Advertisement

ಹೈಕಮಾಂಡ್‌ಗೆ “ಕೆಜಿ’ಗಟ್ಟಲೆ ಕಾಸು: ಸಂಭಿತ್‌ ಪಾತ್ರಾ ವಾಗ್ಧಾಳಿ

06:00 AM Sep 20, 2018 | Team Udayavani |

ಅಕ್ರಮ ಹಣ ಸಾಗಾಟ, ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್‌ ಮುಖಂಡ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ರಾಜಕೀಯವಾಗಿ ಕೆಸರೆರಚಾಟ ಶುರುವಾಗಿದೆ. ಕಾಂಗ್ರೆಸ್‌ ಹವಾಲಾ ದಂಧೆಯಲ್ಲಿ ತೊಡಗಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ವಾಗ್ಧಾಳಿ ನಡೆಸಿದರೆ, ಬಿಜೆಪಿಯವರ ಕುತಂತ್ರಕ್ಕೆ ಹೆದರೋದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

Advertisement

ಹೊಸದಿಲ್ಲಿ: “ಕರ್ನಾಟಕದ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷ ಹವಾಲಾ ದಂಧೆಯಲ್ಲಿ ತೊಡಗಿಸಿ ಕೊಂಡಿದೆ. ಬೆಂಗಳೂರು ಸಹಿತ ಕರ್ನಾಟಕದ ವಿವಿಧ ಭಾಗಗಳಿಂದ ಎಐಸಿಸಿ ಕೇಂದ್ರ ಕಚೇರಿಗೆ ಹಣವನ್ನು ಸಾಗಿಸಲಾಗಿದೆ’ ಎಂದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯ ಶಿವ ಕುಮಾರ್‌ ವಿರುದ್ಧ ಮಂಗಳವಾರ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿದ ಮಾರನೇ ದಿನವೇ, ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

2017ರಲ್ಲಿ ಬಹಿರಂಗವಾದ ಡೈರಿಯ ವಿವರಗಳ ಬಗ್ಗೆಯೂ ಪ್ರಸ್ತಾವ ಮಾಡಿದ ಸಂಭಿತ್‌, ಈ ಹಿಂದೆ ಅದರಲ್ಲಿ ಕೆಲವೊಂದು ಹೆಸರುಗಳು ಪ್ರಸ್ತಾವವಾಗಿದ್ದವು ಎಂದಿದ್ದಾರೆ. ಸುಮಾರು 600 ಕೋಟಿ ರೂ. ಲಂಚ ಎಸ್‌ಜಿ ಆಫೀಸ್‌, ಆರ್‌ಜಿ ಆಫೀಸ್‌ಗೆ ನೀಡಲಾಗಿದೆ ಎಂದು ಬರೆಯಲಾಗಿತ್ತು. ಎಸ್‌ಜಿ ಎಂದರೆ ಸೋನಿಯಾ ಗಾಂಧಿ. ಆರ್‌ಜಿ ಎಂದರೆ ರಾಹುಲ್‌ ಗಾಂಧಿ. ಆದರೆ ಈಗ ಈ ಎಲ್ಲ ಅಂಶಗಳನ್ನೂ ಜೋಡಿಸುವ ಸಮಯ ಬಂದಿದೆ. ಅದಕ್ಕೆ ಪೂರಕ ಸಾಕ್ಷಿ ನಮ್ಮ ಬಳಿ ಇದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಂತ ಪ್ರಮುಖರಾಗಿದ್ದಾರೆ ಎಂದು ಪಾತ್ರಾ ಹೇಳಿದರು. ಜತೆಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಶಿವಕುಮಾರ್‌ರ ಕಾರು ಚಾಲಕ ಹನುಮಂತಯ್ಯ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯ ಸಾರಾಂಶವನ್ನೂ ಬಿಜೆಪಿ ಬಹಿರಂಗಪಡಿಸಿದೆ. ಕರ್ನಾಟಕದ ಆಗಿನ ಪ್ರಮುಖ ಅಧಿಕಾರಿಗಳಾದ ಆಂಜನೇಯ ಹನುಮಂತಯ್ಯ, ಎನ್‌. ರಾಜೇಂದ್ರನ್‌, ಡ್ರೈವರ್‌ ಜಗದೀಶ್‌ ದಿಲ್ಲಿಯಲ್ಲಿ ಹೊಂದಿದ್ದ ಮನೆಗಳ ಮೇಲೆಯೂ ದಾಳಿ ನಡೆದಿತ್ತು. 

ಆಂಜನೇಯ ಮನೆ ಆರ್‌.ಕೆ. ಪುರದಲ್ಲಿದ್ದು, ಇದು ಸರಕಾರಿ ನಿವಾಸವಾಗಿತ್ತು. ಅವರ ನಿವಾಸದಲ್ಲಿ ಸಫ‌ªರ್‌ಜಂಗ್‌ ಹಾಗೂ ಕೃಷ್ಣ ನಗರದಲ್ಲಿನ ಮೂರು ಫ್ಲ್ಯಾಟ್‌ಗಳ ಕೀ ಸಿಕ್ಕಿತ್ತು. ಈ ಮೂರು ಫ್ಲ್ಯಾಟ್‌ನಿಂದ 8 ಕೋಟಿ ಹಣ ಸಿಕ್ಕಿತ್ತು ಎಂದು ಸಂಭಿತ್‌ ಪಾತ್ರಾ ಆರೋಪಿಸಿದರು.

ತಪ್ಪೊಪ್ಪಿಗೆ ಹೇಳಿಕೆ ಪ್ರಸ್ತಾವ
ಬಿಜೆಪಿ ನಾಯಕ ಸಂಭಿತ್‌ ಪಾತ್ರಾ ಸಚಿವ ಡಿ.ಕೆ.ಶಿವಕುಮಾರ್‌ ಕಾರು ಚಾಲಕ ಹನುಮಂತಯ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವಿಚಾರಣೆ ವೇಳೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಓದಿದ್ದಾರೆ. ಅದರಲ್ಲಿ “ಅಂದಾಜು 4 ಕೋಟಿ ರೂ. ಅನ್ನು ನನಗೆ ಖನ್ನಾ ನೀಡಿದ್ದರು. ಅದನ್ನು ನಾನು ಡಿಕೆಶಿ ಸೂಚನೆಯ ಮೇರೆಗೆ ಹಸ್ತಾಂತರ ಮಾಡಿದ್ದೆ. ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಬಂದಾಗ ನನ್ನನ್ನು ಅವರ ಸಹಾಯಕರನ್ನಾಗಿ ನೇಮಿಸಲಾಗುತ್ತಿತ್ತು. ಅವರಿಗೆ ಸಂಬಂಧಿಸಿದ ಹಣವನ್ನು ನಾನು ನಿರ್ವಹಿಸುತ್ತಿದ್ದೆ. ಶಿವಕುಮಾರ್‌ ಆದೇಶವಾದಾಗೆಲ್ಲ ಹಣವನ್ನು ಸಂಗ್ರಹಿಸಿ ಸಫ‌ªರ್‌ಜಂಗ್‌ನ ಫ್ಲ್ಯಾಟ್‌ಗಳಲ್ಲಿಡುತ್ತಿದ್ದೆ ಮತ್ತು ಅವರ ಆದೇಶವಿದ್ದಾಗ ಅದನ್ನು ಸಂಬಂಧಿತ ವ್ಯಕ್ತಿಗಳಿಗೆ ನೀಡುತ್ತಿದ್ದೆ. ಈ ವಹಿವಾಟುಗಳು ಇಡೀ ವರ್ಷ ನಡೆದಿತ್ತು. ನನಗಿಂತ ಮೊದಲು ರಾಜೇಂದ್ರನ್‌ ಈ ವಹಿವಾಟು ನಡೆಸುತ್ತಿದ್ದರು’ ಎಂದು ಅದರಲ್ಲಿ ದಾಖಲಾಗಿದೆ.

Advertisement

ಡ್ರೈವರ್‌ ತಪ್ಪೊಪ್ಪಿಗೆ ಹೇಳಿಕೆ
ಬೆಂಗಳೂರಿನಿಂದ ಡಿಕೆಶಿ ತಂದ ಹಣವನ್ನು ಚಾಂದನಿ ಚೌಕ್‌ಗೆ ತೆಗೆದುಕೊಂಡು ಹೋಗಿ, ಅದನ್ನು ಅನಂತರ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದೆ. ಇದು ಕೆ.ಜಿ.ಗಳಲ್ಲಿರುತ್ತಿತ್ತು. ಆಂಜನೇಯ ಹನುಮಂತಯ್ಯ ಜತೆಗೆ ನಾನು ಹೋಗುತ್ತಿದ್ದೆ. ಸಾಮಾನ್ಯ ಬ್ಯಾಗ್‌ಗಳಲ್ಲಿಯೇ ನಾವು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದರು.

ಜಪ್ತಿ ಮಾಡಿದ ಹಣವು ಹವಾಲಾ ವಹಿವಾಟಿನದ್ದಾಗಿದೆ. ಕೆಜಿ ಎಂಬ ಕೋಡ್‌ವರ್ಡ್‌ ನಲ್ಲಿ ಸಾಗಿಸಲಾಗುತ್ತಿತ್ತು. ಇಲ್ಲಿ ಕೆಜಿ ಎಂದರೆ ಲಕ್ಷ ಎಂದರ್ಥ. ದಾಖಲೆಗಳ ಪ್ರಕಾರ 65 ಕೆಜಿ ಮೊತ್ತ ಎಐಸಿಸಿ ಕಚೇರಿಗೆ ಸಂದಾಯವಾಗಿದೆ ಎಂದು ಸಂಭಿತ್‌ ಹೇಳಿದ್ದಾರೆ.

ಕೋಟಿಗಟ್ಟಲೆ ಹಣ ಕಳವು
ಒಮ್ಮೆ ಈ ಸಫ‌ªರ್‌ಜಂಗ್‌ ಫ್ಲ್ಯಾಟ್‌ನಲ್ಲಿ ಕೋಟಿಗಟ್ಟಲೆ ಹಣ ಕಳವಾಗಿತ್ತು. ಆದರೆ ಈ ಬಗ್ಗೆ ಎಫ್ಐಆರ್‌ ದಾಖಲಿಸಲು ಕಾಂಗ್ರೆಸ್‌ ಮುಂದಾಗಲಿಲ್ಲ. ಬದಲಿಗೆ ತಾನೇ ತನಿಖೆ ನಡೆಸಿತ್ತು. ಇದು ಜಗದೀಶ್‌ ಚಂದ್‌ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ದಾಖಲಾಗಿದೆ. ಜಗದೀಶ್‌ ಚಂದ್‌ರನ್ನೂ ಸಫ‌ªರ್‌ಜಂಗ್‌ನ ಫ್ಲ್ಯಾಟ್‌ಗೆ ಕರೆಸಿ ಈ ಬಗ್ಗೆ ವಿಚಾರಣೆ ಮಾಡಲಾಗಿತ್ತು. ವಿಚಾರಣೆ ನಡೆಸಿದವರು ಸಮವಸ್ತ್ರ ಧರಿಸಿರಲಿಲ್ಲ. ಅವರು ಪೊಲೀಸರಂತೆ ಕಾಣಿಸುತ್ತಿದ್ದರು ಎಂದು ಜಗದೀಶ್‌ ಚಂದ್‌ ಹೇಳಿದ್ದ ವಿಚಾರವನ್ನು ಪಾತ್ರಾ ಪ್ರಸ್ತಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next