Advertisement

ಕಾಂಗ್ರೆಸ್ಸಿಗರ ಆಮಿಷಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿ

12:42 PM Mar 24, 2017 | |

ಮೈಸೂರು: ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ ಪಕ್ಷದವರು ಒಡ್ಡುತ್ತಿರುವ ಆಸೆ-ಆಮಿಷಗಳಿಗೆ ಬಿಜೆಪಿ ಪರವುಳ್ಳ ಮತದಾರರು ಬಲಿಯಾಗದಂತೆ ಪಕ್ಷದ ಕಾರ್ಯಕರ್ತರು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಹಲ್ಲರೆ, ಹುರ, ದೇವರಾಯಶೆಟ್ಟಿಪುರ, ಹಾಡ್ಯ, ಹಡಿಯಾಲ ಮೊದಲಾದ ಗ್ರಾಮಗಳಲ್ಲಿ ಬೂತ್‌ ಮಟ್ಟದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಅವರು, ಪಕ್ಷದ ಸಂಘಟನೆ ಜತೆಗೆ ಮತದಾರರ ಮನವೊಲಿಸುವ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದಿದ್ದರೂ ತಾವು ಮಹಾನ್‌ ಸಾಧನೆ ಮಾಡಿದ್ದೇವೆಂದು ಬಿಂಬಿಸಿಕೊಳ್ಳುತ್ತಾ ಮತದಾರರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ಸಿಗರ ಈ ಬಣ್ಣದ ಮಾತುಗಳಿಗೆ ಕ್ಷೇತ್ರದ ಜನತೆ ಅದರಲ್ಲೂ ಬಿಜೆಪಿ ಪರವುಳ್ಳ ಮತದಾರರು ಬಲಿಯಾಗದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಯಕರ್ತರು, ಸ್ಥಳೀಯ ಮುಖಂಡರು ನಿರಂತರವಾಗಿ ಮತದಾರರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು, ತಪ್ಪದೇ ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವೊಲಿಸಬೇಕು ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಶ್ರೀನಿವಾಸಪ್ರಸಾದ್‌ 40 ವರ್ಷಗಳಿಂದ ರಾಜಕಾರಣ ಮಾಡಿದ್ದು, ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಂದು ಬೂತ್‌ಗಳಲ್ಲೂ ಬಿಜೆಪಿಗೆ ಬಹುಮತ ಬರುವಂತೆ ಶ್ರಮಿಸಬೇಕು ಎಂದರು.

Advertisement

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಬೂತ್‌ ಮಟ್ಟದ ಸಭೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಕಾರ್ಯಕರ್ತರ ನಡುವಿನ ಸಣ್ಣಪುಟ್ಟ ಅಸಮಾಧಾನ ಬಗೆಹರಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿಯಬೇಕು ಎಂದು ತಿಳಿಸಿದರು.

ಕುಟುಂಬ ಒಡೆಯುವ ಕೆಲಸ
ಉಪ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಸಿದ್ದರಾಮಯ್ಯ ಆ್ಯಂಡ್‌ ಕಂಪನಿ ಸ್ಥಳೀಯ ಮುಖಂಡರ ಕುಟುಂಬಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದು ಆರೋಪಿಸಿದರು. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಎಂ.ಮಹದೇವು ಅವರ ಪತ್ನಿಯನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ, ಮಹದೇವು ಅವರ ಅಳಿಯ ಜಯದೇವ್‌ ಬಿಜೆಪಿಯಲ್ಲಿದ್ದು, ನಮ್ಮೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ಸಿಗರು ಈ ರೀತಿ ಕುಟುಂಬಗಳ ಒಳಗೆ ಒಡಕು ಉಂಟುಮಾಡಿ ಚುನಾವಣೆಯಲ್ಲಿ ಲಾಭಪಡೆಯಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next