ಅಹಮ್ಮದಾಬಾದ್: ಗುಜರಾತ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್ ಮತ್ತು ಧಾವಲ್ ಸಿನ್ಹಾ ಝಾಲಾ ಪರಾಜಯಗೊಳ್ಳುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಗುಜರಾತ್ ನಲ್ಲಿ ರಾಧಾನ್ ಪುರ್, ಬೇಯಾಡ್ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಆದರೆ ಈ ಉಪಚುನಾವಣೆಯಲ್ಲಿ ರಾಧಾನ್ ಪುರ್, ಬೇಯಾಡ್ ಸೇರಿದಂತೆ 2007ರಿಂದ ಬಿಜೆಪಿ ಹಿಡಿತದಲ್ಲಿದ್ದ ಥಾರಾಡ್ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ ಶಾಸಕ ಪ್ರಬಾತ್ ಪಟೇಲ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಥಾರಾಡ್ ಕ್ಷೇತ್ರ ತೆರವಾಗಿತ್ತು. ರಾಧಾನ್ ಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್, ಬೇಯಾಡ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಝಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದರು.
ಇದೀಗ ಉಪಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ಪರಾಜಯಗೊಂಡಿದ್ದು ದೊಡ್ಡ ಮುಖಭಂಗ ಅನುಭವಿಸಿದಂತಾಗಿದೆ. 44ರ ಹರೆಯದ ಅಲ್ಪೇಶ್ “ಠಾಕೂರ್ ಸೇನಾ” ಸಂಘಟನೆಯೊಂದಿಗೆ ಹೋರಾಟ ನಡೆಸುತ್ತಿದ್ದು, ಒಬಿಸಿ ಏಕ್ತಾ ಮಂಚ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. 2017ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಅಲ್ಪೇಶ್ ಗೆ ಹಲವಾರು ಪ್ರಮುಖ ಹುದ್ದೆಗಳನ್ನು ನೀಡಿತ್ತು. ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಮೀಸಲಾತಿ ಹೋರಾಟದ ವೇಳೆ ಅಲ್ಪೇಶ್ ಠಾಕೂರ್ ಬೆಳಕಿಗೆ ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಗ್ನೇಶ್ ಮೇವಾನಿ, ಠಾಕೂರ್ ಹಾಗೂ ಹಾರ್ದಿಕ್ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದರು.