ಗಂಗಾವತಿ: ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಅವರಿಂದಾಗಿ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಕ್ಬಾಲ್ ಅನ್ಸಾರಿಗೆ ಸೋಲಾಗಿದ್ದು ನಗರಸಭೆ ಕೆಲ ಸದಸ್ಯರು ಪಕ್ಷದ ನಾಯಕರು ಕೆಆರ್‌ಪಿ ಪಕ್ಷ ಸೇರುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ವಿಠಲಾಪೂರ ಯಮನಪ್ಪ, ಮನೋಹರಸ್ವಾಮಿ, ಅಮರೇಶ ಗೋನಾಳ,ಜುಬೇರ್ ಹಾಗೂ ನ್ಯಾಯವಾದಿ ಹುಸೇನಪ್ಪ ಹಂಚಿನಾಳ ಆರೋಪಿಸಿದರು.
ಅವರು ಅನ್ಸಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಮೀದ್ ಮನಿಯಾರ್ ಕಾಂಗ್ರೆಸ್ ತೊರೆಯುವುದಾದರೆ ಇಕ್ಬಾಲ್ ಅನ್ಸಾರಿ ಬಗ್ಗೆ ಆರೋಪಗಳನ್ನು ಮಾಡದೇ ಪಕ್ಷ ಬಿಡಬೇಕು. ಅನ್ಸಾರಿಯವರ ವೈಯಕ್ತಿಕ ಬದುಕಿನ ಕುರಿತು ಆಕ್ಷೇಪ ಮಾಡದೇ ಹೊರಗೆ ಹೋಗಬೇಕು. ಇವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರಿಯಾದ ಕೆಲಸ ಮಾಡಲಿಲ್ಲ. ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದರಿಂದ ಬೇಸರಗೊಂಡಿದ್ದರಿಂದ ಕಾಂಗ್ರೆಸ್‌ಗೆ ಸೋಲಾಗಿದೆ. ಕಾಂಗ್ರೆಸ್ ಸರಕಾರ ರಚನೆಯಾದ ನಂತರ ಶಾಮೀದ್ ಮನಿಯಾರ್ ವರ್ಗಾವಣೆ ದಂಧೆ ನಡೆಸಲು ಯತ್ನಿಸಿದಾಗ ಇಕ್ಬಾಲ್ ಅನ್ಸಾರಿ ಇದಕ್ಕೆ ಆಕ್ಷೇಪವೆತ್ತಿದ್ದರಿಂದ ಕೋಪಗೊಂಡು ಅನ್ಸಾರಿ ವಿರುದ್ಧ ಅರಸಿನಕೇರಿ ಹನುಮಂತಪ್ಪ ಇವರನ್ನು ಎತ್ತಿಕಟ್ಟಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸಲು ಗಂಗಾವತಿಯಲ್ಲಿ ಸುದ್ದಿಗೋಷ್ಠಿಯ ನಾಟಕವಾಡಿದ್ದಾರೆ.
ಅರಸಿನಕೇರಿ ಹನುಮಂತಪ್ಪ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯಲು ಸಚಿವ ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ ಸೇರಿ ಕಾಂಗ್ರೆಸ್ ನ ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡುವುದನ್ನು ಬಿಟ್ಟು ಪಕ್ಷಕ್ಕೆ ಚುನಾವಣೆಯಲ್ಲಿ ದ್ರೋಹ ಮಾಡಿದ ಶಾಮೀದ್ ಮನಿಯಾರ್ ಅವರ ಮುಖಂಡತ್ವದಲ್ಲಿ ಸುದ್ದಿಗೋಷ್ಠಿ ಮಾಡಿ ಅನ್ಸಾರಿ ತೇಜೋವಧೆ ಮಾಡುವುದು ಸರಿಯಲ್ಲ. ಇಕ್ಬಾಲ್ ಅನ್ಸಾರಿಯವರು ಎರಡು ಭಾರಿ ಸಚಿವರಾಗಿ ಗಂಗಾವತಿ ಸೇರಿ ಇಡೀ ಕ್ಷೇತ್ರದಲ್ಲಿ ಮಾದರಿಯ ಅಭಿವೃದ್ಧಿ ಮಾಡಿದ್ದಾರೆ. ಈ ಭಾರಿಯ ಹಣ ಬಲ ಮತ್ತು ಕಾಂಗ್ರೆಸ್ ಹಿತಶತ್ರುಗಳಿಂದಾಗಿ ಅನ್ಸಾರಿಗೆ ಸೋಲಾಗಿದೆ. ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಶಾಮೀದ್ ಮನಿಯಾರ್ ಹಾಗೂ ಇತರರನ್ನು ವಜಾ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ. ಅನ್ಸಾರಿ ಯಾರನ್ನು ವಜಾ ಮಾಡಿಲ್ಲ ಬದಲಿಗೆ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಹಿತ ರಕ್ಷಣೆ ಮಾಡುವಲ್ಲಿ ಅನ್ಸಾರಿ ಮುಂದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫಕೀರಪ್ಪ ಎಮ್ಮಿ, ವಿಠಲಾಪೂರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ಗದ್ವಾಲ್ ಕಾಶಿಂಸಾಬ, ಗಾಯಕವಾಡ, ಪರಮೇಶಿ ಬಡಿಗೇರ್, ಸನ್ನಿಕ್, ರಾಮಕೃಷ್ಣ, ಮನೋಹರಸ್ವಾಮಿ, ಅಮರೇಶ ಗೋನಾಳ,ಜುಬೇರ್ ಹಾಗೂ ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಮಾರೇಶ, ಗುಂಜಳ್ಳಿ ರಾಚಪ್ಪ, ಆಯೂಬ್,ಕೊತ್ವಾಲ್ ನಾಗರಾಜ,ಆನಂದ, ಜವಣಗೇರಿ ಹುಸೇನಸಾಬ. ಉಮರ್,ಬಸವರಾಜ ಚಿಲಕಮುಕ್ಕಿ, ಮಲ್ಲಿಕಾರ್ಜುನ ಸೇರಿ ಕಾಂಗ್ರೆಸ್ ಮುಖಂಡರಿದ್ದರು.
—-ಗಂಗಾವತಿಯಲ್ಲಿ ಕಾಂಗ್ರೆಸ್ ಸೋಲಿಗೆ ಶಾಮೀದ್ ಮನಿಯಾರ್ ಕಾರಣರಾಗಿದ್ದು ಇದೀಗ ಉಂಡುಹೋದ ಕೊಂಡು ಹೋದ ರೀತಿಯಲ್ಲಿ ಮಾತನಾಡಿ, ಇಕ್ಬಾಲ್ ಅನ್ಸಾರಿ ತೇಜೋವಧೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ನಡೆಸಲು ಮುಂದಾದ ಸಂದರ್ಭದಲ್ಲಿ ಅನ್ಸಾರಿ ಆಕ್ಷೇಪವೆತ್ತಿದ್ದರಿಂದ ಅವರಿಂದ ದೂರವಾಗಿ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಅರಸಿನಕೇರಿ ಹನುಮಂತಪ್ಪ ಇವರನ್ನು ಮುಂದಿಟ್ಟುಕೊಂಡು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು ಕೂಡಲೇ ಮನಿಯಾರ್ ಹಾಗೂ ಸುದ್ದಿಗೋಷ್ಠಿ ನಡೆಸಿದವರನ್ನು ಕೂಡಲೇ ವಜಾ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಸಿ ಅಧ್ಯಕ್ಷರು ಕೋರಲಾಗುತ್ತದೆ.
-ಜುಬೇರ್, ಹುಸೇನಪ್ಪ ಹಂಚಿನಾಳ ಕಾಂಗ್ರೆಸ್ ಮುಖಂಡ
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕರ್ತರಿಂದ ತಳ್ಳಾಟ ನೂಕಾಟ
ಗಂಗಾವತಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಇವರ ವಿರುದ್ಧ ಅನ್ಸಾರಿ ನಿವಾಸದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವರ್ಗಾವಣೆ ದಂಧೆ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಕುಂಠಿತ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ನ್ಯಾಯವಾದಿ ಹುಸೇನಪ್ಪ ಹಂಚಿನಾಳ ಉತ್ತರಿಸುವಾಗ ಕೆಲ ಮುಖಂಡರು ಆಕ್ಷೇಪವೆತ್ತಿ ಗೋಷ್ಠಿ ನಡೆಯುವ ಸ್ಥಳಕ್ಕೆ ನುಗ್ಗಿದ್ದರಿಂದ ಕಾರ್ಯಕರ್ತರು ಮತ್ತು ಮುಖಂಡ ಮಧ್ಯೆ ತಳ್ಳಾಟ ನೂಕಾಟ ಜರುಗಿ ಸುದ್ದಿಗೋಷ್ಠಿ ಅರ್ಧಕ್ಕೆ ನಿಂತ ಪ್ರಸಂಗ ಜರುಗಿತು.