Advertisement

ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದವ ಕಾಂಗ್ರೆಸ್ಸಿಗ: ಸಿದ್ಧಲಿಂಗ

06:56 AM Jan 22, 2019 | |

ಕಲಬುರಗಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ವಿರೂಪಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಜೇವರ್ಗಿ ತಾಲೂಕು ನೇಲೋಗಿ ಗ್ರಾಮದ ಯುವಕ ವಿನೋದ ದಬಕಿ ಮತ್ತು ಶ್ರೀರಾಮಸೇನೆಗೆ ಯಾವುದೇ ಸಂಬಂಧವಿಲ್ಲ. ಬದಲಿಗೆ ಆರೋಪಿ ವಿನೋದ ದಬಕಿ ಕಾಂಗ್ರೆಸ್‌ ಮುಖಂಡರ ಬೆಂಬಲಿಗ ಎಂದು ಆಂದೋಲಾ ಶ್ರೀ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ಆರೋಪಿ ವಿನೋದ ದಬಕಿ ಶ್ರೀರಾಮಸೇನೆಗೆ ಸೇರಿದವ ಎಂದು ಕೆಲ ಸಂಘಟನೆಗಳು, ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ ಸುಖಾ ಸುಮ್ಮನೆ ಆರ್‌ಎಸ್‌ಎಸ್‌, ಶ್ರೀರಾಮಸೇನೆಯನ್ನು ದೂರಲಾಗಿದೆ. ಆದರೆ, ಆರೋಪಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವನಾಗಿದ್ದಾನೆ ಎಂದು ಜೇವರ್ಗಿ ಶಾಸಕ ಡಾ| ಅಜಯಸಿಂಗ್‌, ಮಾಜಿ ಮೇಯರ್‌ ಶರಣುಕುಮಾರ ಮೋದಿ ಅವರೊಂದಿಗೆ ವಿನೋದ ದಬಕಿ ಗುರುತಿಸಿಕೊಂಡಿರುವ ಕೆಲ ಪೋಟೋ ಬಿಡುಗಡೆ ಮಾಡಿದರು.

ಪ್ರತಿಭಟನೆ ಸಮಯದಲ್ಲಿ ಅಂಬೇಡ್ಕರ್‌ ಭಾವಚಿತ್ರ ವಿರೂಪಗೊಳಿಸಿರುವುದರ ಹಿಂದೆ ಆಂದೋಲಾ ಶ್ರೀಗಳ ಕೈವಾಡ ಇದೆ ಎನ್ನುವ ರೀತಿಯಲ್ಲಿ ಆರೋಪಿಸಲಾಗಿದೆ. ಶ್ರೀರಾಮಸೇನೆ ಹಾಗೂ ಶ್ರೀರಾಮ-ಸೀತೆ ಬಗ್ಗೆ ತುಚ್ಛ ಪದ ಬಳಕೆ ಮಾಡಲಾಗಿದೆ. ಶ್ರೀರಾಮಸೇನೆ ಕಾರ್ಯಕರ್ತರನ್ನು ಕತ್ತು ಸೀಳಿ ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆ. ಇದನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಜೇವರ್ಗಿ ಬಂದ್‌ ಹಾಗೂ ಆಂದೋಲಾ, ಕರಕಳ್ಳಿ ಗ್ರಾಮಗಳಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಮಾತನಾಡಲಾಗಿದೆ. ಆರೋಪಿ ವಿನೋದ ದಬಕಿ ಶ್ರೀರಾಮಸೇನೆಗೆ ಸೇರಿದವಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟ ಪಡಿಸದೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಸಿ ಶ್ರೀರಾಮಸೇನೆಯನ್ನು ದೂರುವವರ ಬಾಯಿಗೆ ಪೊಲೀಸ್‌ ಇಲಾಖೆ ಬೀಗ ಹಾಕಬಹುದಿತ್ತು. ಪ್ರತಿಭಟನಾಕಾರರ ಮಾತುಗಳನ್ನು ಕೇಳಿಸಿಕೊಂಡು ಪೊಲೀಸರು ಸುಮ್ಮನೆ ನಿಂತಿದ್ದು ಅತ್ಯಂತ ಶೋಚನೀಯ ಎಂದರು.

ಆಗಾಗ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಜೇವರ್ಗಿ ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈಗ ಕಾಂಗ್ರೆಸ್‌ ನಾಯಕರ ಬೆಂಬಲಿಗನೇ ಇಂತಹದೊಂದು ಕೃತ್ಯ ಮಾಡಿದ್ದಾನೆ. ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಸತ್ಯ ಅರಿತು ಪ್ರತಿಭಟನೆ ಮಾಡಿದರೆ ಅದಕ್ಕೆ ಶ್ರೀರಾಮಸೇನೆ ಕೂಡ ಬೆಂಬಲವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾಧಿ, ಶರಣಪ್ಪ ಹೂಗಾರ, ಶಶಿಕಾಂತ ದೀಕ್ಷಿತ, ಮಲ್ಲಣ್ಣ ಗೌಡಪಾಟೀಲ, ಆನಂದ ದೇಸಾಯಿ, ಮಹೇಶ ಗೊಬ್ಬೂರ, ಶರಣು ನಿಂಬರಗಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next