Advertisement

“ಕೈ’-ತೆನೆಗೆ ಸಮಾಧಾನ ತಂದ ಫ‌ಲಿತಾಂಶ

12:18 AM Jun 01, 2019 | Lakshmi GovindaRaj |

ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ 1,361 ಸ್ಥಾನ ಗಳಿಗೆ ನಡೆ ದಿದ್ದ ಚುನಾವಣಾ ಫ‌ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸಿಕೊಂಡಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Advertisement

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆದ 61 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 7 ನಗರಸಭೆ, 30 ಪುರಸಭೆ ಹಾಗೂ 19 ಪಟ್ಟಣ ಪಂಚಾಯಿತಿಗಳ ಫಲಿತಾಂಶ ಹೊರ ಬಿದ್ದಿದೆ. ಪುರಸಭೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಾರಮ್ಯ ಮೆರೆದಿದ್ದಾರೆ.

ಸಚಿವ ಮಹೇಶ್‌ಗೆ ಸ್ವಕ್ಷೇತ್ರದಲ್ಲೇ ಮುಖಭಂಗ
ಮೈಸೂರು: ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್‌ ಅವರ ಸ್ವಕ್ಷೇತ್ರ, ಕೆ.ಆರ್‌.ನಗರ ಪುರಸಭೆಯಲ್ಲಿ ಜೆಡಿಎಸ್‌ ಸೋಲು ಅನುಭವಿಸಿದ್ದು, ಸಚಿವರಿಗೆ ಮುಖಭಂಗವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾ.ರಾ.ಮಹೇಶ್‌ಗೆ ಎದುರಾಳಿಯಾಗಿ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್‌ನ ಜಿಪಂ ಸದಸ್ಯ ಡಿ.ರವಿಶಂಕರ್‌ ಮತ್ತು ಅವರ ತಂದೆ ಕೆಪಿಸಿಸಿ ಸದಸ್ಯ ದೊಡ್ಡ ಸ್ವಾಮೇಗೌಡ ಅವರ ಜೋಡಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಪಡೆಯುವಂತೆ ನೋಡಿಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಇದೇ ತಾಲೂಕಿನವರಾಗಿದ್ದರೂ ಪುರಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫ‌ಲರಾಗಿಲ್ಲ.

ಶಿಡ್ಲಘಟ್ಟ ನಗರಸಭೆಗೆ ಆನೆ ಪ್ರವೇಶ
ಶಿಡ್ಲಘಟ್ಟ: ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ತೆರೆದು, ರಾಜಕೀಯವಾಗಿ ಗಮನ ಸೆಳೆದಿದೆ. ಶಿಡ್ಲಘಟ್ಟ ನಗರಸಭೆಗೆ ನಡೆದ ಚುನಾವಣೆಯಲ್ಲಿ 12ನೇ ವಾರ್ಡ್‌ನಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಮೌಲ ಅವರು 594 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮುಸಾವರ ವಿರುದ್ದ 247 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಾರ್ಡ್‌ ನಂಬರ್‌ 29ರಲ್ಲಿ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಜಬೀವುಲ್ಲಾ ಅವರು 487 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಮೀರ್‌ ಹುಸೇನ್‌ ಖಾನ್‌ ಅವರನ್ನು 19 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ಈಗ ಪುರಸಭೆ ಸದಸ್ಯೆ
ಮಾಲೂರು: ಮಾಲೂರು ಪುರಸಭೆಗೆ ನಡೆದ ಚುನಾವಣೆಯಲ್ಲಿ 19 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗೆಲುವು ಸಾಧಿಸಿದ್ದಾಳೆ. ಪಟ್ಟಣದ ವಾರ್ಡ್‌ ಸಂಖ್ಯೆ 27ರ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪಿ.ಸುಮಿತ್ರಾ, 393 ಮತಗಳನ್ನು ಪಡೆದು, ಗೆಲುವು ಸಾಧಿಸಿದ್ದಾಳೆ. ಈಕೆ ಮಾಲೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ.

Advertisement

ವಿಜೇತ ಅಭ್ಯರ್ಥಿ ಜೇಬಿಗೆ ಕತ್ತರಿ
ತಿ.ನರಸೀಪುರ: ಪಟ್ಟಣದ ತಾಲೂಕು ಕಚೇರಿ ಮಿನಿ ವಿಧಾನಸೌದದ ಆವರಣದಲ್ಲಿ ಬನ್ನೂರು ಪುರಸಭೆಯ 3ನೇ ವಾರ್ಡಿನ ವಿಜೇತ ಅಭ್ಯರ್ಥಿ ಕೃಷ್ಣೇಗೌಡರ ಜೇಬಿಗೆ ಕತ್ತರಿ ಹಾಕಿರುವ ಜೇಬುಗಳ್ಳರು, 58 ಸಾವಿರ ರೂ.ಗಳನ್ನು ಎಗರಿಸಿದ್ದಾರೆ. ಫ‌ಲಿತಾಂಶ ಹೊರ ಬೀಳುತ್ತಿದ್ದಂತೆ ವಿಜಯೋತ್ಸವ ಸಂಭ್ರಮದಲ್ಲಿದ್ದ ಕೃಷ್ಣೇಗೌಡರನ್ನು ಹೊತ್ತು ಸಂಭ್ರಮಿಸುವ ವೇಳೆ ಜೇಬಿಗೆ ಕತ್ತರಿ ಬಿದ್ದಿದೆ.

ಕೆ.ಆರ್‌.ಪೇಟೆ ಅತಂತ್ರ: ಕೆ.ಆರ್‌.ಪೇಟೆ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, 23 ಸ್ಥಾನಗಳ ಪೈಕಿ ಜೆಡಿಎಸ್‌ 11, ಕಾಂಗ್ರೆಸ್‌ 10, ಬಿಜೆಪಿ 1, ಪಕ್ಷೇತರ 1 ಸ್ಥಾನಗಳಲ್ಲಿ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next