ಹೊಸದಿಲ್ಲಿ: ದೆಹಲಿಯಲ್ಲಿ ಎರಡು ದಿನಗಳ ಭಾರೀ ಮಳೆಯ ನಂತರ, ಭಾರತದ ಅಧ್ಯಕ್ಷತೆಯ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದ ಜಲಾವೃತವಾಗಿರುವ ದೃಶ್ಯಗಳು ವೈರಲ್ ಆಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನ ನೀಡದಿರುವ ಕುರಿತು ನಡೆಯುತ್ತಿರುವ ಸಂಘರ್ಷದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಈ ಸಮಸ್ಯೆ ಟೀಕೆಗೆ ಹೊಸ ಅಸ್ತ್ರವಾಗಿ ದೊರಕಿದೆ.
ಜಿ 20 ಶೃಂಗಸಭೆಯ ಸ್ಥಳವಾದ ಹೊಸದಾಗಿ ನಿರ್ಮಿಸಲಾದ ಭಾರತ್ ಮಂಟಪದ ಸ್ಥಳವೊಂದು ಜಲಾವೃತವಾಗಿರುವ ವಿಡಿಯೋವನ್ನು ಕಾಂಗ್ರೆಸ್ ಭಾನುವಾರ X ನಲ್ಲಿ ಹಂಚಿಕೊಂಡಿದ್ದು, ‘ಇದು ಮೋದಿ ಸರಕಾರದ ಅಡಿಯಲ್ಲಿ “ಟೊಳ್ಳು ಅಭಿವೃದ್ಧಿ” ಯನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದೆ.
ವಿಡಿಯೋ ಲ್ಲಿ, ಜನರು ಜಲಾವೃತ ಕಾರಿಡಾರ್‌ನಲ್ಲಿ ನಡೆಯುತ್ತಿರುವುದು ಕಾಣಬಹುದಾಗಿದೆ. “ಟೊಳ್ಳು ಅಭಿವೃದ್ಧಿ ಬಹಿರಂಗವಾಗಿದೆ. ಭಾರತ್ ಮಂಟಪವನ್ನು ಜಿ 20 ಗಾಗಿ ಸಿದ್ಧಪಡಿಸಲಾಗಿದೆ. 2,700 ಕೋಟಿ ರೂ. ಒಂದೇ ಮಳೆಯಲ್ಲಿ ಕಳೆದುಹೋಗಿದೆ…” ಎಂದು ಕಾಂಗ್ರೆಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನಾಥೆ ”ಯಂತ್ರಗಳ ಮೂಲಕ ನೀರು ತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಮಳೆ ಕೂಡ ಅಂತಾರಾಷ್ಟ್ರೀಯ ರಾಷ್ಟ್ರವಿರೋಧಿ ಪಿತೂರಿಯ ಭಾಗವಾಗಿದೆ. “ಇಷ್ಟು ಹಣ ಕದ್ದು ಇಂತಹ ಕಳಪೆ ಕೆಲಸ ಮಾಡಿದ ಭ್ರಷ್ಟರು ಯಾರು?” ಎಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಲಾವೃತವಾಗಿರುವ ವಿಚಾರ ಪ್ರಸ್ತಾವಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿ20 ಶೃಂಗಸಭೆಯು ಭಾರತ್ ಮಂಟಪದಲ್ಲಿ ಶನಿವಾರ ಆರಂಭಗೊಂಡಿದ್ದು, ಭಾನುವಾರ ಮುಕ್ತಾಯವಾಗಲಿದೆ.