ಬೆಂಗಳೂರು: ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲೇ ಮುಳುಗಿರುವ ಕಾಂಗ್ರೆಸ್ ನಾಯಕರಿಗೆ ಮಾಡಲು ಏನೂ ಕೆಲಸವಿಲ್ಲ. ಹೀಗಾಗಿ ಅವರೆಲ್ಲ ಹೊಂಬಾಳೆ ಎನ್ನುವ ಯಾವುದೋ ಒಂದು ಸಂಸ್ಥೆಯ ಹೆಸರನ್ನು ಹಿಡಿದುಕೊಂಡು ನನ್ನ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಇಂದು ಎಂದಿನಂತೆ ಗಾಳಿಯಲ್ಲಿ ಗುಂಡು ಹೊಡೆಯುವ ಚಾಳಿಯಾಗಿದೆ. ಪದೇಪದೇ ನನ್ನ ಹೆಸರಿಗೆ ಮಸಿ ಬಳಿಯಲು ಹೊಂಚು ಹಾಕುತ್ತಿರುವ ಇವರೆಲ್ಲರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಹೊಂಬಾಳೆ (ಈಗ, ಚಿಲುಮೆ ಟ್ರಸ್ಟ್) ಎನ್ನುವ ಬೇರೆ ಯಾವುದೊ ಸಂಸ್ಥೆಯು ಬಿಬಿಎಂಪಿ ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಿಸಿದ್ದು, ಇದರ ಹಿಂದೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅಶ್ವತ್ಥನಾರಾಯಣ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಗುರುವಾರ ಹೀಗೆ ಉತ್ತರಿಸಿದ್ದಾರೆ.
“ನಮ್ಮ ಸಹೋದರನದು ಕೂಡ ಹೊಂಬಾಳೆ ಎನ್ನುವ ಸಂಸ್ಥೆ ಇದ್ದು, ಸಿನಿಮಾ ನಿರ್ಮಾಣದಲ್ಲಿ ತೊಡಗಿದೆ. ಈ ಸಂಸ್ಥೆಯು ನಾಡು ಮತ್ತು ದೇಶವೇ ಮೆಚ್ಚುವಂಥ ಸಿನಿಮಾಗಳನ್ನು ಮಾಡಿ, ಗೌರವ ತಂದಿದೆ. ಈಗ ಅವರು ಹೇಳುತ್ತಿರುವ ಹೊಂಬಾಳೆ ಸಂಸ್ಥೆಗೂ ನಮ್ಮ ಸೋದರನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಆ ಹೆಸರನ್ನು ಇಟ್ಟುಕೊಳ್ಳಬೇಡ ಎಂದು ಹೇಳಲು, ಮಲ್ಲೇಶ್ವರಂನಲ್ಲಿ ಕಚೇರಿ ಇರಬಾರದು ಎನ್ನಲು ನಾನ್ಯಾರು? ನಾನು ತತ್ತ್ವ-ಸಿದ್ಧಾಂತಗಳಿಗಾಗಿ ರಾಜಕೀಯಕ್ಕೆ ಬಂದಿದ್ದೇನೆಯೇ ವಿನಾ ಕಾಂಗ್ರೆಸ್ಸಿನವರಂತೆ ಕುಟುಂಬ ರಾಜಕಾರಣಕ್ಕಲ್ಲ” ಎಂದು ಅವರು ನುಡಿದಿದ್ದಾರೆ.
“ಕಾಂಗ್ರೆಸ್ಸಿನಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲಾ ಸೇರಿದಂತೆ ಯಾರ ಬಳಿಯೂ ಗಂಭೀರ ವಿಚಾರಗಳಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಅದರಲ್ಲಿ ಮುಖ್ಯಮಂತ್ರಿಗಳಿಗಾಗಲಿ, ನನಗಾಗಲಿ ಏನೂ ಇಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಕಾಂಗ್ರೆಸ್ಸಿನವರು ಆಯೋಗಕ್ಕೆ ದೂರು ಕೊಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅದು ಬಿಟ್ಟು ನನ್ನ ವಿರುದ್ಧ ಆರೋಪ ಮಾಡುವ ಚಿಲ್ಲರೆಬುದ್ಧಿ ತೋರಿಸಬಾರದು. ಹಿಂದೆ ಪಿಎಸ್‌ಐ ಹಗರಣದಲ್ಲೂ ಇವರೆಲ್ಲ ನನ್ನ ಹೆಸರನ್ನು ವಿನಾ ಕಾರಣ ಎಳೆದು ತಂದಿದ್ದರು. ಆದರೆ ಆಧಾರ ತೋರಿಸಿ ಎಂದಾಗ ಪಲಾಯನ ಮಾಡಿದರು” ಎಂದು ಅವರು ಹರಿಹಾಯ್ದರು.
“ಕಾಂಗ್ರೆಸ್ಸಿನವರು ಈಗ ಆರೋಪ ಮಾಡುತ್ತಿರುವ ಸಂಸ್ಥೆಯ ಪ್ರಮುಖ ವ್ಯಕ್ತಿ ನನ್ನೊಂದಿಗೆ ಫೋಟೋ ತೆಗೆಸಿಕೊಂಡಿರಬಹುದು. ಸಾರ್ವಜನಿಕ ಜೀವನದಲ್ಲಿರುವಾಗ ಹೀಗೆ ಸಾವಿರಾರು ಜನ ಏನೇನೋ ಕೆಲಸದ ಕಾರಣಕ್ಕೆ ಬರುತ್ತಾರೆ. ಹಾಗೆ ನೋಡಿದರೆ, ಕಾಂಗ್ರೆಸ್ ನಾಯಕರು ಕಳ್ಳಕಾಕರು ಮತ್ತು ಕೊಲೆಗಾರರ ಜೊತೆಯೆಲ್ಲ ಫೋಟೋ ತೆಗೆಸಿಕೊಂಡಿದ್ದಾರೆ. ರಾಜಕಾರಣಕ್ಕೆ ಬಂದ ಮೇಲೆ ಅದನ್ನೆಲ್ಲ ತಡೆಯಲು ಆಗುವುದಿಲ್ಲ” ಎಂದು ಅವರು ಮಾರುತ್ತರ ನೀಡಿದರು.
ಇದನ್ನೂ ಓದಿ:ಹಣಕಾಸು ವರ್ಗಾವಣೆ ಪ್ರಕರಣ: ಎರಡನೇ ಬಾರಿಯೂ ಆಪ್ ಮುಖಂಡ ಜೈನ್ ಬೇಲ್ ಅರ್ಜಿ ವಜಾ
ಬಿಜೆಪಿ ಸರಕಾರವು ಕೆಂಪೇಗೌಡರ ಪ್ರತಿಮೆ ಸ್ಥಾಪನೆ, ಹೂಡಿಕೆದಾರರ ಸಮಾವೇಶ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಮುಂತಾದ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಈ ಯಶಸ್ಸನ್ನು ಸಹಿಸಿ ಕೊಳ್ಳಲಾಗದೆ ಕಾಂಗ್ರೆಸ್ ನಾಯಕರು ಹೀಗೆ ಹತಾಶೆಯ ಪರಮಾವಧಿ ತಲುಪಿದ್ದಾರೆ ಎಂದು ಅವರು ಟೀಕಿಸಿದರು.
“ಮತದಾರರ ಪಟ್ಟಿ ಪರಿಷ್ಕರಣೆಯು ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ನಡೆಯುವ ಪ್ರಕ್ರಿಯೆ. ಇದು ಅಧಿಕಾರಿಗಳು ಮತ್ತಿತರರು ಮಾಡುವ ಕೆಲಸವಾಗಿದೆ. ಬಿಬಿಎಂಪಿ ಚುನಾವಣೆಗೂ ನನಗೂ ಏನಾದರೂ ಸಂಬಂಧವಿದೆಯೇ? ಇದನ್ನೆಲ್ಲ ನೋಡಿದರೆ ಕಾಂಗ್ರೆಸ್ಸಿಗರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಗೊತ್ತಾಗುತ್ತದೆ” ಎಂದು ಸಚಿವರು ಲೇವಡಿ ಮಾಡಿದರು