Advertisement

ಗಡಿ ಜಿಲ್ಲೆಗೆ ತಪ್ಪಿದ ಸಚಿವ ಸ್ಥಾನ: ಕಾರ್ಯಕರ್ತರಿಂದ ಧರಣಿ

03:23 PM May 28, 2023 | Team Udayavani |

ಯಳಂದೂರು: ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ 4 ಸ್ಥಾನಗಳ ಪೈಕಿ 3 ರಲ್ಲಿ ಜಯಗಳಿಸಿದೆ. ಆದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಅನ್ಯಾಯವಾಗಿದ್ದು ಇಲ್ಲಿನ ಜನರ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ ಎಂದು ಪಟ್ಟಣದ ಕಾಂಗ್ರೆಸ್‌ ಕಚೇರಿ ಬಳಿ ಶನಿವಾರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಪಪಂ ಸದಸ್ಯ ಮಹೇಶ್‌ ಮಾತನಾಡಿ, ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದೆ. ಇಲ್ಲಿನ ಅಭ್ಯರ್ಥಿಗಳಲ್ಲಿ ನಾಲ್ಕು ಬಾರಿ ಜಯಗಳಿಸಿರುವ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿರವರಿಗೆ ಸಚಿವ ಸ್ಥಾನವನ್ನು ನೀಡುವ ಭರವಸೆ ಇತ್ತು. ಆದರೆ ಇವರಿಗೆ ಉಪಸ್ಪೀಕರ್‌ ಆಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಕೊಳ್ಳೇಗಾಲದಲ್ಲಿ ಎ.ಆರ್‌. ಕೃಷ್ಣಮೂರ್ತಿ ಹಾಗೂ ಗುಂಡ್ಲುಪೇಟೆಯಲ್ಲಿ ಗಣೇಶ್‌ ಪ್ರಸಾದ್‌ ಕೂಡ ಜಯಗಳಿಸಿದ್ದಾರೆ. ಇವರನ್ನೂ ಕಡೆಗಣಿಸಲಾಗಿದೆ ಎಂದರು.

ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ಸಿ.ಪುಟ್ಟರಂಗಶೆಟ್ಟಿ ಉಪ್ಪಾರ ಸಮುದಾಯದ ಪ್ರಬಲ ನಾಯಕರಾಗಿದ್ದು, ರಾಜ್ಯದ ಏಕೈಕ ಶಾಸಕರಾಗಿದ್ದಾರೆ. ಈ ಹಿಂದೆ ಪುಟ್ಟರಂಗಶೆಟ್ಟಿ ಸಚಿವರಾಗಿದ್ದರು. ಈ ಬಾರಿಯೂ ಇವರಿಗೆ ಸಚಿವ ಸ್ಥಾನ ಲಭಿಸುವ ಭರವಸೆ ಇತ್ತು. ಆದರೆ ಇದು ಹುಸಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದರು.

ಪಪಂ ಸದಸ್ಯ ವೈ.ಜಿ. ರಂಗನಾಥ ಮಾತನಾಡಿ, ಸಿ.ಪುಟ್ಟರಂಗಶೆಟ್ಟಿರವರ ಹೆಸರು ಸಚಿವರ ಅಂತಿಮ ಪಟ್ಟಿಯಲ್ಲಿತ್ತು. ಆದರೆ ಮಧ್ಯರಾತ್ರಿ ಏಕಾಏಕಿ ಇವರ ಹೆಸರು ತೆಗೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರಿಗೆ ಸಚಿವ ಸ್ಥಾನವನ್ನು ನೀಡಲು ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವೃಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಿಜ್ವಾನ್‌, ಮಾರನಾಯಕ, ಲಿಂಗರಾಜು, ಮಲ್ಲು, ರಾಜಶೇಖರ್‌, ಗ್ರಾಪಂ ಸದಸ್ಯ ಸ್ವಾಮಿ, ಪುಟ್ಟ, ಕೆ. ವೆಂಕಟೇಶ್‌, ಎ. ವೆಂಕಟೇಶ್‌, ಇಬ್ರಾಹಿಂ, ಮಹದೇವ ಶೆಟ್ಟಿ, ಗೋವಿಂದಶೆಟ್ಟಿ, ಕುಮಾರ, ರಂಗಸ್ವಾಮಿ, ನಿಂಗರಾಜು, ರಾಜಶೇಖರ್‌, ಗೋವಿಂದನಾಯಕ, ಕಾಮಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next