್ನೇ ನೀಡಿದ್ದೀರಿ’ ಎಂದು ಕಾಂಗ್ರೆಸ್‌ ಹೇಳಿದೆ.

ತೀರ್ಪು ಬರೆಯುವ ನ್ಯಾಯಮೂರ್ತಿಗಳು ಯಾವತ್ತೂ ದೂರುದಾರರನ್ನು ಹೀಯಾಳಿಸುವ ಅಥವಾ ಅವರ ವಿರುದ್ಧ ದಾಳಿ ನಡೆಸುವ ಕೆಲಸ ಮಾಡುವುದಿಲ್ಲ. ಆದರೆ ನಿಷ್ಪಕ್ಷವಾಗಿರಬೇಕಾದ ಚುನಾವಣ ಆಯೋಗ ನಮ್ಮ ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದೆ. ಹೀಗೆ ಮಾಡುವಾಗ ನಮಗೆ ನ್ಯಾಯಾಲಯದ ಮೊರೆ ಹೋಗದೇ ಬೇರೆ ಆಯ್ಕೆಗಳಿರುವುದಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

Advertisement

ಉತ್ತರ ನೀಡುವಾಗ ಚುನಾವಣ ಆಯೋಗ ಬಳಕೆ ಮಾಡಿರುವ ಭಾಷೆ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಮಾಡಿರುವ ಆರೋಪಗಳನ್ನು ಸಹಿಸಲಾಗುವುದಿಲ್ಲ. ಇದರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಮ್ಮ ದೂರುಗಳನ್ನು ಸ್ವೀಕರಿಸಲು ಚುನಾವಣ ಆಯೋಗ ಸಿದ್ಧವಾಗಿಲ್ಲದಿದ್ದರೆ ನಾವು ಉನ್ನತ ಕೋರ್ಟ್‌ಗಳ ಮೊರೆ ಹೋಗುತ್ತೇವೆ. ಆಯೋಗ ನೀಡುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುತ್ತಿದ್ದರೆ ಅದೊಂದು ತಟಸ್ಥ ಸಂಸ್ಥೆ ಹೌದೇ ಎಂಬ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next