ನವದೆಹಲಿ: ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಚುನಾವಣೆಯತ್ತ ಕೇಂದ್ರ ಸರ್ಕಾರ ಒಲವು ತೋರುತ್ತಿದ್ದಂತೆ, ಕಾಂಗ್ರೆಸ್ ಮಹಾಘಟಬಂಧನ್‌ನ ಮೊರೆ ಹೋಗಲು ನಿರ್ಧರಿಸಿದೆ.
ಸ್ವಂತ ಅಭ್ಯರ್ಥಿಯನ್ನು ನಿಲ್ಲಿಸುವಷ್ಟು ಸಂಖ್ಯಾಬಲವನ್ನು ಕಾಂಗ್ರೆಸ್ ಹೊಂದಿದೆ. ಇದರ ಹೊರತಾಗಿಯೂ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ 2019ರ ಲೋಕಸಭಾ ಚುನಾವಣೆಗೆ ಮಹಾಮೈತ್ರಿ ವೇದಿಕೆ ಸಿದ್ಧಪಡಿಸುತ್ತಿರುವ ಕಾಂಗ್ರೆಸ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೂಚಿಸುವ ಅಭ್ಯರ್ಥಿಗೆ ಬೆಂಬಲ ನೀಡಲಿದೆ.
2012ರಿಂದ ಉಪಸಭಾಪತಿಯಾಗಿರುವ ಕಾಂಗ್ರೆಸ್‌ನ ಪಿ.ಜೆ.ಕುರಿಯನ್ (77) ಜು.1ರಂದು ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ಟಿಎಂಸಿಯ ಸುಖೇಂದು ಶೇಖರ್ ರಾಯ್ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಾಗುವ ಸಾಧ್ಯತೆಯಿದೆ. ಉಪಸಭಾಪತಿ ಸ್ಥಾನಕ್ಕೆ ನಡೆ ಯಲಿರುವ ಈ ಚುನಾವಣೆ ಮಹಾ ಮೈತ್ರಿಯ ಒಗ್ಗಟ್ಟಿನ ಪರೀಕ್ಷೆ ಆಗಲಿದೆ.
ಪ್ರತಿಪಕ್ಷಗಳ ಅಭ್ಯರ್ಥಿಯ ಗೆಲುವಿಗೆ ಬಿಜೆಡಿ ಹಾಗೂ ಟಿಆರ್‌ಎಸ್ ಬೆಂಬಲ ಬೇಕೇಬೇಕು. ಅವೆರಡೂ ಪಕ್ಷಗಳು ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಅಭ್ಯರ್ಥಿಯತ್ತ ಒಲವು ಹೊಂದಿವೆ. ಬಿಜೆಪಿಯೇತರ ಅಭ್ಯರ್ಥಿ ಗೆಲ್ಲಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, 245 ಸದಸ್ಯಬಲದ ರಾಜ್ಯಸಭೆಯಲ್ಲಿ 51 ಸೀಟುಗಳನ್ನು ಹೊಂದಿದ್ದರೂ ಟಿಎಂಸಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದೆ. ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದೇ ಹೆಚ್ಚು. 26 ವರ್ಷಗಳ ಬಳಿಕ ಇದೀಗ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಜು.18ರಂದು ಆರಂಭವಾಗಲಿರುವ ಮುಂಗಾರು ಅಧಿವೇಶನದ ವೇಳೆ ಹೊಸ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದೇ ವೇಳೆ ಕೇರಳದಲ್ಲಿ ಕುರಿಯನ್ ಹೊಂದಿರುವ ರಾಜ್ಯ ಸಭಾ ಸ್ಥಾನವನ್ನು ವಿರೋಧದ ಮಧ್ಯೆ ಯೂ ಮಿತ್ರಪಕ್ಷ ಕಾಂಗ್ರೆಸ್ (ಎಂ)ಗೆ ಬಿಟ್ಟು ಕೊಡಲಾಗುತ್ತಿದೆ.