Advertisement

ಕಾಸಿಯಾ ವತಿಯಿಂದ ಸಿಎಂಗೆ ಇಂದು ಅಭಿನಂದನೆ

10:49 AM Oct 13, 2017 | Team Udayavani |

ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ರಚನೆ, ಕಾಸಿಯಾ ಸೆಂಟರ್‌ ಆಫ್ ಎಕ್ಸಲೆನ್ಸ್‌ ಕೇಂದ್ರ ಸ್ಥಾಪನೆಗೆ ಐದು ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಶುಕ್ರವಾರ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಆರ್‌.ಹನುಮಂತೇಗೌಡ,
2017-18ನೇ ಸಾಲಿನ ರಾಜ್ಯ ಬಜೆಟ್‌ಗೆ ಮುನ್ನ ಸಂಘ ಸಲ್ಲಿಸಿದ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಈಡೇರಿಸಿದ್ದಾರೆ. ಆ ಹಿನ್ನೆಯಲ್ಲಿ ಕೃತಜ್ಞತೆ ಸಲ್ಲಿಸಲು ಶುಕ್ರವಾರ ಕಾಸಿಯಾ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ದಾಬಸ್‌ಪೇಟೆ ಬಳಿ ಸರ್ಕಾರ ಐದು ಎಕರೆ ಭೂಮಿಯನ್ನು ಶೇ.50ರಷ್ಟು ಕಡಿಮೆ ದರದಲ್ಲಿ ನೀಡುವ ಜತೆಗೆ ಐದು ಕೋಟಿ
ರೂ. ಅನುದಾನ ನೀಡಿದೆ. ಎಂಎಸ್‌ಎಂಇಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಲು ಒಪ್ಪಿರುವುದರಿಂದ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿದರಲ್ಲಿ ನೀಡುವ ಸಾಲ ಪ್ರಮಾಣದ ಮಿತಿಯನ್ನು 50 ಲಕ್ಷ ರೂ.ನಿಂದ 2 ಕೋಟಿ
ರೂ.ಗೆ ಸರ್ಕಾರ ಏರಿಕೆ ಮಾಡಿದೆ. ಜತೆಗೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರಿಗೆ ಹಲವು ರಿಯಾಯ್ತಿ ನೀಡಿದೆ. ಒಟ್ಟಾರೆ ಸಣ್ಣ ಕೈಗಾರಿಕೆಗಳ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಚಿವರಾದ ಎಂ.ಕೃಷ್ಣಪ್ಪ, ಎಚ್‌.ಎಂ.ರೇವಣ್ಣ, ಶಾಸಕ ಪ್ರಿಯಕೃಷ್ಣ ಇತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ನ.23 ಹಾಗೂ 24ರಂದು ಸರಬರಾಜುದಾರರ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಹೂಡಿಕೆದಾರರ ಶೃಂಗ ಸಭೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೋದ್ಯ ಮಿಗಳು ಹಾಗೂ ಬೃಹತ್‌ ಉದ್ಯಮಿಗಳು, ವ್ಯಾಪಾರಿಗಳು ಮುಖಾಮುಖೀಯಾಗಲಿದ್ದು, ಉದ್ಯಮ ಬೆಳವಣಿಗೆಗೆ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

Advertisement

ಸಂಘದ ಉಪಾಧ್ಯಕ್ಷ ಬಸವರಾಜ್‌ ಎಸ್‌.ಜವಳಿ, ಸರಬರಾಜುದಾರರ ಅಭಿವೃದ್ಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸದ್ಯದಲ್ಲೇ 16 ಕೇಂದ್ರಗಳಲ್ಲಿ ರೋಡ್‌ ಶೋ ನಡೆಯಲಿದೆ.

ಗೌರವ ಜಂಟಿ ಕಾರ್ಯದರ್ಶಿ (ನಗರ) ಲತಾ ಗಿರೀಶ್‌, ಮಹಿಳಾ ಉದ್ಯಮಿಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈಗಾಗಲೇ ಶೇ.4ರಷ್ಟು ಬಡ್ಡಿದರದ ಸಾಲ ಮಿತಿಯನ್ನು 50 ಲಕ್ಷ ರೂ.ನಿಂದ 2 ಕೋಟಿ ರೂ.ಗೆ ಏರಿಕೆ ಮಾಡಿದೆ. ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಕಾಯ್ದಿರಿಸಿರುವ ಮೊತ್ತವನ್ನು ಹೆಚ್ಚಳ ಮಾಡಿದರೆ ಇತರೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರಮುಖ ಬೇಡಿಕೆಗಳು ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕೊರತೆಯಿಂದ ಉದ್ಯಮ ನಡೆಸುವುದು ಕಷ್ಟವಾಗಿದ್ದು, ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಲು ವಿಶೇಷ ಅನುದಾನ ನೀಡಬೇಕು. ಜಿಎಸ್‌ಟಿ ಜಾರಿಗೂ ಮುನ್ನ ವ್ಯಾಟ್‌ ವ್ಯವಸ್ಥೆಯಡಿ ನಾನಾ ಕಾರಣಕ್ಕೆ ತೆರಿಗೆ ಪಾವತಿಸಲು ಸಾಧ್ಯವಾಗದವರು ತೆರಿಗೆ ಪಾವತಿಸಲು ನೀಡಿದ್ದ ಕರಸಮಾಧಾನ ಯೋಜನೆ ಅವಧಿಯನ್ನು ಇನ್ನಷ್ಟು ಕಾಲ ವಿಸ್ತರಿಸಬೇಕು. ಕೆಎಸ್‌ಎಸ್‌ಐಡಿಸಿ, ಕೆಐಎಡಿಬಿಗಳ ಕಾರ್ಯವೈಖರಿ ಚುರುಕುಗೊಳಿಸಿ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು. ಕೈಗಾರಿಕೆಗಳಿಗೆ ತೆರಿಗೆ ಪರಿಷ್ಕರಣೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಕೂಡಲೇ ತೆರಿಗೆ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಮಹಿಳಾ ಉದ್ಯಮಿಗಳಿಗೆ ನೀಡುವ ಶೇ.4ರ ಸಾಲದ ಸಹಾಯಧನಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೆಐಎಡಿಬಿ, ಕೆಎಸ್‌ಎಫ್ಸಿ ಸಂಸ್ಥೆಗಳ ನಿರ್ದೇಶನ ಮಂಡಳಿಯಲ್ಲಿ ಕಾಸಿಯಾಗೆ ಸ್ಥಾನ ನೀಡಬೇಕು. ಎಂಎಸ್‌ ಎಂಇ ಕ್ಷೇತ್ರಕ್ಕೂ ವಿಧಾನ ಪರಿಷತ್‌ ಸದಸ್ಯತ್ವದಲ್ಲಿ ಮಾನ್ಯತೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next