Advertisement

ಕಾಂಗ್ರೆಸ್‌, ಜೆಡಿಎಸ್‌ನಿಂದ ಕೋಮು ಗಲಭೆಗೆ ಪ್ರಚೋದನೆ

09:46 PM Dec 25, 2019 | Team Udayavani |

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವೊಬ್ಬ ಮುಸ್ಲಿಮರು, ಯಾವುದೇ ಅಲ್ಪಸಂಖ್ಯಾತರಿಗೆ ತೊಂದರೆಯಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಮತ್ತು ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಕಾಲದಿಂದಲೂ ಆಗುತ್ತಿರುವ ಬೆಳವಣಿಗೆಗಳು ಇಂದಿರಾಗಾಂಧಿ ಹಾಗೂ ಮನೋಮೋಹನ್‌ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ವ್ಯಕ್ತಪಡಿಸಿದ ಅಭಿಪ್ರಾಯಗಳಿಗನುಗುಣವಾಗಿಯೇ ಎನ್‌ಡಿಎ ಸರ್ಕಾರವು 2019ರ ಚುನಾವಣೆಯಲ್ಲಿನ ಪ್ರಣಾಳಿಕೆಯ ಪ್ರಕಾರವೇ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದೆ ಎಂದು ಹೇಳಿದರು.

Advertisement

ವಾಸ್ತವಾಂಶ ಮರೆ ಮಾಚಿದ ಕಾಂಗ್ರೆಸ್‌, ಜೆಡಿಎಸ್‌:  ಪೌರತ್ವ ಕಾಯ್ದೆ ತಿದ್ದುಪಡಿಯ ವಾಸ್ತವಾಂಶವನ್ನು ಮರೆಮಾಚಿ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡಲು ಹೊರಟಿರುವುದು ಸರಿಯಲ್ಲ. ಈ ಎರಡೂ ಪಕ್ಷಗಳ ಮುಖಂಡರು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೌರತ್ವ ಕಾಯಿದೆ ತಿದ್ದುಪಡಿಯಲ್ಲಿನ ಅಂಶಗಳನು ಮನದಟ್ಟು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜಕಾರಣ ಮಾಡಲು ಬೇರೆ ವಿಷಯಗಳಿವೆ. ಅದನ್ನು ಮಾಡದೇ ಈ ರೀತಿ ಕೋಮು ಪ್ರಚೋದನೆ ಮಾಡಿ ರಾಜಕೀಯ ಮಾಡುವುದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆ ಗೌರವಿಸಿ: ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವವರು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆ ಕಾಯ್ದೆ ರೂಪ ಪಡೆದ ನಂತರ ಆ ಕಾಯ್ದೆಯನ್ನು ಗೌರವಿಸಬೇಕು. ಸಂಸತ್ತು ಅಂಗೀಕರಿಸಿದ ಕಾಯ್ದೆ ವಿರೋಧಿಸುವುದು ಸಂವಿಧಾನವನ್ನು ವಿರೋಧಿಸಿದಂತೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಕೂಡ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಆದರೂ ವಿಪಕ್ಷಗಳು ಕಾಯ್ದೆಯನ್ನು ವಿರೋಧಿಸಿ ಕೋಮು ಪ್ರಚೋದನೆ ನಡೆಸಿ ದೇಶದಲ್ಲಿ ಶಾಂತಿ,ಸುವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿರುವುದು ಸರಿಯೇ ಎಂಬುದನ್ನು ದೇಶದ ಜನರೇ ತಿರ್ಮಾನ ಮಾಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ದುರುಪಯೋಗ: ಕಾಂಗ್ರೆಸ್‌ ಪಕ್ಷದ ಮುಖಂಡರು 1971ರಲ್ಲಿ ಮತ್ತು 2003 ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯಪರವಾಗಿ ಮಾತನಾಡಿದ್ದರು. ಈಗ ಈಗ ನರೇಂದ್ರಮೋದಿ ನೇತೃತ್ವದ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಜಾರಿ ಮಾಡುತ್ತಿದೆ. ತಮ್ಮ ಅಧಿಕಾರವಧಿಯಲ್ಲಿ ಕಾಯ್ದೆ ಜಾರಿಯಾಗಲಿಲ್ಲವಲ್ಲ ಎಂಬ ಒಂದೇ ಕಾರಣಕ್ಕೆ ಸಾರ್ವಜನಿಕರಿರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಮಾಡುತ್ತಿವೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ದುರುಪಯೋಗ ಮಡಿಕೊಳ್ಳುತ್ತಿದೆ ಎಂದು ಆಪಾದಿಸಿದರು. ಕಾಯ್ದೆಯನ್ನು ವಿರೋಧಿಸುತ್ತಿರುವವರು ಈ ಕಾಯ್ದೆಯಲ್ಲಿನ ನಕಾರಾತ್ಮಕ ಅಂಶಗಳೇನು ಎಂಬುದನ್ನು ತಿಳಿಸಲಿ ಎಂದೂ ಸವಾಲು ಹಾಕಿದರು.

ವಿಪಕ್ಷಗಳಿಗೆ ತರಾಟೆ: ದೇಶದಲ್ಲಿ ಪ್ರತಿಭಟಿಸುವ ಹಕ್ಕು ವಿರೋಧ ಪಕ್ಷಗಳಿದೆ. ಆದರೆ ವಿನಾ ಕಾರಣ, ಕಾಯ್ದೆಯಲ್ಲಿನ ನಕಾರಾತ್ಮಕ ಅಂಶಗಳ ಬಗ್ಗೆ ತಿಳಿಸದೇ ರಾಜಕೀಯ ಕಾರಣಳಿಗಾಗಿ ವಿರೋಧಿಸುವುದು, ಪ್ರತಿಭಟನೆಗೆ ಪ್ರಚೋದನೆ ನೀಡುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವುದು ಪ್ರಜಾಪ್ರಭುತ್ವವನ್ನು ಗೌರವಿಸುವ ಲಕ್ಷಣವೇ ಎಂದು ತರಾಟೆಗೆ ತೆಗದುಕೊಂಡರು.

Advertisement

ಗಲಭೆಗೆ ಪ್ರಚೋದನೆ: ಮಂಗಳೂರಿನಲ್ಲಿ ನಡೆದಿರುವ ಗಲಭೆ ಕಾಂಗ್ರೆಸ್‌ ಪ್ರಚೋದನೆಯಿಂದ ನಡೆದಿದೆ. ಮಾಜಿ ಯು.ಟಿ. ಖಾದರ್‌ ಅವರ ಪ್ರಚೋದಾನಾತ್ಮಕ ಹೇಳಿಕೆಯೇ ಮಂಗಳೂರು ಗಲಭೆಗೆ ಕಾರಣ. ಡಿ.17ರಂದು ಪೊಲೀಸ್‌ ಗುಪ್ತದಳದಿಂದ ವರದಿ ಬಂದಿದ್ದು, ಕೇರಳದಿಂದ ಜನರು ಭಯೋತ್ಪಾದಕ ಸಂಘಟನೆ ಜೊತೆ ಮಂಗಳೂರು ಮತ್ತು ಕೆಲ ಭಾಗಗಳಲ್ಲಿ ಗಲಾಟೆ ಮಾಡಿಸಿರುವ ಕುರಿತು ಮಾಹಿತಿ ಬಂದಿದೆ. ಅದರಂತೆ ಕೇರಳದಿಂದ ಬಂದವರು ಮಂಗಳೂರಲ್ಲಿ ಗಲಾಟೆ ಮಾಡಿ ಇಬ್ಬರ ಸಾವಿಗೆ ಕಾರಣಕರ್ತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನೇರ ಹೊಣೆ ಎಂದು ಆರೋಪಿಸಿದರು.

ಸಾವಿನಲ್ಲೂ ರಾಜಕೀಯ: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಸಾವಿನಲ್ಲೂ ರಾಜಕೀಯ ಮಾಡುವ ಪ್ರಯತ್ನ ನಡೆಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಮಂಗಳೂರು ಗಲಭೆಯು ಪೂರ್ವ ನಿಯೋಜಿತ ಎಂಬಸಾಕ್ಷಾಧಾರಗಳು ಸಿಕ್ಕಿವೆ ಎಂದರು.

ಸಿಎಎ ಬಗ್ಗೆ ಜನರಿಗೆ ಅರಿವು: ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ(ಸಿಎಎ) ಬಗ್ಗೆ ಜ.1 ರಿಂದ 15 ರವರೆಗೂ ಜನಾಂದೋಲನ ಮಾದರಿಯಲ್ಲಿ ವಿಚಾರಸಂಕಿರಣಗಳನ್ನು ಹಮ್ಮಿಕೊಂಡು ಜನರಿಗೆ ಕಾಯ್ದೆಯ ಸಕಾರಾತ್ವಕ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next