ಲಕ್ನೋ: ಮಸೀದಿ ವಿಚಾರಕ್ಕೆ ಸಂಬಂಧಿಸಿ ಹಿಂಸಾಚಾರ ಪೀಡಿತ ಸಂಭಾಲ್‌ಗೆ ಹೊರಟಿದ್ದ ಕಾಂಗ್ರೆಸ್ ನಿಯೋಗವನ್ನು ಸೋಮವಾರ ಲಕ್ನೋದಲ್ಲಿನ ಪಕ್ಷದ ಕಚೇರಿಯ ಹೊರಗೆ ಪೊಲೀಸರು ತಡೆದಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಪೊಲೀಸ್ ಸಿಬಂದಿಯೊಂದಿ ತಳ್ಳಾಟ ನೂಕಾಟ ನಡೆಸಿದರು.
ಸಂಭಾಲ್‌ಗೆ ಸತ್ಯಶೋಧನೆಗೆಂದು ಹೋರಟ ಕಾಂಗ್ರೆಸ್‌ನ ಯೋಜಿತ ತಂಡದ ನೇತೃತ್ವ ವಹಿಸಿದ್ದ ಅಜಯ್ ರಾಯ್ ಅವರನ್ನು ತಡೆಯಲಾಗಿದೆ. ಪಕ್ಷದ ಕಚೇರಿ ಮತ್ತು ಅದರ ಹಲವಾರು ನಾಯಕರ ನಿವಾಸಗಳ ಹೊರಗೆ ಪೊಲೀಸರು ಭಾನುವಾರ ರಾತ್ರಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.
ರಾಯ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸಂಭಾಲ್‌ಗೆ ತೆರಳಲು ಪ್ರಯತ್ನಿಸಿದಾಗ, ಪೊಲೀಸರು ಅವರನ್ನು ಬ್ಯಾರಿಕೇಡ್ ಹಾಕಿ ತಡೆದರು, ಇದರಿಂದಾಗಿ ಭಾರಿ ಗದ್ದಲ ಉಂಟಾಯಿತು.
ಅಕ್ಷರ ಮತ್ತು ಆತ್ಮದಲ್ಲಿ ಅಳವಡಿಸಬೇಕು
ಆರಾಧನಾ ಸ್ಥಳಗಳ ಕಾಯಿದೆ, 1991 ಅನ್ನು ಅಕ್ಷರ ಮತ್ತು ಆತ್ಮದಲ್ಲಿ ಅಳವಡಿಸಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. 2022 ರ ಮೇನಲ್ಲಿ ಮಾಜಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಮಾಡಿದ ಮೌಖಿಕ ಅವಲೋಕನಗಳು “ಪಂಡೋರಾ ಬಾಕ್ಸ್” ಅನ್ನು ತೆರೆದಂತೆ ತೋರುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಸಂಭಾಲ್‌ನಲ್ಲಿರುವ ಮಸೀದಿ ಮತ್ತು ಅಜ್ಮೀರ್‌ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಂತಹ ಹಲವಾರು ವಿಚಾರಗಳು ಇತ್ತೀಚೆಗೆ ಹುಟ್ಟಿಕೊಂಡಿರುವುದು ದುರದೃಷ್ಟಕರ. ಶುಕ್ರವಾರ ನಡೆದ ತನ್ನ CWC ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಪೂಜಾ ಸ್ಥಳಗಳ ಕಾಯಿದೆ, 1991 ಗೆ ತನ್ನ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದೆ ಮತ್ತು ಅದು ನಮ್ಮ ನಿಲುವು. ನಾವು ಅದನ್ನು ಎತ್ತಲಿದ್ದೇವೆ ಆದರೆ ಸಂಸತ್ತು ಅದಕ್ಕಾಗಿ ಕಾರ್ಯನಿರ್ವಹಿಸಬೇಕಾಗಿದೆ, ಮತ್ತು ಮುಖ್ಯವಾಗಿ, ಸಂಸತ್ತಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ರಮೇಶ್ ಪಿಟಿಐ ವಿಡಿಯೋಗೆ ಹೇಳಿಕೆ ನೀಡಿದ್ದಾರೆ.
ಸಂಸತ್ತಿನ ಕಾರ್ಯನಿರ್ವಹಣೆಯನ್ನು ನಡೆಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ಪ್ರತಿಪಕ್ಷಗಳು ತಮ್ಮ ಅಭಿಪ್ರಾಯವನ್ನು ಹೊಂದಿರಬೇಕು. ಆದರೆ ಇಲ್ಲಿ ಸರ್ಕಾರ ತನ್ನ ದಾರಿ ತಪ್ಪಿದೆ ಮತ್ತು ಸಂಸತ್ತು ಕಾರ್ಯನಿರ್ವಹಿಸಲು ಬಯಸುವುದಿಲ್ಲ ಎಂದು ರಮೇಶ್ ಹೇಳಿದ್ದಾರೆ.