Advertisement

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

01:17 AM Apr 23, 2024 | Team Udayavani |

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೊಂಡಾಗ ಆ ಕೃತ್ಯದಲ್ಲಿ ಪಿಎಫ್‌ಐ ಭಾಗಿಯಾಗಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿತ್ತು. ಆ ಕೂಡಲೇ ಕೇಂದ್ರ ಸರಕಾರ ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತು. ಈಗ ಅದರದೇ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆಗೆ ಈಗ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಆರೋಪಿಸಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವಾಗೆಲ್ಲ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ವಿತ್ವಕ್ಕೆ ಬರುತ್ತದೋ ಆಗೆಲ್ಲ ಆತಂಕವಾದ ತಾಂಡವವಾಡುತ್ತದೆ. ರಸ್ತೆ ಬದಿಯಲ್ಲಿ ಕೇಳಿ ಬರುತ್ತಿದ್ದ ಪಾಕಿಸ್ಥಾನ ಪರವಾಗಿರುವ ಘೋಷಣೆಗಳು ವಿಧಾನ ಸೌಧದಲ್ಲೇ ಕೇಳಿ ಬರಲು ಆರಂಭವಾಗಿದೆ. ರಾಜ್ಯದಲ್ಲಿ ಸಾಲು ಸಾಲು ಹಿಂದೂಗಳ ಹತ್ಯೆ, ಕೊಲೆಯತ್ನ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ತುಷ್ಟೀಕರಣ, ಮತಬ್ಯಾಂಕ್‌ ರಾಜಕೀಯವೇ ಇದಕ್ಕೆಲ್ಲ ಕಾರಣ. ಡಿಜೆ ಹಳ್ಳಿ-ಕೆ.ಜೆ.ಹಳ್ಳಿ ಪ್ರಕರಣ ನಡೆದಾಗ ಕಾಂಗ್ರೆಸ್‌ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆದಾಗಲೂ ಇಡೀ ಪ್ರಕರಣವನ್ನೇ ತಿರುಚುವ ಕೆಲಸ ಮಾಡಿತು. ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆಯಾದಾಗ ಕಾಂಗ್ರೆಸ್‌ನ ಯಾವ ನಾಯಕನೂ ಹೋಗಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.

ಬಿಜೆಪಿಗೆ ಜನಾಶೀರ್ವಾದ
33 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ವಿಮಾನ ನಿಲ್ದಾಣ, ಬಂದರು ಶ್ರೀನಿವಾಸ ಮಲ್ಯರು ಮಾಡಿದ್ದರು ಎಂದು ಒಪ್ಪುತ್ತೇವೆ. ಅನಂತರ ಬಂದ ಕಾಂಗ್ರೆಸ್‌ ಸಂಸದರು ಏನೂ ಮಾಡಿಲ್ಲ. ವಿಮಾನ ನಿಲ್ದಾಣ, ಬಂದರು ಅಭಿವೃದ್ಧಿ ಬಿಜೆಪಿ ಅವಧಿಯಲ್ಲಿ ಆಗಿದೆ. ಕೆಆರ್‌ಇಸಿಯನ್ನು ಎನ್‌ಐಟಿಕೆ ಆಗಿ ಅಭಿವೃದ್ಧಿ ಮಾಡಿದ್ದು ಬಿಜೆಪಿ. ರೈಲು ನಿಲ್ದಾಣಗಳು ವಿಶ್ವದರ್ಜೆ ನಿಲ್ದಾಣವಾಗಿ ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್‌ ಸಿಟಿಯ ಮೂಲಕ ನಗರದಲ್ಲಿ ಅದ್ಭುತ ಪರಿವರ್ತನೆಯಾಗಿದೆ. ಮನೆ ಮನೆಗೆ ಗ್ಯಾಸ್‌ ಸಂಪರ್ಕ ಮೋದಿ ಕೊಡುಗೆ. ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯೂ ಬಿಜೆಪಿ ಅವಧಿಯಲ್ಲಿ ಆಗಿದೆ. ಎಂಆರ್‌ಪಿಎಲ್‌- ಎಸ್‌ಇಝೆಡ್‌ ಈ ಹಿಂದಿನ ಬಿಜೆಪಿ ಸಂಸದರಾಗಿದ್ದ ಧನಂಜಯ ಕುಮಾರ್‌ ಅವರ ಅವಧಿಯಲ್ಲಿ ಬಂದಿದೆ. ಕೋಸ್ಟ್‌ಗಾರ್ಡ್‌, ಪ್ಲಾಸ್ಟಿಕ್‌ ಪಾರ್ಕ್‌ ಕಾಮಗಾರಿಗಳು ಆರಂಭವಾಗಿವೆ. ಇವೆಲ್ಲವೂ ಬಿಜೆಪಿಯ ಕೊಡುಗೆ ಎಂದರು.

ಅಭಿವೃದ್ಧಿಗೆ ಕಾಂಗ್ರೆಸ್‌ನಿಂದಲೇ
ಆಡ್ಡಗಾಲು
ಸ್ಮಾರ್ಟ್‌ ಸಿಟಿ ಯೋಜನೆಗೆ ಆರಂಭದಲ್ಲಿ ವಿರೋಧ ಮಾಡಿದ್ದು ಕಾಂಗ್ರೆಸ್‌. ವಿಮಾನ ನಿಲ್ದಾಣದ ವಿಸ್ತರಣೆಗೆ ಭೂಸ್ವಾಧೀನಕ್ಕೂ ಕಾಂಗ್ರೆಸ್‌ ವಿರೋಧಿಸಿದೆ. ಸಾಣೂರು – ಬಿಕರ್ನಕಟ್ಟೆ ಹೆದ್ದಾರಿ ಯೋಜನೆ ವಿಳಂಬಕ್ಕೂ ಕಾಂಗ್ರೆಸ್ಸೇ ಕಾರಣ. ಇವತ್ತಿಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವವರು ಕಾಂಗ್ರೆಸ್‌ ಪಕ್ಷದವರು ಎಂದರು.

Advertisement

ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮುಖಂಡರಾದ ಸುಧೀರ್‌ ಶೆಟ್ಟಿ ಕಣ್ಣೂರು, ಕ್ಯಾ| ಗಣೇಶ್‌ ಕಾರ್ಣಿಕ್‌, ನಿತಿನ್‌ ಕುಮಾರ್‌, ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವಾರ್‌ ಮೊದಲಾದವರು ಉಪಸ್ಥಿತರಿದ್ದರು.

ದಾಖಲೆ ಮತಗಳಿಂದ ಕ್ಯಾ| ಚೌಟ ಗೆಲುವು
ಚುನಾವಣ ಪ್ರಚಾರದ ಭಾಗವಾಗಿ ಜಿಲ್ಲೆಯ ವಿವಿಧೆಡೆ ಪ್ರವಾಸ ಮಾಡಿದ್ದೇನೆ. ಹಳ್ಳಿಗಳಲ್ಲಿ ಬಿಜೆಪಿ ಪರ ಒಲವಿದೆ. ಸ್ವಯಂ ಪ್ರೇರಿತವಾಗಿ ಜನರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ನಿವೃತ್ತ ಸೇನಾನಿಯೂ ಆಗಿರುವ ಕ್ಯಾ| ಬ್ರಿಜೇಶ್‌ ಚೌಟ ಅವರು ಯುವ, ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಜಿಲ್ಲೆಯ ಜನತೆ ಅವರನ್ನು ದಾಖಲೆಯ ಅಂತರದ ಮತಗಳಿಂದ ಗೆಲ್ಲಿಸುವುದು ಖಚಿತ ಎಂದು ನಳಿನ್‌ ಕುಮಾರ್‌ ಕಟೀಲು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ಬಾಂಬ್‌’ ಕೊಟ್ಟ ಕಾಂಗ್ರೆಸ್‌ಗೆ
“ಚೊಂಬು’ ಗ್ಯಾರಂಟಿ
10 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ “ಅಕ್ಷಯಪಾತ್ರೆ’ಯನ್ನೇ ನೀಡಿದ್ದು, ಈ ಬಾರಿಯ ಆಡಳಿತದಲ್ಲಿ ಜನರು “ಕಲ್ಪವೃಕ್ಷ’ವಾಗಿ ಆಶೀರ್ವಾದ ಮಾಡಲಿದ್ದಾರೆ. ಕಾಂಗ್ರೆಸ್‌ ಸರಕಾರ ರಾಜ್ಯಕ್ಕೆ “ಬಾಂಬ್‌’ ನೀಡಿದ್ದು, ಹಾಗಾಗಿ ಅವರಿಗೆ “ಚೊಂಬು’ ಗ್ಯಾರಂಟಿ ಎಂದು ಸಂಸದ ನಳಿನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next