Advertisement

ಮಾಲೀಕನ ಕೈಸೇರಿದ ಆಫ್ರಿಕನ್‌ ಗಿಳಿ!

06:00 AM Oct 04, 2018 | |

ಬೆಂಗಳೂರು: ಕಳುವಾಗಿದ್ದ ಅಪರೂಪದ ಮಾತನಾಡುವ “ಆಫ್ರಿಕನ್‌ ಗಿಳಿ’ ಮರಳಿ ಮಾಲೀಕರ ಕೈ ಸೇರಿದೆ. ಹಕ್ಕಿ ಕಾಲಿಗೆ ರಿಂಗ್‌ ಅಳವಡಿಸದೇ ಇರುವುದು ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ ಗಿಳಿ ಮರಳಿ ಮಾಲೀಕನ ಕೈಸೇರಲು ನೆರವಾಗಿದೆ!

Advertisement

53 ಸಾವಿರ ರೂ. ಬೆಲೆಬಾಳುವ ಬೂದು ಬಣ್ಣದ ಆಫ್ರಿಕನ್‌ ಗಿಳಿ (ಕಾಂಗೋ ಗ್ರೇ ಪ್ಯಾರಟ್‌) ಇಲ್ಲಿನ ಎಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿರುವ ಪಕ್ಷಿಗಳ ಮಾರಾಟದ ಅಂಗಡಿಯಿಂದ ಕಳೆದ ಆರು ದಿನಗಳ ಹಿಂದೆ ಕಳುವಾಗಿತ್ತು. ಇದೇ ವೇಳೆ, ಒಂದು ಜೊತೆ ಆಫ್ರಿಕನ್‌ ಲವ್‌ ಬರ್ಡ್ಸ್‌, ಆಸ್ಟ್ರೇಲಿಯಾ ಮೂಲದ ಕಾಕ್‌ಟೈಲ್‌, ಅಲ್ಬಿನೋ ಕಾಕ್‌ಟೈಲ್‌ ಜಾತಿ ಪಕ್ಷಿಗಳು, ಎಂಟು ಫಿಂಚಸ್‌ ಪಕ್ಷಿಗಳು ಕಳುವಾಗಿದ್ದವು. ಈ ಸಂಬಂಧ ಅಂಗಡಿ ಮಾಲೀಕ ಪ್ರದೀಪ್‌ ಯಾದವ್‌ ಎಂಬವರು, ಪಕ್ಷಿಗಳನ್ನು ಕದ್ದೊಯ್ದ ಕಳ್ಳರನ್ನು ಬಂಧಿಸುವಂತೆ ಕೋರಿ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ಸಾಮಾನ್ಯವಾಗಿ ಪಕ್ಷಿಗಳ ಕಳವಿನ ಬಗ್ಗೆ ದೂರುಗಳು ಬರುವುದಿಲ್ಲ. ಆರೋಪಿಗಳ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಳುವಾದ ಗಿಳಿ ಸಿಕ್ಕಿದ್ದು ಹೇಗೆ?:
ಎಚ್‌ಎಎಲ್‌ ಮಾರ್ಕೆಟ್‌ನಲ್ಲಿರುವ ಪ್ರದೀಪ್‌ ಯಾದವ್‌ಗೆ ಸೇರಿದ ಅಂಗಡಿಯಲ್ಲಿ ಸೆ.27ರಂದು ರಾತ್ರಿ ನಾಲ್ಕು ತಿಂಗಳ ಆಫ್ರಿಕನ್‌ ಗಿಳಿ, ಎರಡು ಆಫ್ರಿಕನ್‌ ಲವ್‌ ಬರ್ಡ್ಸ್‌, ಎರಡು ಅಲ್ಬಿನೋ ಕಾಕ್‌ಟೈಲ್‌ ಪಕ್ಷಿಗಳು, ಎಂಟು ಫಿಂಚಸ್‌ ಪಕ್ಷಿಗಳನ್ನು ಕಳ್ಳರು ಕದ್ದೊಯ್ದಿದ್ದರು ಎಂದು ಅಂಗಡಿ ಮಾಲೀಕರು ತಿಳಿಸಿದ್ದು, ಗಿಳಿ ಮಾತ್ರ ತಮ್ಮ ಕೈಸೇರಿರುವ ಬಗ್ಗೆ ಉದಯವಾಣಿಗೆ ವಿವರಿಸಿದರು.

“”ಬೆಂಗಳೂರಿನ ಪಕ್ಷಿಗಳ ಮಾರಾಟಗಾರರಾದ ನಾವೆಲ್ಲ ಸೇರಿ ಮಾಡಿಕೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಘಟನೆಯ ಮಾಹಿತಿ ಹಂಚಿಕೊಂಡಿದ್ದೆ. ನನ್ನ ಬಳಿ ಇದ್ದ ಆಫ್ರಿಕನ್‌ ಗಿಳಿಯ ಕಾಲಿಗೆ ಯಾವುದೇ ರೀತಿಯ ರಿಂಗ್‌ ಹಾಕಿರಲಿಲ್ಲ ಎಂದೂ ಹೇಳಿದ್ದೆ. ಇದಾದ ಎರಡು ದಿನಗಳ ಬಳಿಕ ಶಿವಕುಮಾರ್‌ ಎಂಬುವವರ ಅಂಗಡಿಯಲ್ಲಿ ಹೊಸದಾಗಿ ಆಫ್ರಿಕನ್‌ ಗಿಳಿ ಬಂದಿದೆ ಎಂಬ ಮಾಹಿತಿ ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿದಾಗ ಗಿಳಿ ನನ್ನದೇ ಎಂದು ಖಚಿತವಾಯಿತು. 

Advertisement

ಈ ಬಗ್ಗೆ ವಿಚಾರಿಸಿದಾಗ, ಶಿವಕುಮಾರ್‌, 22 ಸಾವಿರ ರೂ.ಗಳಿಗೆ ಅಪರಿಚಿತರೊಬ್ಬರು ಮಾರಾಟ ಮಾಡಿದ್ದಾರೆ. ಬೇಕಾದರೆ ವಾಪಾಸ್‌ ಪಡೆದುಕೊಳ್ಳಿ ನಿಮ್ಮದು ಎಂದು ಗೊತ್ತಿರಲಿಲ್ಲ ಎಂದು ಗಿಳಿ ವಾಪಾಸ್‌ ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ. ಕದ್ದೊಯ್ದ ಉಳಿದ ಪಕ್ಷಿಗಳಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದೂ ತಿಳಿಸಿದರು.

ಆಫ್ರಿಕನ್‌ ಗಿಳಿ ವಿಶೇಷತೆ ಏನು?
ಆಫ್ರಿಕನ್‌ ದೇಶದಲ್ಲಿ ಕಂಡು ಬರುವ ಕಂದು ಬಣ್ಣದ ಗಿಳಿ ಮಾತನಾಡಬಲ್ಲವು. ಅತ್ಯಂತ ಸೂಕ್ಷ್ಮ ಹಾಗೂ ಜಾಣ್ಮೆಯ ಪಕ್ಷಿ ಇದಾಗಿರುತ್ತದೆ. ಭಾರತೀಯ ಗಿಳಿಗಳಿಗಿಂತಲೂ  ಹೆಚ್ಚು ಚುರುಕುತನದಿಂದ ಕೂಡಿರುತ್ತದೆ. ಜನರ ಭಾಷೆಯನ್ನು ಬೇಗ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದರದ್ದಾಗಿರುತ್ತದೆ. ಹಾಗೇ ಪ್ರತಿಕ್ರಿಯಿಸುತ್ತದೆ ಕೂಡ. ಈ ಗಿಳಿಯ ವಯಸ್ಸಿನ ಪ್ರಮಾಣ 75 ವರ್ಷಗಳು. ಅಲ್ಲದೆ, ಭಾರತೀಯ ಗಿಳಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ. ಆದರೆ, ಆಫ್ರಿಕನ್‌ ಗಿಳಿ ಇಟ್ಟುಕೊಳ್ಳಲು ಅವಕಾಶವಿದೆ. ಹೀಗಾಗಿಯೇ ಆಫ್ರಿಕನ್‌ ಗಿಳಿಗಳಿಗೆ ಬೇಡಿಕೆಯೂ ಹೆಚ್ಚಿದೆ.

ಗಿಳಿಯಂತೂ ಸಿಕ್ಕಿದೆ. ಇನ್ನೂ ಉಳಿದ ಹಕ್ಕಿಗಳು ಸಿಕ್ಕಿಲ್ಲ. ಗಿಳಿ ಯಾರ ಬಳಿಯಿಂದ ಶಿವಕುಮಾರ್‌ ಕೈ ಸೇರಿತ್ತು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪಕ್ಷಿಗಳ ಕಳವು ಮಾಡಿರುವ ಆರೋಪಿಗಳನ್ನು ಪೊಲೀಸರು ಬಂಧಿಸುವ ವಿಶ್ವಾಸವಿದೆ.
– ಪ್ರದೀಪ್‌ ಯಾದವ್‌, ದೂರುದಾರ

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next