Advertisement

ವೇಣುಗೋಪಾಲ್‌ ಭೇಟಿ ಮಾಡಿದ ಸಚಿವರು

07:45 AM Jan 18, 2018 | Team Udayavani |

ಬೆಂಗಳೂರು: ಸಚಿವರು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬುಧವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

Advertisement

ಆರೋಗ್ಯ ಸಚಿವ ರಮೇಶ್‌ ಕುಮಾರ್‌, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ವೇಣುಗೋಪಾಲ್‌ ಅವರನ್ನು ಪ್ರತ್ಯೇಕವಾಗಿ ಭೇಟಿ  ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಉಸ್ತುವಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ವೇಣುಗೋಪಾಲ ಸಚಿವರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ವೇಣುಗೋಪಾಲ್‌ ಭೇಟಿ ನಂತರ ಮಾತನಾಡಿದ ಸಚಿವ ರಮೇಶ್‌ಕುಮಾರ್‌, ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ಕನ್ನಡಿಗರು ಹರಾಮಿಗಳು ಎಂಬ ಪದ ಬಳಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಸಚಿವ ಎಚ್‌.ಆಂಜನೇಯ ಕೂಡ ಗೋವಾ
ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಆನಂದ್‌ಸಿಂಗ್‌, ನಾಗೇಂದ್ರ ಭೇಟಿ: ಕೂಡ್ಲಿಗಿ ಪಕ್ಷೇತರ ಶಾಸಕ ಬಿ. ನಾಗೇಂದ್ರ ಹಾಗೂ ಹೊಸಪೇಟೆಯ ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಬುಧವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ವೇಣುಗೋಪಾಲ್‌ ಅವರನ್ನು ಖಾಸಗಿ ಹೊಟೇಲ್‌ನಲ್ಲಿ ಭೇಟಿ ಮಾಡಿ ಕಾಂಗ್ರೆಸ್‌ ಸೇರುವ ಕುರಿತಂತೆ ಚರ್ಚಿಸಿದ್ದಾರೆ. ಇಬ್ಬರೂ ಕಾಂಗ್ರೆಸ್‌ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದು, ಸೇರ್ಪಡೆ ಕುರಿತಂತೆ ಅಂತಿಮ ನಿರ್ಧಾರವಾಗಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಮಾತುಕತೆಯ ಸಂದರ್ಭದಲ್ಲಿ ಜೆಡಿಎಸ್‌  ಬಂಡಾಯ ಶಾಸಕ ಭೀಮಾನಾಯ್ಕ ಕೂಡ ಹಾಜರಿದ್ದರು ಎಂದು ತಿಳಿದು ಬಂದಿದೆ.

ಹಿಂದುತ್ವ ಅಜೆಂಡಾ ತಡೆಗೆ ಸಲಹೆ
ಬೆಂಗಳೂರು: ಬಿಜೆಪಿಯ ಹಿಂದುತ್ವ ಅಜೆಂಡಾ ತಡೆಯಲು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ವಿವಿಧ ಸಂಘಟನೆಗಳ ಮುಖಂಡರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಸಲಹೆ ನೀಡಿದ್ದಾರೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ಪ್ರಗತಿಪರ ಚಿಂತಕ ಕೆ.ಎಲ್‌.ಅಶೋಕ್‌ ಸೇರಿ ಮಾನವ ಹಕ್ಕುಗಳ ಒಕ್ಕೂಟ, ಕೋಮು ಸೌಹಾರ್ದ ವೇದಿಕೆ, ಮುಸ್ಲಿಂ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸೇರಿ ಅನೇಕ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದರು. ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಕೊಲೆ ಹಾಗೂ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕರಾವಳಿ ಭಾಗದಲ್ಲಿ ಶಾಂತಿ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಬಿಜೆಪಿ ಹಾಗೂ ಸಂಘ ಪರಿವಾರದಿಂದ ನಿರಂತರವಾಗಿ
ನಡೆಯುತ್ತಿದ್ದು, ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಸಭೆ ನಂತರ ಮಾತನಾಡಿದ ಕೆ.ಎಲ್‌. ಅಶೋಕ್‌, ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರಿಗೆ  ಕುವೆಂಪು, ಅಂಬೇಡ್ಕರ್‌ ಜಾತ್ಯತೀತ ವಾದ ಬೇಡ. ಅವರಿಗೆ ಮನು ವಾದದ ಬಗ್ಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು. ಪ್ರಕಾಶ್‌ ರೈ ಹೋದ ಜಾಗವನ್ನು ಶುದ್ಧ
ಮಾಡುತ್ತಾರೆ ಎಂದರೆ, ಇವರು ಅಸ್ಪೃಶ್ಯತೆ ಆಚರಣೆಗೆ ಒತ್ತು ಕೊಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಈ ಬಗ್ಗೆ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಕುವೆಂಪು ಬಗ್ಗೆ ಮಾತನಾಡಿದ್ದು ಖಂಡನೀಯ, ಕೇಂದ್ರ ಸಚಿವರಾಗಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಅನಂತಕುಮಾರ್‌ ಹೆಗಡೆ ಈಗಾಗಲೇ ಅಸಂಬದ್ಧ
ಹೇಳಿಕೆ ನೀಡಿ ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದಾರೆ. ಅವರು ಸಚಿವ ಸ್ಥಾನದ ಘನತೆಯನ್ನು ಕಾಪಾಡಬೇಕು ಎಂದು ಹೇಳಿದರು.

Advertisement

ಇಂದಿನಿಂದ ಬಜೆಟ್‌ ಸಿದ್ಧತಾ ಸಭೆ ಶುರು
ಬೆಂಗಳೂರು: ಎರಡು ಹಂತದ ರಾಜ್ಯ ಪ್ರವಾಸ ಮುಗಿಸಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರದಿಂದ 2018-19ನೇ ಸಾಲಿನ ಬಜೆಟ್‌ ಪೂರ್ವ ಸಿದ್ಧತಾ ಸಭೆಗಳನ್ನು ಆರಂಭಿಸಲಿದ್ದಾರೆ. 2018-19ನೇ ಸಾಲಿನಲ್ಲಿ ಸಾಲಿನಲ್ಲಿ 2.20 ಲಕ್ಷ
ಕೋಟಿ ರೂ. ಬಜೆಟ್‌ ಮಂಡಿಸುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಫೆ. 16ರಂದು ಹಣಕಾಸು ಸಚಿವರಾಗಿ ತಮ್ಮ 13ನೇ ಬಜೆಟ್‌ ಮಂಡಿಸಲಿದ್ದು, ಪೂರ್ವಸಿದ್ಧತೆ ಕುರಿತಂತೆ ಹಣಕಾಸು ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಸಭೆಗಳನ್ನು ಆರಂಭಿಸಲಿದ್ದಾರೆ. ಮೊದಲ ದಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ.
ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರ ಬೇಡಿಕೆ ಕುರಿತು ರೈತ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಜ. 19ರಿಂದ ಕರ್ನಾಟಕ ವಿದ್ಯುತ್‌ ನಿಗಮದ ಶಕ್ತಿ ಭವನದಲ್ಲಿ ಇಲಾಖಾವಾರು ಸಭೆಗಳನ್ನು ಆರಂಭಿಸಲಿರುವ ಮುಖ್ಯಮಂತ್ರಿಗಳು, ಫೆ. 2ರಿಂದ ಫೆ. 6ರವರೆಗೆ ವಿಧಾನಸೌಧ, ಮುಖ್ಯಮಂತ್ರಿಗಳ ಗೃಹ ಕಚೇರಿ ಮುಂತಾದ ಕಡೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಈ ವೇಳೆ ಆಯಾ ಇಲಾಖೆಯ ಸಚಿವರು ಸೇರಿದಂತೆ ಹಿರಿಯ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು, ಹಣಕಾಸು ಇಲಾಖೆ
ಅಧಿಕಾರಿಗಳು ಇರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next