ಇಸ್ಲಾಮಾಬಾದ್/ನವದೆಹಲಿ: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರವೇ ಬೇಷರತ್ತಾಗಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಗುರುವಾರ ಕರೆಯಲಾಗಿದ್ದ ಪಾಕಿಸ್ತಾನದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ವರ್ಧಮಾನ್ ಅವರನ್ನು ಬಿಡುಗಡೆ ಮಾಡುವ ಅಚ್ಚರಿಯ ನಿರ್ಧಾರ ಪ್ರಕಟಿಸಿದರು. ಶಾಂತಿಯ ಸಂಕೇತವಾಗಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಶುಕ್ರವಾರವೇ ಅಭಿನಂದನ್ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಲಿದ್ದಾರೆ.
ಅಭಿನಂದನ್ ಅವರ ಬಿಡುಗಡೆ ಘೋಷಣೆ ಭಾರತಾದ್ಯಂತ ಸಂತಸಕ್ಕೆಡೆ ಮಾಡಿದೆ. ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳು ಇಮ್ರಾನ್ ಖಾನ್ ನಿರ್ಧಾರವನ್ನು ಸ್ವಾಗತಿಸಿವೆ. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸಂಭ್ರಮಿಸಲಾಗಿದೆ. ನಮಗೆ ಯುದ್ಧ ಬೇಕಿಲ್ಲ, ಶಾಂತಿಯೇ ಬೇಕು ಎಂದು ಪಾಕ್‌ನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನವೇ ಆಗಿದೆ.
ಗುರುವಾರ ಬೆಳಗ್ಗೆಯಷ್ಟೇ ಮಾತನಾಡಿದ್ದ ಪಾಕ್‌ನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಅಭಿನಂದನ್ ಬಿಡುಗಡೆಗೆ ನಾವು ಸಿದ್ಧವಿದೆ. ಜತೆಗೆ ಭಾರತದೊಂದಿಗೆ ಶಾಂತಿ ಮಾತುಕತೆಗೂ ಸಿದ್ಧವಿದ್ದು, ಅದೇ ಮುಂದೆ ಬರಬೇಕು ಎಂದಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದ ಭಾರತ, ಅಭಿನಂದನ್ ಬಿಡುಗಡೆ ಸಂಬಂಧ ಯಾವುದೇ ಮಾತುಕತೆಯ ಡೀಲ್ ಇಲ್ಲ, ಮೊದಲು ಉಗ್ರವಾದ ನಿಗ್ರಹಿಸಿ, ನಂತರ ಏನಿದ್ದರೂ ಮಾತು ಎಂದು ಖಡಕ್ಕಾಗಿ ಹೇಳಿತ್ತು. ಅಲ್ಲದೆ, ವಿಂಗ್ ಕಮಾಂಡರ್‌ಗೆ ಯಾವುದೇ ಹಾನಿಯಾಗದಂತೆ ಹುಶಾರಾಗಿ, ಜಿನೇವಾ ಒಪ್ಪಂದಂತೆ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸೂಚಿಸಿತ್ತು. ಇದಕ್ಕೆ ಕೆಲವೊಂದು ದೇಶಗಳು ಬೆಂಬಲ ನೀಡಿದ್ದವು.
ಈ ಮಧ್ಯೆ, ಸಂಜೆ ಪತ್ರಿಕಾಗೋಷ್ಠಿ ನಡೆಸಿದ ವಾಯುಸೇನೆಯ ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ. ಕಪೂರ್, ಇದು ಸದ್ಭಾವನೆಯ ನಡೆ ಎಂದು ಹೇಳಲು ಸಾಧ್ಯವಿಲ್ಲ. ಜಿನೇವಾ ಒಪ್ಪಂದದಂತೆ ಬಿಡುಗಡೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.