Advertisement

ಕಂಗ್ರಾಟ್ಸ್‌ ಮತ್ತು ಗುಡ್‌ ಲಕ್‌!

03:45 AM Jan 06, 2017 | Team Udayavani |

ಉದ್ದೇಶ ಪೂರ್ವಕ ಅಲ್ಲ, ಒಂದಕ್ಕೊಂದು ಪೂರಕ

Advertisement

ಶಿವರಾಜಕುಮಾರ್‌ ತಮ್ಮ ಮೊದಲ ಚಿತ್ರ “ಆನಂದ್‌’ ಮಾಡುವ ಸಂದರ್ಭದಲ್ಲಿ, ರಮೇಶ್‌ ಸಹ ತಮ್ಮ ಮೊದಲ ಚಿತ್ರದ ಚಿತ್ರೀಕರಣದಲ್ಲಿದ್ದರು. ಹೀಗೆ ಜೊತೆಜೊತೆಗೆ ಶುರುವಾದ ಅವರಿಬ್ಬರ ಚಿತ್ರ ಜೀವನ, ಯಶಸ್ವಿಯಾಗಿ ಮೂವತ್ತು ವರ್ಷಗಳನ್ನು ಮುಗಿಸಿದೆ. ಈ ಮೂವತ್ತು ವರ್ಷಗಳಲ್ಲಿ ಇಬ್ಬರೂ ಅದೆಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೋ, ಅದೆಷ್ಟು ಕ್ಷಣಗಳನ್ನು ಒಟ್ಟಿಗೆ ಕಳೆದಿದ್ದಾರೋ … ಇಬ್ಬರೂ ಜೊತೆಜೊತೆಗೆ ಸಾಗಿ ಬಂದಿದ್ದರೂ, ಇಬ್ಬರ ಚಿತ್ರಗಳು ಯಾವತ್ತೂ ಕ್ಲಾಶ್‌ ಆಗಿರಲಿಲ್ಲವಂತೆ. ಈಗ ಮೂವತ್ತು ವರ್ಷಗಳ ನಂತರ ಮೊದಲ ಬಾರಿಗೆ ಶಿವರಾಜಕುಮಾರ್‌ ಅಭಿನಯದ “ಶ್ರೀಕಂಠ’ ಹಾಗೂ ರಮೇಶ್‌ ಅರವಿಂದ್‌ ಅವರ “ಪುಷ್ಪಕ ವಿಮಾನ’ ಚಿತ್ರಗಳು ಈ ವಾರ ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಈ ಕ್ಲಾಶ್‌ ಬಗ್ಗೆ ಮತ್ತು ಸಸ್ಯಕ್ಕೆ ಏನಾಗುತ್ತಿದೆ ಎಂಬುದರ ಬಗ್ಗೆ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

“ನಾವಿಬ್ಬರು ಒಳ್ಳೆಯ ಫೆಂಡ್ಸ್‌. ಆನ್‌ಸ್ಕ್ರೀನ್‌, ಆಫ್ಸ್ಕ್ರೀನ್‌ ಎರಡೂ ಕಡೆ ನಮ್ಮ ಕೆಮಿಸ್ಟ್ರಿ ಚೆನ್ನಾಗಿದೆ. ನೂರು ಸಿನಿಮಾಗಳನ್ನು ಮಾಡೋದು ಸುಲಭವಲ್ಲ. ನಾವಿಬ್ಬರು ಒಟ್ಟೊಟ್ಟಿಗೆ ಬಂದವರು. ರಮೇಶ್‌ ಈಗ ನೂರನೇ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಕಂಗ್ರಾಟ್ಸ್‌ ಅಂಡ್‌ ಗುಡ್‌ಲಕ್‌ ಹೇಳುತ್ತೇನೆ. ಎರಡೂ ಕೂಡಾ ಬೇರೆ ಬೇರೆ ಜಾನರ್‌ನ ಸಿನಿಮಾಗಳು. ಎರಡೂ ಸಿನಿಮಾಗಳನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ.’

– ಹೀಗೆ ಹೇಳಿ ನಕ್ಕರು ಶಿವರಾಜಕುಮಾರ್‌. ಎರಡೂ ಸಿನಿಮಾಗಳು ಬೇರೆ ಬೇರೆ ರೀತಿಯದ್ದಾಗಿರುವುದರಿಂದ ಜನ ಕೂಡಾ ಇಷ್ಟಪಡುತ್ತಾರೆಂಬ ನಂಬಿಕೆ ಅವರದು. ಆ ನಂಬಿಕೆಯೊಂದಿಗೇ ಅವರು ಈ ವರ್ಷ ಪ್ರಾರಂಭಿಸುತ್ತಿದ್ದಾರೆ. ಕಳೆದ ವರ್ಷ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದೊಂದಿಗೆ   ಶಿವರಾಜಕುಮಾರ್‌ ಅವರ ಅಕೌಂಟ್‌ ಓಪನ್‌ ಆಗಿತ್ತು. ಆ ನಂತರ ಬಂದ “ಶಿವಲಿಂಗ’, “ಕಬೀರ’ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈ ವರ್ಷ “ಶ್ರೀಕಂಠ’. “ಶ್ರೀಕಂಠ’ ಮೂಲಕ ಆರಂಭವಾಗುವ ಹೊಸ ವರ್ಷದ ಜರ್ನಿ ಚೆನ್ನಾಗಿರುತ್ತದೆ ಎಂಬ ವಿಶ್ವಾಸ ಶಿವರಾಜಕುಮಾರ್‌ ಅವರಿಗಿದೆ. ಈ ವರ್ಷ ಅವರ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. “ಶ್ರೀಕಂಠ’, “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’, “ಲೀಡರ್‌’, “ಟಗರು’ ಈ ವರ್ಷ ಬಿಡುಗಡೆಯಾಗಲಿದೆ. ಜೊತೆಗೆ ಮುರಳಿ ಹಾಗೂ ಶಿವರಾಜಕುಮಾರ್‌ ನಟಿಸುತ್ತಿರುವ “ಮಫ್ತಿ’ ಕೂಡಾ ಬಿಡುಗಡೆಯಾಗಲಿದೆ. 

ಇನ್ನು, ಶಿವರಾಜಕುಮಾರ್‌ ಅವರಿಗೆ “ಶ್ರೀಕಂಠ’ ಒಂದು ತಮ್ಮ ಕೆರಿಯರ್‌ನಲ್ಲಿ ವಿಭಿನ್ನ ಸಿನಿಮಾವಾಗಿ ನಿಲ್ಲುವ ವಿಶ್ವಾಸವಿದೆ. ಅದಕ್ಕೆ ಕಾರಣ ಚಿತ್ರದ ಕಥೆ. “ನಿರ್ದೇಶಕ ಮಂಜು ಸ್ವರಾಜ್‌ ಬಂದು ಕಥೆ ಹೇಳಿದಾಗಲೇ ನನಗೆ ಖುಷಿಯಾಯಿತು. ಬೇರೆ ತರಹದ ಕಥೆ. ಕಾಮನ್‌ಮ್ಯಾನ್‌ ಒಬ್ಬನ ಸುತ್ತ ಸುತ್ತುವ ಕಥೆ. ಸಿನಿಮಾದ ನಿರೂಪಣಾ ಶೈಲಿ ಕೂಡಾ ಹೊಸದಾಗಿದೆ. ಈಗಾಗಲೇ ಹಾಡುಗಳ ಬಗ್ಗೆ ಒಳ್ಳೆಯ ಮಾತು ಕೇಳಿಬರುತ್ತಿದೆ. ಅದೇ ರೀತಿ ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಶಿವಣ್ಣ. ಈ ನಡುವೆಯೇ ಶಿವರಾಜಕುಮಾರ್‌ ಅವರಿಗೆ ಕಾಮನ್‌ ಕಥೆಯುಳ್ಳ ಮತ್ತೂಂದು ಸಬೆjಕ್ಟ್ ಕೂಡಾ ಇಷ್ಟವಾಗಿದೆ. ಹೊಸ ಹುಡುಗ ಕಥೆ ಹೇಳಿದ ಕೂಡಲೇ ಇಷ್ಟವಾಯಿತಂತೆ. ಆ ಕಥೆಯಲ್ಲಿ ಶಿವಣ್ಣ ಅವರನ್ನೇ ನೋಡಿಕೊಂಡರಂತೆ. ಅದೇ ಕಾರಣದಿಂದ “ಶ್ರೀಕಂಠ’ ನಿರ್ಮಾಪಕರಲ್ಲೇ ಆ ಸಿನಿಮಾವನ್ನೂ ನಿರ್ಮಿಸುವಂತೆ ಹೇಳಿದ್ದಾರೆ. ಇತ್ತೀಚೆಗೆ “ಶ್ರೀಕಂಠ’ ಚಿತ್ರದ ವೀಡಿಯೋ ತುಣುಕೊಂದು ಸಖತ್‌ ಸೌಂಡ್‌ ಮಾಡಿತ್ತು. ಚಲಿಸುತ್ತಿರುವ ರೈಲಿನಡಿ ಶಿವಣ್ಣ ಮಲಗಿರೋದು. ಈ ವೀಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. “ಪಕ್ಕಾ ಪ್ಲಾನ್‌ ಹಾಗೂ ದೃಢ ಸಂಕಲ್ಪವಿದ್ದರೆ ಯಾವುದೇ ರೀತಿ ಸಾಹಸಗಳನ್ನು ಮಾಡಬಹುದು. ಇದು ಕೂಡಾ ಅಷ್ಟೇ ವಿಲ್‌ ಪವರ್‌ನಿಂದ ಮಾಡಿದ್ದು. ಇದು ಹೊಸದಲ್ಲ. ಈ ಹಿಂದೆ “ಜೋಡಿ’, “ಪ್ರೀತ್ಸೆ’ಯಲ್ಲೂ ಟ್ರೈನ್‌ ಎಪಿಸೋಡ್‌ನ‌ ಸಾಹಸ ದೃಶ್ಯದಲ್ಲಿ ಮಾಡಿದ್ದೆ. ಈ ಬಾರಿ “ಶ್ರೀಕಂಠ’ದಲ್ಲೂ ಇತ್ತು. ಎಲ್ಲರೂ ಬೇಡ ಬೇಡ ಎಂದರು. ಆದರೆ, ಸವಾಲಿನಿಂದ ಮಾಡಬೇಕೆನಿಸಿ, ಮಾಡಿದ್ದೇನೆ. ಅದನ್ನು ಜನ ಎಂಜಾಯ್‌ ಮಾಡುತ್ತಾರೆಂಬ ನಂಬಿಕೆ ಇದೆ’ ಎನ್ನುತ್ತಾರೆ ಶಿವರಾಜಕುಮಾರ್‌. ಇನ್ನು, ಚಿತ್ರದಲ್ಲಿ ಕಟೌಟ್‌ ಹತ್ತುವ ದೃಶ್ಯ ಕೂಡಾ ಇದೆ. ಇದರಲ್ಲೂ ಶಿವಣ್ಣ ಯಾವುದೇ ರೋಪ್‌ ಬಳಸದೇ ಹತ್ತಿದ್ದಾರೆ. ಚಿತ್ರತಂಡ ನೋಡ ನೋಡುತ್ತಿದ್ದಂತೆ 40 ಅಡಿ ಎತ್ತರದ ಕಟೌಟ್‌ ಹತ್ತಿ ಮತ್ತೂಮ್ಮೆ ತಾನು “ಯಂಗ್‌ ಅಂಡ್‌ ಎನರ್ಜಿಟಿಕ್‌’ ಎಂಬುದನ್ನು ತೋರಿಸಿದ್ದಾರೆ. “ಅಭಿಮಾನಿಗಳು ನಮ್ಮ ಕಟೌಟ್‌ ಕಟ್ಟಿ, ಅದನ್ನು ಹತ್ತಿ, ಹಾರ, ಅಭಿಷೇಕ ಮಾಡುತ್ತಾರೆ. ಕಟೌಟ್‌ ಹತ್ತಲು ಅವರು ಎಷ್ಟು ಪಡಲ್ಲ ಹೇಳಿ? ಅದನ್ನು ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ಚಿತ್ರತಂಡ ಬೇಡ ಎಂದರೂ ಯಾವುದೇ ರೋಪ್‌ ಇಲ್ಲದೇ ಹತ್ತಿಬಿಟ್ಟೆ. ಪ್ರೀತಿ, ಅಭಿಮಾನ ಇದ್ದರೆ ಏನು ಬೇಕಾದರೂ ಮಾಡಬಹುದು ಮತ್ತು ಯಾವುದೂ ಕಷ್ಟ ಅಲ್ಲ ಎಂದು ಗೊತ್ತಾಯಿತು’ ಎನ್ನುತ್ತಾ ಕಟೌಟ್‌ ಹತ್ತಿದ್ದ ಬಗ್ಗೆ ಹೇಳುತ್ತಾರೆ ಶಿವಣ್ಣ. ರೈಲು, ಕಟೌಟ್‌ ಸೇರಿದಂತೆ “ಶ್ರೀಕಂಠ’ ಚಿತ್ರದಲ್ಲಿ ಸಾಕಷ್ಟು ಸಾಹಸ ದೃಶ್ಯಗಳಿವೆ. ಅವೆಲ್ಲವೂ ಅಭಿಮಾನಿಗಳಿಗೆ ಖುಷಿ ನೀಡಲಿದ್ದಾರೆಂಬ ವಿಶ್ವಾಸವೂ ಅವರಿಗಿದೆ. 

Advertisement

ಮನಸ್ಸು ಒಪ್ಪಿದ ಒಪ್ಪಂ: ಶಿವರಾಜಕುಮಾರ್‌ ರೀಮೇಕ್‌ ಸಿನಿಮಾ ಮಾಡದೇ 12 ವರ್ಷ ದಾಟಿದೆ. “ಕೋದಂಡರಾಮ’ ನಂತರ ಯಾವುದೇ ರೀಮೇಕ್‌ ನಟಿಸಿರಲಿಲ್ಲ. ರೀಮೇಕ್‌ ಸಿನಿಮಾ ಮಾಡೋದಿಲ್ಲ ಎಂದು ಹೇಳಿದ್ದರು. ಈಗ ಮಲಯಾಳಂನ “ಒಪ್ಪಂ’ ಸಿನಿಮಾವನ್ನು ಮಾಡಲು ಶಿವರಾಜಕುಮಾರ್‌ ಒಪ್ಪಿದ್ದಾರೆ. ಇಷ್ಟು ವರ್ಷಗಳ ನಂತರ ಶಿವಣ್ಣ ರೀಮೇಕ್‌ ಸಿನಿಮಾ ಒಪ್ಪಲು ಕಾರಣವೇನು ಎಂದರೆ ಕಥೆ ಎನ್ನುತ್ತಾರೆ ಶಿವಣ್ಣ. “ಒಪ್ಪಂ ಸಿನಿಮಾ ನೋಡಿದೆ. ತುಂಬಾ ಇಷ್ಟವಾಯಿತು. ಹೃದಯ ತಟ್ಟಿದ ಸಿನಿಮಾವದು. ಅದರಲ್ಲಿ ಗಟ್ಟಿಯಾದ ಒಂದು ಸಂದೇಶ ಹಾಗೂ ಉದ್ದೇಶವಿದೆ.

ಅಂತಹ ಸಿನಿಮಾ ಮೂಲಕ ಮತ್ತಷ್ಟು ಜನರ ಹೃದಯ ತಟ್ಟಬಹುದೆಂಬ ಉದ್ದೇಶದಿಂದ ನಾನು ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಇಮಿಟೇಟ್‌ ಮಾಡಲ್ಲ, ನನ್ನದೇ ಆದ ಶೈಲಿಯಲ್ಲಿ ಆ ಪಾತ್ರವನ್ನು ಮಾಡಬೇಕೆಂದಿದ್ದೇನೆ. ನಾನು ಬರೀ ರೀಮೇಕ್‌ ಸಿನಿಮಾಗಳನ್ನೇ ಮಾಡಿದರೆ ಹತ್ತರಲ್ಲಿ ಹನ್ನೊಂದು ಎನ್ನಬಹುದು. ಆದರೆ, ನಾನು ಈಗ ಒಪ್ಪಿಕೊಂಡಿರೋದು ತುಂಬಾ ಇಷ್ಟವಾದ ಮನಸ್ಸಿಗೆ ನಾಟುವಂತಹ ಒಂದು ಸಿನಿಮಾ. ನಾನು ರೀಮೇಕ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನ್ನಷ್ಟೇ, ಕ್ರೈಮ್‌ ಮಾಡ್ತಿಲ್ಲ’ ಎಂದು “ಒಪ್ಪಂ’ ಮಾಡುವುದನ್ನು ಒಪ್ಪಿಕೊಳ್ಳುತ್ತಾರೆ ಶಿವಣ್ಣ. 

ಎಲ್ಲಾ ನಾಯಕರಿಗೂ ಜವಾಬ್ದಾರಿ ಇದೆ: ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಬಹುತೇಕ ನಾಯಕ ನಟರು ರಿಯಾಲಿಟಿ ಶೋ ಸೇರಿದಂತೆ ಕಿರುತೆರೆ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸುದೀಪ್‌, ಪುನೀತ್‌, ಜಗ್ಗೇಶ್‌, ರಮೇಶ್‌, ಶಿವರಾಜಕುಮಾರ್‌ … ಹೀಗೆ ಅನೇಕರು ಬೇರೆ ಬೇರೆ ಕಾರ್ಯಕ್ರಮಗಳಲ್ಲೂ ಬಿಝಿಯಾಗಿದ್ದಾರೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದು ಇಷ್ಟವಿಲ್ಲ. ನಾಯಕ ನಟರು ಕಿರುತೆರೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಕಿರುತೆರೆಯಲ್ಲಿ ಭಾಗವಹಿಸಬಾರದು ಎಂದು ಅನೇಕ ದಿನಗಳಿಂದ ಹೇಳುತ್ತಲೇ ಬಂದಿದೆ. ಈ ಬಗ್ಗೆ ಕೇಳಿದರೆ ಶಿವಣ್ಣ ಗರಂ ಆಗುತ್ತಾರೆ. “ನೋಡಿ ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಜವಾಬ್ದಾರಿಗಳಿವೆ. ಅದನ್ನು ಯಾರೂ ಹೇಳಿಕೊಡಬೇಕಿಲ್ಲ. ಯಾರದರೂ ಒಬ್ಬ ನಿರ್ಮಾಪಕರು ಬಂದು ರಿಯಾಲಿಟಿ ಶೋನಲ್ಲಿ ತೊಡಗಿರುವುದರಿಂದ ನಮಗೆ ತೊಂದರೆಯಾಗಿದೆ ಎಂದು ಹೇಳಲಿ, ನಾನು ಇಂಡಸ್ಟ್ರಿ ಬಿಡುತ್ತೇನೆ’ ಎನ್ನುತ್ತಾರೆ. 

– ರವಿಪ್ರಕಾಶ್‌ ರೈ
**
“ನಾವಿಬ್ಬರೂ ಐದಾರು ಸಿನಿಮಾಗಳಲ್ಲಿ ಜೊತೆಗೆ ಮಾಡಿದ್ವಿ. ಯಾವತ್ತೂ ನಮ್ಮಿಬ್ಬರ ಸಿನಿಮಾಗಳು ಕ್ಲಾಶ್‌ ಆಗಿರಲಿಲ್ಲ. ಇದೀ ಫ‌ಸ್ಟ್‌ ಟೈಮ್‌ ಇರಬೇಕು. ಉದ್ದೇಶಪೂರ್ವಕ ಎಲ್ಲ ಅಲ್ಲ. ನಮುª ಸ್ವಲ್ಪ ನಿಧಾನ ಆಯ್ತು. ಅವರಿಗೂ ಆರನೇ ತಾರೀಖು ಬಂದರೆ ಬೆಟರ್‌ ಅನಿಸಿರಬೇಕು. ಹಾಗಾಗಿ ಅವತ್ತೇ ಬಿಡುಗಡೆಯಾಗುತ್ತಿದೆ. ಇಲ್ಲಿ ಸ್ಪರ್ಧೆ ಅಂತೇನಿಲ್ಲ. ಮೇ ದಿ ಬೆಟರ್‌ ವಿನ್‌ …’ ಎನ್ನುತ್ತಲೇ ಮಾತು ಶುರು ಮಾಡಿದರು ರಮೇಶ್‌ ಅರವಿಂದ್‌.

“ಪುಷ್ಪಕ ವಿಮಾನ’ ಬಗ್ಗೆ ರಮೇಶ್‌ ಅರವಿಂದ್‌ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. 100ನೇ ಚಿತ್ರ ಎಂಬ ಕಾರಣಕ್ಕಷ್ಟೇ ಅಲ್ಲ, ವಿಭಿನ್ನವಾಗಿದೆ ಎಂಬ ಕಾರಣಕ್ಕೆ. “ನಿರ್ದೇಶಕರು ಕಥೆ ಹೇಳಿದಾಗಲೇ, ಚಿತ್ರದಲ್ಲಿ ಬೇರೆ ಚಿತ್ರಗಳ ಸ್ಫೂರ್ತಿ ಇದೆ ಅಂತ ಅನಿಸಿತ್ತು. ಆದರೆ, ಅದನ್ನು ಅವರು ತಮ್ಮದೇ ರೀತಿಯಲ್ಲಿ ಚೆನ್ನಾಗಿ ಹೇಳಿದರು. ಇಷ್ಟು ಚಿತ್ರಗಳಲ್ಲಿ ಬುದ್ಧಿ ಮಾಂದ್ಯನ ಪಾತ್ರ ಮಾಡಿರಲಿಲ್ಲ. ಹಾಗಾಗಿ ಒಪ್ಪಿಕೊಂಡೆ. ಇನ್ನು ಅದನ್ನು ಹೇಗೆ ಮಾಡಬೇಕು, ಮ್ಯಾನರಿಸಂ ಯಾವ ತರಹ ಇರಬೇಕು ಎಂದೆಲ್ಲಾ ಯೋಚನೆ ಮಾಡೋಕೆ ಶುರು ಮಾಡಿದೆ. ಒಬ್ಬ ಬುದ್ಧಿ ಮಾಂದ್ಯನಿಗೆ ಡ್ರೆಸ್ಸಿಂಗ್‌ ಸೆನ್ಸ್‌ ಇರುತ್ತೆ ಅಂತ ನನಗೆ ಸಂಶಯ. ಯಾವಾಗಲೂ ಒಂದೇ ಬಟ್ಟೆ ಹಾಕಿಕೊಂಡಿರುತ್ತಾನೆ. ಯಾವ ತರಹ ಬಟ್ಟೆ ಹಾಕಿಕೊಂಡಿರುತ್ತಾನೆ ಎಂದಾಗ ನೇತಾಜಿ ಲಿಂಕ್‌ ಸಿಗು¤. ಅವರನ ತಾತ ಸುಭಾಷ್‌ ಚಂದ್ರ ಬೋಸ್‌ ಅವರ ಆರ್ಮಿಯಲ್ಲಿ ಇರ್ತಾರೆ. ಅವರು ಕೊಟ್ಟ ಯೂನಿಫಾರ್ಮ್ ಇದು. ಕರ್ಣಂಗೆ ಕವಚ ಹೇಗೋ, ಇವನಿಗೂ ಆ ಯೂನಿಫಾರ್ಮ್ ಹಾಗೆ. ಎಲ್ಲರೂ ಅವನನ್ನ ಗೂರ್ಖ ಅಂದುಕೊಂಡಿದ್ದಾರೆ. ಗೂರ್ಖ ಅಲ್ಲ ಅವನು’ ಎಂದು ಸ್ಪಷ್ಟಪಡಿಸಿದರು ರಮೇಶ್‌.

ಅನಂತರಾಮಯ್ಯನ ಪಾತ್ರ ಮಾಡೋದು ಸವಾಲಾಗಿತ್ತಂತೆ. ಮೊದಲ ಹೇಳಿದಂತೆ, ಅವನ ಮ್ಯಾನರಿಸಂ ಹೇಗಿರಬೇಕು ಎಂದು ಫಿಕ್ಸ್‌ ಮಾಡೋದು ಕಷ್ಟವಾಯಿತಂತೆ. “ತುಂಬಾ ಕಷ್ಟ ಆಯ್ತು. ಇಲ್ಲಿ ರಮೇಶ್‌ ಅರವಿಂದ್‌ ಕಾಣುವುದಕ್ಕಿಂತ ಅನಂತರಾಮಯ್ಯ ಕಾಣಬೇಕು. ಅವನದ್ದೂ ಅಂತ ಒಂದಿಷ್ಟು ಬೇರೆ ತರಹದ ಮ್ಯಾನರಿಸಂ ಬೇಕಿತ್ತು. ಏನು ಮಾಡೋದು ಅಂತ ಯೋಚಿಸುತ್ತಿದ್ದಾಗ ಎರಡೂ¾ರು ಐಡಿಯಾಗಳು ಹೊಳೆಯಿತು. “ರೇ’ ಚಿತ್ರೀಕರಣಕ್ಕೆ ಮಡಿಕೇರಿಗೆ ಹೋದಾಗ, ಅಲ್ಲೊಬ್ಬನನ್ನು ನೋಡಿದ್ದೆ. ಮೊದಲಿಗೆ ಅವನು ಯಾವುದೋ ದಿಕ್ಕಿನಲ್ಲಿ ನಡೆದು ಹೋಗುತ್ತಿರುತ್ತಾನೆ, ಸಡನ್‌ ಆಗಿ ತನ್ನ ದಿಕ್ಕು ಬದಲಿಸಿ ಇನ್ನೆಲ್ಲೋ ಹೊರಟು ಹೋಗುತ್ತಾನೆ. ಎಲ್ಲರೂ ಮುಂಬೆರಳು ತೋರಿಸಿ ದಿಕ್ಕು ತೋರಿಸಿದರೆ, ಅವನು ಮಧ್ಯದ ಬೆರಳು ತೋರಿಸುತ್ತಾನೆ. ಇನ್ನು ಅವನು ಯಾವತ್ತೂ ಡಲ್‌ ಆಗಿರಬೇಕು ಅಂತ ತೋರಿಸೋಕೆ, ಏನಾದರೊಂದು ವಿಶಿಷ್ಟವಾಗಿ ಬೇಕಿತ್ತು. ಕೊನೆಗೆ ಕೆಳತುಟಿಯನ್ನು ಮಡಸಿಕೊಂಡು ಮಾತಾಡುವ ಪ್ರಯತ್ನ ಮಾಡಿದೆ. ಇವೆಲ್ಲಾ ಸೇರಿ ಅನಂತರಾಮಯ್ಯ ಆಯ್ತು’ ಎಂದು ಅನಂತರಾಮಯ್ಯ ಆದ ಬಗ್ಗೆಯನ್ನು ಅವರು ಹೇಳಿಕೊಂಡರು.

ಇನ್ನು 100 ಚಿತ್ರಗಳನ್ನು ಪೂರೈಸುವ ಬಗ್ಗೆ ಮಾತಾಡುವ ಅವರು, “ನಾನು ಚಿಕ್ಕವನಾಗಿದ್ದಾಗ, ನಮ್ಮ ಇಡೀ ಫ್ಯಾಮಿಲಿ ಶಾಂತಿ ಟಾಕೀಸಿಗೆ ಹೋಗಿ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ವಿ. ಹಾಗೆ ಹೋಗುವಾಗ, ಎಲ್ಲಿ ಹೌಸ್‌ಫ‌ುಲ್‌ ಬೋರ್ಡ್‌ ಹಾಕಿಬಿಡುತ್ತಾರೋ ಎಂಬ ಭಯ ಆಗೋದು. ಸಿನಿಮಾ ನೋಡಿದ ಮೇಲೆ ಚಪ್ಪಾಳೆ ತಟ್ಟಿ, ಖುಷಿಪಡೋದು ಅಷ್ಟೇ ಗೊತ್ತು. ಮುಂದೊಂದು ದಿನ ಚಿತ್ರರಂಗಕ್ಕೆ ಬರಬಹುದು, ನೂರು ಚಿತ್ರಗಳನ್ನ ಪೂರೈಸಬಹುದು ಅಂತ ಯಾವತ್ತೂ ಯೋಚಿಸಿರಲಿಲ್ಲ. ಚಿತ್ರರಂಗಕ್ಕೆ ಬಂದೆ. ಸುಮ್ಮನೆ ಕೆಲಸ ಮಾಡುತ್ತಾ ಹೋದೆ. ಒಂದೊಂದೇ ಚುಕ್ಕೆಗಳನ್ನ ಇಟ್ಟೆ. ಆ ಚುಕ್ಕೆಗಳೆಲ್ಲಾ ಸಢರಿ ಈಗ ರಂಗೋಲಿಯಾಗಿದೆ. ಇಡೀ ಪಯಣವನ್ನು ಪ್ರೇಕ್ಷಕನಿಗೆ ಅರ್ಪಿಸೋಕೆ ಇಷ್ಟಪಡುತ್ತೀನಿ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೀನಿ. ಕುಟುಂಬದವರ, ಚಿತ್ರತಂಡದವರ ಸಹಕಾರ ಇರುತ್ತೆ, ಎಲ್ಲಾ ಓಕೆ. ಆದರೆ, ಕಲಾರಸಿಕರು ಚಿತ್ರ ನೋಡಿ ಪ್ರೋತ್ಸಾಹಿಸದಿದ್ದರೆ ಇಷ್ಟು ದೂರ ಬರೋದು ಅಸಾಧ್ಯ’ ಎನ್ನುತ್ತಾರೆ ರಮೇಶ್‌.

ಈ ರಂಗೋಲಿ ಹೀಗಿರಬೇಕು ಎಂದು ಅವರು ಯಾವತ್ತಾದರೂ ಯೋಚಿಸಿದ್ದರಾ? ಖಂಡಿತಾ ಇಲ್ಲ ಎನ್ನುತ್ತಾರೆ ಅವರು. “ರಂಗೋಲಿ ಹೀಗಿರಬೇಕು ಎಂದು ಯಾವತ್ತೂ ಯೋಚಿಸಿರಲಿಲ್ಲ. ಇವತ್ತಿನ ಕೆಲಸ ಪಫೆìಕ್ಟ್ ಆಗಿ ಮಾಡಬೇಕು ಅನ್ನೋದಷ್ಟೇ ಉದ್ದೇಶವಾಗಿತ್ತು. ಹೀಗೇ ಇರಬೇಕು, ಇಂಥ ಪಾತ್ರವೇ ಮಾಡಬೇಕು ಅಂತ ಯಾವತ್ತೂ ಯೋಚಿಸಿರಲಿಲ್ಲ. ಸುಮ್ಮನೆ ಮಾಡುತ್ತಾ ಹೋದೆ. ಬೇರೆ ಭಾಷೆಗಳಲ್ಲಿ ನಟನೆ, ಸಣ್ಣ ಪಾತ್ರಗಳು ಅಂತೆಲ್ಲಾ ಸೇರಿ 140 ಚಿತ್ರಗಳಾಗಿವೆ. ಹೀರೋ ಆಗಿ 100ನೇ ಚಿತ್ರ ಇದು. ಅಷ್ಟೇ ಅಲ್ಲ, 100 ಪರ್ಸೆಂಟ್‌ ತೃಪ್ತಿ ಕೊಟ್ಟಂತ ಸಿನಿಮಾ ಇದು’ ಎಂದು ಹೇಳುತ್ತಾ ಹೋದರು ರಮೇಶ್‌.

ಇನ್ನು ಮುಂದೇನು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಈ ಚಿತ್ರದ ಬಿಡುಗಡೆಯ ನಂತರ ಎಂದಷ್ಟೇ ಹೇಳುತ್ತಾರೆ ಅವರು. ನಟನೆ, ನಿರ್ದೇಶನ, ನಿರೂಪಣೆ ಎಲ್ಲವೂ ಈ ವರ್ಷವೂ ಮುಂದುವರೆಯಲಿದೆಯಂತೆ.

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next