ಜೈಪುರ : ”ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ನಿಕಟವರ್ತಿ ಹಾಗೂ ಮಧ್ಯವರ್ತಿ ಸಂಜಯ್ ಭಂಡಾರಿ ಅವರನ್ನು ಕೇಂದ್ರದಲ್ಲಿನ ಬಿಜೆಪಿ ಸರಕಾರ ರಫೇಲ್ ಡೀಲ್ ನಿಂದ ಒದ್ದು ಹೊರಹಾಕಿರುವುದೇ ಕಾಂಗ್ರೆಸ್‌ಗೆ ರಫೇಲ್ ಚಿಂತೆಯ ವಿಷಯವಾಗಿದೆ” ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರಕಾರ ಭಾರತೀಯ ವಾಯು ಪಡೆಗಿಂತಲೂ ಸಂಜಯ್ ಭಂಡಾರಿ ಬಗ್ಗೆಯೇ ತೀವ್ರವಾದ ಕಳಕಳಿ, ಕಾಳಜಿ ಇತ್ತು ಎಂದು ಮೇಘವಾಲ್ ಆರೋಪಿಸಿದ್ದಾರೆ.
ಭಾರತೀಯ ವಾಯು ಪಡೆ ಪದೇ ಪದೇ ತನಗೆ ಅತ್ಯಾಧುನಿಕ ಫೈಟರ್ ಜೆಟ್‌ಗಳು ಬೇಕಾಗಿವೆ ಎಂದು ಅಲವತ್ತುಕೊಳ್ಳುತ್ತಿದ್ದರೂ ಹಿಂದಿನ ಯುಪಿಎ ಸರಕಾರ 2006ರಿಂದ 2013ರ ತನಕವೂ ಯಾವುದೇ ನಿರ್ಧಾರ ಕೈಗೊಳ್ಳದೇ ಕಾಲಹರಣ ಮಾಡುತ್ತಾ ಬಂದಿತ್ತು ಎಂದು ಮೇಘವಾಲ್ ಹೇಳಿದರು.
“ಸಂಪೂರ್ಣ ಮಾಹಿತಿ ಮತ್ತು ಜವಾಬ್ದಾರಿಯಿಂದ ನಾನು ಹೇಳುತ್ತಿದ್ದೇನೆ, ಸಂಜಯ್ ಭಂಡಾರಿ ಮಧ್ಯವರ್ತಿ ಆಗಿಲ್ಲದಿರುವ ರಫೇಲ್ ಡೀಲ್ ಕಾಂಗ್ರೆಸ್‌ಗೆ ತುಂಬ ಚಿಂತೆಯ, ಕಳವಳದ ವಿಷಯವಾಗಿದೆ’ ಎಂದು ಸಚಿವ ಮೇಘವಾಲ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಹಿಂದಿನ ಯುಪಿಎ ಸರಕಾರ ನಿಗದಿಸಿದ ದರಕ್ಕಿಂತ ಎಷ್ಟೋ ಕಡಿಮೆ ದರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಫೇಲ್ ಫೈಟರ್ ಜೆಟ್ ವಿಮಾನಗಳ ಡೀಲ್ ಅಂತಿಮಗೊಳಿಸಿದೆ ಎಂದು ಮೇಘವಾಲ್ ಹೇಳಿದರು.