Advertisement

ಕಾಂಗ್ರೆಸ್‌: ಶಮನವಾಗದ ಭಿನ್ನಮತ

10:02 AM Jan 06, 2020 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಪಕ್ಷದ ನಾಯಕರ ನಡುವಿನ ಗೊಂದಲ ಬಗೆಹರಿಸಿಕೊಳ್ಳಲು ನಡೆದ ಸಭೆಯಲ್ಲಿ ಹಿರಿಯ ನಾಯಕರು ಮತ್ತು ಸಿದ್ದರಾಮಯ್ಯ ನಡುವೆ ಆರೋಪ -ಪ್ರತ್ಯಾರೋಪ ನಡೆದಿದೆ. ಇದರ ನಡುವೆಯೇ ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್‌ ಮುಂದೆ ಒಗ್ಗಟ್ಟು ಪ್ರದರ್ಶಿಸಲು ನಾಯಕರು ನಿರ್ಧರಿಸಿದ್ದಾರೆ.

Advertisement

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸುಮಾರು 3 ತಾಸು ನಡೆದ ಸಭೆಯಲ್ಲಿ ಕೆ.ಎಚ್‌. ಮುನಿಯಪ್ಪ ಮತ್ತು ವೀರಪ್ಪ ಮೊಲಿ ಅವರು ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದ್ದು, ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.

ಸಭೆಯ ಆರಂಭದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನಗೆ ಸ್ಪರ್ಧಿಗಳು ಹುಟ್ಟಿಕೊಂಡಾಗ ಡಿ.ಕೆ. ಶಿವಕುಮಾರ್‌ ಮುನಿಸಿಕೊಂಡು ಸಭೆಯನ್ನು ಅರ್ಧಕ್ಕೆ ತ್ಯಜಿಸಿ ತೆರಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮೂಲ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಗೊಂದಲ ಉಂಟಾದದ್ದರಿಂದ ಹೈಕಮಾಂಡ್‌ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಒಮ್ಮತದ ಅಭಿಪ್ರಾಯಕ್ಕೆ ಬರುವಂತೆ ಡಾ| ಜಿ. ಪರಮೇಶ್ವರ್‌ಗೆ ಸೂಚಿಸಿತ್ತು.

ಹುದ್ದೆ ವಿಭಜನೆಗೆ ಸಿದ್ದು ಆಕ್ಷೇಪ
ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಮತ್ತು ವಿಪಕ್ಷ ನಾಯಕನ ಸ್ಥಾನ ವಿಭಜನೆ ಕುರಿತು ಚರ್ಚಿಸಲಾಗಿದೆ. ಆದರೆ ಸಿದ್ದರಾಮಯ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುದ್ದೆಯನ್ನು ಬೇರೆಯವರು ಬೇಕಾದರೆ ಪಡೆದುಕೊಳ್ಳಲಿ, ಆದರೆ ವಿಭಜನೆ ಮಾಡುವುದು ಬೇಡ ಎಂದಿದ್ದಾರೆ. ಕೊನೆಗೆ ಪಕ್ಷದ ಹಿತದೃಷ್ಟಿಯಿಂದ ಅವರೇ ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯುವಂತೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಸೋಲಿಗೆ ಸಿದ್ದು ಕಾರಣ
ಲೋಕಸಭೆ ಮತ್ತು ಉಪಚುನಾವಣೆಯಲ್ಲಿ ಹೀನಾಯ ಸೋಲಿಗೆ ಸಿದ್ದರಾಮಯ್ಯ ಅವರ ನಡವಳಿಕೆಯೇ ಕಾರಣ ಎಂದು ಕೆ.ಎಚ್‌. ಮುನಿಯಪ್ಪ ಮತ್ತು ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು. ಅದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ. ನಮ್ಮ ನಡುವಿನ ಗೊಂದಲದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಹೀಗೆಯೇ ಮುಂದುವರಿದರೆ ನಾವೆಲ್ಲರೂ ಕಾಣೆಯಾಗುತ್ತೇವೆ. ಬಣ ರಾಜಕೀಯ ತ್ಯಜಿಸಿ ಒಂದಾಗದ ವಿನಾ ಯಶಸ್ಸು ಸಿಗದು. ಪಕ್ಷ ಗಟ್ಟಿಯಿದ್ದರೆ ಮಾತ್ರ ನಾವೆಲ್ಲರೂ ಗಟ್ಟಿಯಾಗಿರುತ್ತೇವೆ ಎಂದು ಹಿರಿಯ ನಾಯಕ ಖರ್ಗೆ ಸಲಹೆ ನೀಡಿದರು ಎನ್ನಲಾಗಿದೆ.

Advertisement

ಡಿಕೆಶಿ ಮುನಿಸು, ನಿರ್ಗಮನ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಪರಮೇಶ್ವರ್‌, ಶಿವಕುಮಾರ್‌ ಹೆಸರು ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ. ಆದರೆ ಎಂ.ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ ಮತ್ತು ಸತೀಶ್‌ ಜಾರಕಿಹೊಳಿ ಅವರೂ ಜವಾಬ್ದಾರಿ ನೀಡಿದರೆ ನಿರ್ವಹಿಸಲು ಸಿದ್ಧ ಎಂಬ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸರಗೊಂಡ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ನನಗೆ ಅವಕಾಶ ಬಂದಾಗಲೆಲ್ಲ ಇದೇ ರೀತಿ ಮಾಡುತ್ತೀರಿ. ಎಲ್ಲರೂ ಒಪ್ಪಿಕೊಳ್ಳುವುದಾದರೆ ಮಾತ್ರ ನನ್ನ ಹೆಸರು ಶಿಫಾರಸು ಮಾಡಿ ಎಂದು ಹೇಳಿದ್ದು, ಇ.ಡಿ., ಐಟಿ ವಿಚಾರಣೆಗಳ ನಡುವೆಯೂ ರಾಜಕೀಯವಾಗಿ ಬದುಕುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿ, ಕುಟುಂಬದೊಂದಿಗೆ ಮನೆ ದೇವಸ್ಥಾನಕ್ಕೆ ತೆರಳುವುದಿದೆ ಎಂದು ಹೇಳಿ ಸಭೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next