Advertisement
ಜಾಗತಿಕವಾಗಿ ಪ್ರತಿವರ್ಷ ಅಂದಾಜು 3,03,000 ಶಿಶುಗಳು ಜನಿಸಿದ ಮೊದಲ ನಾಲ್ಕು ತಿಂಗಳುಗಳ ಒಳಗೆ ಜನ್ಮತಃಅನಾರೋಗ್ಯಗಳಿಂದಾಗಿ ಮೃತಪಡುತ್ತವೆ. ಜನ್ಮತಃ ಅನಾರೋಗ್ಯಗಳು ದೀರ್ಘಕಾಲಿಕ ವೈಕಲ್ಯಗಳಿಗೆ ಕಾರಣವಾಗಬಲ್ಲವು, ಇದು ವೈಕಲ್ಯ ಹೊಂದಿರುವ ಶಿಶು, ಅವರ ಕುಟುಂಬ, ಆರೋಗ್ಯ ಸೇವಾ ವ್ಯವಸ್ಥೆ ಮತ್ತು ಸಮಾಜದ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬಹಳ ಸಾಮಾನ್ಯವಾಗಿ ಕಂಡುಬರುವ ಜನ್ಮತಃ ವೈಕಲ್ಯಗಳೆಂದರೆ, ಹೃದಯದ ವೈಕಲ್ಯಗಳು, ನ್ಯೂರಲ್ ಟ್ಯೂಬ್ ವೈಕಲ್ಯಗಳು ಮತ್ತು ಡೌನ್ ಸಿಂಡ್ರೋಮ್‌ನಂತಹ ಕ್ರೊಮೊಸೋಮಲ್ ಅಸಹಜತೆಗಳು. ಜನ್ಮತಃ ವೈಕಲ್ಯಗಳಿಗೆ ಕಾರಣಗಳು ವಂಶವಾಹಿ, ಸೋಂಕು, ಪೌಷ್ಟಿಕಾಂಶ ಅಥವಾ ಪಾರಿಸರಿಕ- ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಗಿರಬಹುದಾದ್ದರಿಂದ ನಿಖರವಾದ ಕಾರಣವನ್ನು ಹೇಳುವುದು ಕಷ್ಟ. ಎಲ್ಲವನ್ನೂ ಅಲ್ಲದಿದ್ದರೂ ಕೆಲವಾದರೂ ಸಂಭಾವ್ಯ ವೈಕಲ್ಯಗಳನ್ನು ಲಸಿಕೆಗಳು, ಸೂಕ್ತ ಪ್ರಮಾಣದಲ್ಲಿ ಫೋಲಿಕ್ ಆ್ಯಸಿಡ್ ಅಥವಾ ಅಯೋಡಿನ್‌ಗಳನ್ನು ಪೂರಕ ಆಹಾರಗಳು ಯಾ ಆಹಾರದ ಮೂಲಕ ಸೇವನೆ ಹಾಗೂ ಪ್ರಸವಪೂರ್ವ ಸಮರ್ಪಕವಾದ ಆರೈಕೆಯಿಂದ ತಡೆಯಬಹುದಾಗಿದೆ.
ಇಮ್ಮಡಿಗೊಳಿಸುತ್ತದೆ. ಜನ್ಮತಃ ವೈಕಲ್ಯಗಳು ಉಂಟಾಗುವುದಕ್ಕೆ ಹೆತ್ತವರ ಬಡತನ ಅಥವಾ ಕಡಿಮೆ ಆದಾಯ ಪರೋಕ್ಷವಾಗಿ ಕಾರಣವಾಗಬಹುದು. ಬಡತನ ಅಥವಾ ಕಡಿಮೆ ಆದಾಯವು ಸಾಕಷ್ಟು ಪೌಷ್ಟಿಕವಾದ ಆಹಾರಗಳು ಗರ್ಭಿಣಿಗೆ ಲಭಿಸದಿರುವುದು, ಸೋಂಕು ಮತ್ತು ಮದ್ಯದಂತಹ ಅಪಾಯಕಾರಿ ಅಂಶಗಳಿಗೆ ಒಡ್ಡಿಕೊಳ್ಳುವುದು ಅಥವಾ ಆರೋಗ್ಯ ಸೇವೆ ಮತ್ತು ತಪಾಸಣೆ ಪಡೆದುಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕಾರಣವಾಗುತ್ತದೆ. ತೀವ್ರತರಹದ ಜನ್ಮತಃ ವೈಕಲ್ಯಗಳಲ್ಲಿ ಶೇ.94ರಷ್ಟು ಕಡಿಮೆ ಮತ್ತು ಮಧ್ಯಮ ಆದಾಯವುಳ್ಳ ದೇಶಗಳಲ್ಲಿಯೇ ಕಂಡುಬರುತ್ತವೆ ಎಂಬುದಾಗಿ ಅಂದಾಜಿಸ ಲಾಗಿದೆ. ಕಡಿಮೆ ಆದಾಯದ ಜತೆಗೆ ಸಂಬಂಧ ಹೊಂದಿರುವ ಈ ಅಂಶಗಳು ಭ್ರೂಣದ ಅಸಹಜ ಬೆಳವಣಿಗೆಗೆ ಕಾರಣವಾಗಬಹುದು ಅಥವಾ ಆ ಅಪಾಯವನ್ನು ಹೆಚ್ಚಿಸಬಹುದು. ಭ್ರೂಣವು ತಾಯಿಯ ಗರ್ಭದಲ್ಲಿ ಅಸಹಜವಾಗಿ ಬೆಳೆಯುವುದಕ್ಕೆ ತಾಯಿಯ ವಯಸ್ಸು ಕೂಡ ಒಂದು ಅಪಾಯಾಂಶವಾಗಿದೆ. 35 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನಲ್ಲಿ ಗರ್ಭ ಧಾರಣೆಯು ಡೌನ್ ಸಿಂಡ್ರೋಮ್ ಸಹಿತ ಕ್ರೊಮೊಸೋಮಲ್ ಅಸಹಜತೆಗಳು ಉಂಟಾಗುವ ಸಾಧ್ಯತೆಯನ್ನು ವೃದ್ಧಿಸುತ್ತದೆ.
Related Articles
Advertisement
ಪ್ರತಿಬಂಧಕ ಕ್ರಮಗಳುಪ್ರತಿಬಂಧಕ ಸಾರ್ವಜನಿಕ ಆರೋಗ್ಯ ಕ್ರಮಗಳ ಮೂಲಕ ಅಪಾಯಾಂಶಗಳನ್ನು ದೂರ ಮಾಡಿ, ರಕ್ಷಣಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಜನ್ಮತಃ ವೈಕಲ್ಯಗಳು ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಪ್ರಾಮುಖ್ಯವಾದ ಪ್ರಯತ್ನಗಳು ಮತ್ತು ಕ್ರಮಗಳು ಹೀಗಿವೆ:
1. ಹದಿಹರಯದ ಬಾಲಕಿಯರು ಮತ್ತು ತಾಯಂದಿರು ವಿವಿಧ ತರಕಾರಿಗಳು ಮತ್ತು ಹಣ್ಣುಹಂಪಲುಗಳಿಂದ ಸಮೃದ್ಧವಾದ ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರವನ್ನು ಸೇವಿಸಬೇಕು ಮತ್ತು ಆರೋಗ್ಯಪೂರ್ಣ ದೇಹತೂಕವನ್ನು ಕಾಯ್ದುಕೊಳ್ಳಬೇಕು.
2. ವಿಟಮಿನ್‌ಗಳು ಮತ್ತು ಖನಿಜಾಂಶಗಳು, ಅದರಲ್ಲೂ ನಿರ್ದಿಷ್ಟವಾಗಿ ಕಬ್ಬಿಣಾಂಶ, ಅಯೋಡಿನ್ ಮತ್ತು ಫೋಲಿಕ್ ಆ್ಯಸಿಡ್‌ಗಳನ್ನು ಹದಿಹರಯದ ಬಾಲಕಿಯರು ಮತ್ತು ತಾಯಂದಿರು ಸೇವಿಸುವುದು ಅಗತ್ಯ.
3. ಗರ್ಭಧರಿಸಿದ ಮಹಿಳೆಯರು ಹಾನಿಕಾರಕ ವಸ್ತುಗಳು, ವಿಶೇಷವಾಗಿ ತಂಬಾಕು ಮತ್ತು ಮದ್ಯಗಳಿಂದ ದೂರವಿರಬೇಕು.
4. ಜನ್ಮತಃ ವೈಕಲ್ಯವನ್ನು ಉಂಟು ಮಾಡುವ ಸೋಂಕುಗಳ ಹಾವಳಿ ಇರುವ ಪ್ರದೇಶಗಳಿಗೆ ಗರ್ಭಿಣಿ ಮಹಿಳೆಯರು (ಕೆಲವೊಮ್ಮೆ ಗರ್ಭ ಧರಿಸಬಹುದಾದ ವಯಸ್ಸಿನವರೂ ಕೂಡ) ಪ್ರವಾಸ ಕೈಗೊಳ್ಳುವುದರಿಂದ ದೂರವಿರಬೇಕು.
5. ಗರ್ಭ ಧರಿಸಿದ ಅವಧಿಯಲ್ಲಿ ಹಾನಿಕಾರಕ ಅಂಶಗಳ (ಉದಾ.: ಭಾರಲೋಹಗಳು, ಕೀಟನಾಶಕಗಳು) ಸಂಪರ್ಕ ಉಂಟಾಗುವುದನ್ನು ತಪ್ಪಿಸಬೇಕು ಅಥವಾ ಕಡಿಮೆ ಮಾಡಬೇಕು.
6. ಗರ್ಭ ಧರಿಸುವುದಕ್ಕೆ ಮುನ್ನ ಮತ್ತು ಆ ಬಳಿಕ ಮಧುಮೇಹವನ್ನು ಆಪ್ತಸಮಾಲೋಚನೆ, ತೂಕ ನಿರ್ವಹಣೆ, ಪಥ್ಯಾಹಾರ ಮತ್ತು ಅಗತ್ಯವಿದ್ದಾಗ ಇನ್ಸುಲಿನ್ ಮೂಲಕ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು.
7. ಗರ್ಭಿಣಿ ಮಹಿಳೆಯು ಯಾವುದೇ ಔಷಧ ಅಥವಾ ವೈದ್ಯಕೀಯ ವಿಕಿರಣ (ಮೆಡಿಕಲ್ ಇಮೇಜಿಂಗ್, ಎಕ್ಸ್ ರೇ ಇತ್ಯಾದಿ)ಗಳಿಗೆ ಅಗತ್ಯವಿದ್ದಲ್ಲಿ ಮಾತ್ರ ಒಳಗಾಗಬೇಕು ಮತ್ತು ಇದು ಕೂಲಂಕಷ ಆರೋಗ್ಯ ಲಾಭ – ದುಷ್ಪರಿಣಾಮಗಳನ್ನು ತುಲನೆ ಮಾಡಿಯೇ ನಡೆಯಬೇಕು.
8. ಮಹಿಳೆಯರು ಮತ್ತು ಮಕ್ಕಳಿಗೆ ರುಬೆಲ್ಲಾ ವೈರಸ್ ವಿರುದ್ಧ ಲಸಿಕೆ ಹಾಕಿಸುವುದು.
9. ಜನ್ಮತಃ ವೈಕಲ್ಯಗಳ ನಿವಾರಣೆಯನ್ನು ಪ್ರವರ್ಧಮಾನಕ್ಕೆ ತರುವ ಆರೋಗ್ಯ ಸೇವಾ ವೃತ್ತಿಪರರು ಮತ್ತು ಇತರರಿಗೆ ಈ ಕುರಿತ ಅರಿವು ಮತ್ತು ಶಿಕ್ಷಣವನ್ನು ಬಲಪಡಿಸುವುದು.
10. ಸೋಂಕುಗಳು ಅದರಲ್ಲೂ ವಿಶೇಷವಾಗಿ ರುಬೆಲ್ಲಾ, ವೇರಿಸೆಲ್ಲಾ, ಸಿಫಿಲಿಸ್‌ಗಳನ್ನು ಪರೀಕ್ಷಿಸಿ ಗುರುತಿಸುವುದು ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು. ಅತ್ಯಾಧುನಿಕ ವೈದ್ಯಕೀಯ ಇಮೇಜಿಂಗ್ ಯಂತ್ರಗಳಾದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು ಎಂಆರ್‌ಐ ಯಂತ್ರಗಳು ಹಾಗೂ ಜನ್ಮತಃ ವೈಕಲ್ಯಗಳನ್ನು ಗುರುತಿಸುವ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಜನ್ಮತಃ ವೈಕಲ್ಯಗಳನ್ನು ಭ್ರೂಣ ಹಂತದಲ್ಲಿಯೇ ಗುರುತಿಸುವ ದರದಲ್ಲಿ ಏರಿಕೆಯಾಗಿದೆ. ಜನ್ಮತಃ ವೈಕಲ್ಯ ಹೊಂದಿರುವ ಗರ್ಭಧಾರಣೆಯನ್ನು ತೆಗೆದುಹಾಕುವುದು ಮತ್ತು ಸಾಧ್ಯವಿದ್ದಲ್ಲಿ ಚಿಕಿತ್ಸೆ ಒದಗಿಸಿ ಸರಿಪಡಿಸಲು ಅನುವು ಮಾಡಿಕೊಡುವ ಮೂಲಕ ಇದು ಲಕ್ಷಾಂತರ ಕುಟುಂಬಗಳು ಮತ್ತು ಒಟ್ಟಾರೆ ಸಮಾಜಕ್ಕೆ ವರವಾಗಿದೆ. ಆದರೆ ಖೇದದ ವಿಚಾರವೆಂದರೆ ಅಟ್ಟೆಗಾಲು, ಸೀಳುತುಟಿ/ ವಸಡಿನಂತಹ ಕೆಲವು ಸರಿಪಡಿಸಬಹುದಾದ ವೈಕಲ್ಯಗಳಿದ್ದಾಗಲೂ ಗರ್ಭವನ್ನು ತೆಗೆದುಹಾಕಲಾಗುತ್ತದೆ. ಆದ್ದರಿಂದ ಗಂಭೀರ ಮತ್ತು ಅಪಾಯಕಾರಿ ಜನ್ಮತಃ ವೈಕಲ್ಯಗಳು ಹಾಗೂ ಸರಿಪಡಿಸಬಹುದಾದ ವೈಕಲ್ಯಗಳ ನಡುವಣ ವ್ಯತ್ಯಾಸವನ್ನು ಮಗುವನ್ನು ನಿರೀಕ್ಷಿಸುತ್ತಿರುವ ತಾಯ್ತಂದೆಗೆ ಸಮರ್ಪಕವಾಗಿ ತಿಳಿಸಿಕೊಡಬೇಕಾಗಿದೆ. ಇದರಿಂದ ಗರ್ಭಧಾರಣೆಯನ್ನು ಮುಂದುವರಿಸುವುದು ಅಥವಾ ತೆಗೆದುಹಾಕುವ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವುದು ಅವರಿಗೆ ಸಾಧ್ಯವಾಗುತ್ತದೆ. ಆರೋಗ್ಯ ಸೇವಾ ಪೂರೈಕೆದಾರರು, ವಿಶೇಷವಾಗಿ ಪ್ರಸೂತಿಶಾಸ್ತ್ರಜ್ಞರು ಮತ್ತು ಸೋನೋಲಜಿಸ್ಟ್‌ಗಳು ತಾಯ್ತಂದೆಗೆ ಸ್ಕ್ಯಾನ್‌ನಲ್ಲಿ ಏನೇನು ಪತ್ತೆಯಾಗಿವೆ, ಅವುಗಳ ದೀರ್ಘಕಾಲಿಕ ಮತ್ತು ತಾತ್ಕಾಲಿಕ ಪರಿಣಾಮಗಳೇನು ಎಂಬುದನ್ನು ಸದ್ಯ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಕೂಲಂಕಷವಾಗಿ ವಿವರಿಸಿ ಹೇಳಬೇಕಾಗಿದೆ. ವೈಕಲ್ಯಕ್ಕೆ ನಿರ್ದಿಷ್ಟ ಕಾರಣವನ್ನು ಗುರುತಿಸಲು ಸಾಧ್ಯವಿಲ್ಲದೆ ಹೋದರೆ ವೈದ್ಯರು ಕ್ರಾನಿಕ್ ವಿಲ್ಲಿಸ್ ಸ್ಯಾಂಪ್ಲಿಂಗ್ (ಮೊದಲ ತ್ತೈಮಾಸಿಕದಲ್ಲಿ ಕೈಗೊಳ್ಳುವಂಥದ್ದು) ಮತ್ತು ಆ್ಯಮ್ನಿಯೊಸೆಂಥೆಸಿಸ್/ ಫೀಟಲ್ ಬ್ಲಿಡ್ ಸ್ಯಾಂಪ್ಲಿಂಗ್ (ದ್ವಿತೀಯ ಮತ್ತು ತೃತೀಯ ತ್ತೈಮಾಸಿಕದಲ್ಲಿ ಕೈಗೊಳ್ಳುವಂಥದ್ದು)ನಂತಹ ಭ್ರೂಣ ಪರೀಕ್ಷೆಗಳನ್ನು ನಡೆಸುವ ಆಯ್ಕೆಗಳನ್ನು ಹೆತ್ತವರಿಗೆ ವಿವರಿಸಬೇಕಾಗುತ್ತದೆ. ಈ ಪರೀಕ್ಷೆಗಳು ವೈಕಲ್ಯಕ್ಕೆ ಸಂಭಾವ್ಯ ಕಾರಣಗಳನ್ನು ತಿಳಿಸಿಕೊಡಲು ನೆರವಾಗುತ್ತವೆ. ಈ ಪರೀಕ್ಷೆಗಳಿಂದ ಇನ್ನೂ ಒಂದು ಲಾಭವೆಂದರೆ, ಇವುಗಳಿಂದ ಭ್ರೂಣದ ಡಿಎನ್‌ಎ ಮಾದರಿ ಲಭ್ಯವಾಗಿ, ಅದನ್ನು ಮುಂದುವರಿದ ತಪಾಸಣೆಗಳಿಗಾಗಿ ದಾಸ್ತಾನು ಇರಿಸಬಹುದು; ಇದು ಭವಿಷ್ಯದ ಗರ್ಭಧಾರಣೆಗಳ ಸಂದರ್ಭದಲ್ಲಿ ಸಹಾಯಕ್ಕೆ ಬರಬಲ್ಲುದು. ದಂಪತಿಯು ಈ ಪರೀಕ್ಷೆಗಳನ್ನು ನಡೆಸಲು ಒಪ್ಪದೆ ಗರ್ಭಪಾತವನ್ನೇ ಆಯ್ದುಕೊಂಡರೂ ಗರ್ಭಪಾತ ನಡೆಸಿದ ಭ್ರೂಣವನ್ನು ವಿಸ್ತೃತ ಪರೀಕ್ಷೆಗಳಿಗೆ ಕಳುಹಿಸಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗದ ವೈಕಲ್ಯ ಕಾರಣಗಳನ್ನು ಗುರುತಿಸುವುದು ಅಥವಾ ಸ್ಕ್ಯಾನ್‌ನಲ್ಲಿ ಪತ್ತೆಯಾದ ಅಂಶಗಳನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ದಂಪತಿಗೆ ತಿಳಿಹೇಳಿ ಮನವೊಲಿಸುವ ಪ್ರಯತ್ನ ನಡೆಸುವುದು ಅಗತ್ಯ. ಗರ್ಭಧರಿಸಿದ ಅವಧಿಯಲ್ಲಿ ಎಲ್ಲ ತಾಯಂದಿರುವ ಕನಿಷ್ಠ ನಾಲ್ಕು ಸ್ಕ್ಯಾನಿಂಗ್‌ಗಳಿಗೆ ಒಳಗಾಗುವುದು ವಿಹಿತ. ಗರ್ಭ ಧರಿಸಿದ ಬಳಿಕ ಭ್ರೂಣವು ಗರ್ಭಕೋಶದೊಳಗೆ ಸ್ಥಿತವಾಗಿರುವುದು ಮತ್ತು ಸರಿಯಾದ ಬೆಳವಣಿಗೆಯನ್ನು ಹೊಂದುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮೊದಲ ಬಾರಿಗೆ 6-10 ವಾರಗಳಲ್ಲಿ ಸ್ಕ್ಯಾನ್ ನಡೆಸಲಾಗುತ್ತದೆ. 11ರಿಂದ 14 ವಾರಗಳಲ್ಲಿ ನಡೆಸುವ ನ್ಯುಶಿಲ್ ಟ್ರಾನ್ಸುಲುಸೆನ್ಸಿ ಸ್ಕ್ಯಾನ್ ಭ್ರೂಣದ ಸಂರಚನಾ ಸಹಜತೆಯ ಪ್ರಾಥಮಿಕ ವಿಶ್ಲೇಷಣೆಯನ್ನು ಒದಗಿಸುತ್ತದೆ, ಜತೆಗೆ ಅನೂಪ್ಲಾಯಿxಗಾಗಿ ಮೊದಲ ತ್ತೈಮಾಸಿಕದಲ್ಲಿ ನಡೆಸುವ ತಪಾಸಣೆಯು ಸಾಮಾನ್ಯ ವರ್ಣತಂತುಗಳ ಅಸಹಜತೆಗಳನ್ನು ಪತ್ತೆಹಚ್ಚುವಲ್ಲಿ ಶೇ.85ರಿಂದ 90ರಷ್ಟು ಸಂವೇದನಶೀಲತೆಯನ್ನು ಹೊಂದಿರುತ್ತದೆ. ಪ್ರಾಥಮಿಕ ಹೃದಯ ತಪಾಸಣೆಯು ಹೃದಯ ಸಂಬಂಧಿ ಅಸಹಜತೆಗಳ ಶಂಕೆಯನ್ನು ಉಂಟು ಮಾಡಿದರೆ ಅಥವಾ ತಾಯಿಯು ಮಧುಮೇಹಿಯಾಗಿರುವುದು, ಅಕ್ಕ-ಅಣ್ಣ ಹೃದಯ ಸಂಬಂಧಿ ವೈಕಲ್ಯ ಹೊಂದಿರುವಂತಹ ಅಪಾಯಾಂಶಗಳು ಇರುವ ಸಂದರ್ಭದಲ್ಲಿ ಟಿಐಎಫ್ಎಫ್ಎ ಸ್ಕ್ಯಾನ್ ಜತೆಗೆ ಫೀಟಲ್ ಎಕೊಕಾರ್ಡಿಯೊಗ್ರಾಫಿಯನ್ನು ಕೂಡ ನಡೆಸಬಹುದಾಗಿದೆ. ಅಂತಿಮವಾಗಿ ಭ್ರೂಣವು ತನ್ನ ಗರ್ಭಸ್ಥ ವಯಸ್ಸಿಗೆ ಸರಿಯಾದ ಬೆಳವಣಿಗೆಯನ್ನು ಹೊಂದುತ್ತಿರುವುದನ್ನು ಖಾತರಿಪಡಿಸಿಕೊಳ್ಳಲು, ಭ್ರೂಣದ ಸುತ್ತ ಅಗತ್ಯವಿರುವಷ್ಟು ಆಮ್ನಿಯೋಟಿಕ್ ದ್ರವ ಇರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಟಿಐಎಫ್ಎಫ್ಎ ಸ್ಕ್ಯಾನ್‌ನ ಫಲಿತಾಂಶಗಳಿಗೆ ಹೋಲಿಸಿದಾಗ ಅಭಿವೃದ್ಧಿ ಹೊಂದುತ್ತಿರುವ ಯಾವುದೇ ಅಸಹಜತೆಗಳು ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ 28-34 ಸಂಪೂರ್ಣಗೊಂಡ ವಾರಗಳ ನಡುವೆ ಮಧ್ಯಂತರ ಬೆಳವಣಿಗೆ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ. ಗರ್ಭಧರಿಸಿದ ಅವಧಿಯ ಯಾವುದೇ ಸಂದರ್ಭದಲ್ಲಿ ಸ್ಕ್ಯಾನಿಂಗ್ ವೇಳೆ ಭ್ರೂಣವು ಅಸಹಜತೆಗಳನ್ನು ಹೊಂದಿರುವುದು ಕಂಡುಬಂದಲ್ಲಿ ಅದಕ್ಕೆ ಪೂರಕವಾಗಿ ದಂಪತಿಗೆ ವಿಸ್ತೃತವಾದ ಆಪ್ತ ಸಮಾಲೋಚನೆಯನ್ನು ನಡೆಸುವುದು ಅವರು ಸಮಸ್ಯೆಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ರೀತಿಯಲ್ಲಿ ನಿಭಾಯಿಸುವುದಕ್ಕೆ ಅಗತ್ಯವಾದ ನಿರ್ಣಯವೊಂದನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ದಂಪತಿಯ ಈ ಹಿಂದಿನ ಗರ್ಭಧಾರಣೆಯ ಸಂದರ್ಭದಲ್ಲಿ ಭ್ರೂಣವು ಜನ್ಮತಃ ವೈಕಲ್ಯವನ್ನು ಹೊಂದಿದ್ದುದೇ ಆಗಿದ್ದರೆ, ಕಾರಣ ತಿಳಿದಿರಲಿ ಅಥವಾ ತಿಳಿಯದೇ ಇರಲಿ; ಲಭ್ಯವಿರುವ ಎಲ್ಲ ವೈದ್ಯಕೀಯ ದಾಖಲೆಗಳ ಸಹಿತ ಕ್ಲಿನಿಕಲ್ ಜೆನೆಟಿಸಿಸ್ಟ್ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದು ಅಗತ್ಯ. ಭವಿಷ್ಯದ ಗರ್ಭಧಾರಣೆಯಲ್ಲಿ ಸಂಭಾವ್ಯ ಅಪಾಯಗಳನ್ನು ತಪ್ಪಿಸುವುದಕ್ಕಾಗಿ ಧನಾತ್ಮಕ ಹೆಜ್ಜೆಗಳನ್ನು ಇರಿಸುವುದಕ್ಕೆ ಇದು ನೆರವಾಗುತ್ತದೆ. ಇನ್ನೊಂದು ಗರ್ಭಧಾರಣೆ ಕೈಗೊಳ್ಳುವುದಕ್ಕೆ ಕನಿಷ್ಠ 2 ತಿಂಗಳು ಹಿಂದಿನಿಂದಲೇ ತಾಯಿಯು ಫೋಲಿಕ್ ಆ್ಯಸಿಡ್ ಪೂರಕ ಆಹಾರ/ ಔಷಧವನ್ನು ಸೇವಿಸುವುದು ಅಗತ್ಯ. ತಾಯಿಗೆ ರುಬೆಲ್ಲಾ ಲಸಿಕೆ ಸಿಗದೆ ಇದ್ದರೆ ಗರ್ಭಧಾರಣೆಗೆ ಮುನ್ನವೇ ಹಾಕಿಸಿಕೊಳ್ಳಬೇಕು ಮತ್ತು ಇದಾದ ಬಳಿಕ ಕನಿಷ್ಠ ಒಂದು ತಿಂಗಳ ಅವಧಿಗೆ ಗರ್ಭಧಾರಣೆಯನ್ನು ಮುಂದೂಡಬೇಕು. ಇಲ್ಲವಾದರೆ ರುಬೆಲ್ಲಾದ ಸಜೀವ ಲಸಿಕೆಯು ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಡಾ| ಪುಂಡಲೀಕ ಬಾಳಿಗಾ
ಕನ್ಸಲ್ಟೆಂಟ್ ಫೀಟಲ್ ಮೆಡಿಸಿನ್
ಕೆಎಂಸಿ ಆಸ್ಪತ್ರೆ, ಮಂಗಳೂರು.