Advertisement

Karnataka Election: ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಬೊಮ್ಮಾಯಿ ಸೋಲಿಸಲು ಕೈ ಪಡೆ ಶಪಥ

10:43 PM Apr 08, 2023 | Team Udayavani |

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಕಿದ ಸವಾಲನ್ನು ಸ್ವೀಕರಿಸುತ್ತೇವೆ. ಈ ಬಾರಿ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಬೊಮ್ಮಾಯಿ ಅವರನ್ನು ಸೋಲಿಸಿ ಮನೆಗೆ ಕಳುಹಿಸುವ ಶಪಥ ಮಾಡಿದ್ದೇವೆ. ಹಗುರವಾಗಿ ಮಾತನಾಡುವ ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ತಿರುಗೇಟು ನೀಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಪತ್ರಿಕಾಗೋಷ್ಠಿಯಲ್ಲಿ ಸಿಎಂ ರಣವೀಳ್ಯಕ್ಕೆ ತಿರುಗೇಟು ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಸಂಸದ ಮಂಜುನಾಥ ಕುನ್ನೂರ, ಬೊಮ್ಮಾಯಿ ಸೋಲುವ ಭೀತಿಯಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಹಿಂಬಾಗಿಲ ಮೂಲಕ ಬಂದು ಸಿಎಂ ಆಗಿದ್ದಾರೆ. ಶಿಗ್ಗಾವಿ ಮನೆಯಲ್ಲಿ ಒಂದು ದಿನವೂ ವಾಸ್ತವ್ಯ ಮಾಡಲಿಲ್ಲ. ಶಿಗ್ಗಾವಿ ತಾಲೂಕಿಗೆ ಬಂದು ಸ್ವಂತ ಅಭಿವೃದ್ಧಿಯಾಗಿದೆಯೇ ಹೊರತು ತಾಲೂಕಿನ ಅಭಿವೃದ್ಧಿಯಾಗಿಲ್ಲ. ಒಳ ಒಪ್ಪಂದ ಮಾಡಿಕೊಂಡು 3 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಹರಿಹಾಯ್ದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಕುಸ್ತಿ ಆಡಲು ಬೊಮ್ಮಾಯಿ ಕರೆಯುತ್ತಿದ್ದಾರೆ. ಅವರ ಟಿಕೆಟ್‌ ಇನ್ನೂ ಖಚಿತವಾಗಿಲ್ಲ. ಬಿಜೆಪಿ ಪಟ್ಟಿ ಇದುವರೆಗೂ ಬಿಡುಗಡೆಯಾಗಿಲ್ಲ. ಧಮ್‌, ತಾಕತ್ತು ಇದ್ದರೆ ಬೊಮ್ಮಾಯಿ ಕ್ಷೇತ್ರದಲ್ಲಿ ಹಳ್ಳ ಹಿಡಿದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಿ. ದೀಪ ಆರುವ ಮುನ್ನ ಜೋರಾಗಿ ಪ್ರಕಾಶಿಸುವಂತೆ ಸಿಎಂ ಸ್ಥಾನದ ಗೌರವ ಮರೆತು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಶಶಿಧರ ಯಲಿಗಾರ, ಷಣ್ಮುಖಪ್ಪ ಶಿವಳ್ಳಿ, ಎಸ್‌.ವಿ. ಪಾಟೀಲ, ಸಂಜೀವಕುಮಾರ ನೀರಲಗಿ, ಯಾಸಿರ್‌ ಖಾನ್‌ ಪಠಾಣ್‌, ರಾಜೇಶ್ವರಿ ಪಾಟೀಲ, ಶಂಭಣ್ಣ ಆಜೂರ, ಎಂ.ಎಸ್‌. ಮುಲ್ಲಾ, ಸಿ.ಎಸ್‌. ಪಾಟೀಲ ಇತರರು ಇದ್ದರು.

ಖಾದ್ರಿ ಗೈರು
ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಗಳು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಗೈರು ಹಾಜರಿ ಎದ್ದು ಕಾಣಿಸಿತು. ಆಹ್ವಾನಿಸಿ ದರೂ ಖಾದ್ರಿ ಬಂದಿಲ್ಲ ಎಂದು ಕೈ ಮುಖಂಡರು ಹೇಳಿದರು. ಆದರೆ ನನಗೆ ಯಾರೂ ಆಹ್ವಾನಿಸಿಲ್ಲ, ತಿಳಿಸಿಯೂ ಇಲ್ಲ, ಮಾಹಿತಿ ಕೊಟ್ಟಿದ್ದರೆ ನಾನು ಬರುತ್ತಿದ್ದೆ ಎಂದು ಅಜ್ಜಂಪೀರ್‌ ಖಾದ್ರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next