ನವದೆಹಲಿ:ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ ಸಾಕಷ್ಟು ಏರಿಳಿತ ಕಂಡ ಬಳಿಕ ಇದೀಗ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ 115, ಬಿಜೆಪಿ 105, ಬಿಎಸ್ಪಿ 4 ಇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದ ಚುನಾವಣಾ ಫಲಿತಾಂಶದಲ್ಲಿ ಬೆಳಗ್ಗೆಯಿಂದಲೂ ಹಾವು, ಏಣಿ ಆಟ ಮುಂದುವರಿದಿತ್ತು. ಈ ಎಲ್ಲಾ ಜಿದ್ದಾಜಿದ್ದಿನ ನಡುವೆಯೇ ಸರ್ಕಾರ ರಚನೆಗೆ ಬೇಕಾದ 116 ಮ್ಯಾಜಿಕ್ ನಂಬರ್ ಗಾಗಿ ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ. ಮಾಯಾವತಿ ನೇತೃತ್ವದ ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರದೇಶದಲ್ಲಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.55ರಷ್ಟು ಮತ ಗಳಿಕೆಯಲ್ಲಿ ಈ ಬಾರಿ ಕುಸಿತ ಕಂಡಿದ್ದರೆ, ಕಾಂಗ್ರೆಸ್ ಮತಗಳಿಕೆಯಲ್ಲಿ ಶೇ.51ರಷ್ಟು ಏರಿಕೆ ಕಂಡಿದೆ. ಮಧ್ಯಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ ಅಲೆ ಪ್ರಬಲವಾಗಿದ್ದು, ಪೂರ್ವ ಮತ್ತು ಮಧ್ಯ ಭಾಗದಲ್ಲಿ ಬಿಜೆಪಿ ಪರ ಅಲೆ ಪಕ್ಷಕ್ಕೆ ಹೆಚ್ಚು ಅನುಕೂಲತೆ ತಂದಿರುವುದಾಗಿ ವರದಿ ವಿವರಿಸಿದೆ.
ಅತಂತ್ರ ಫಲಿತಾಂಶ ಪ್ರಕಟವಾಗುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಅವರು ದೆಹಲಿಯಲ್ಲಿ ಮಾತುಕತೆ ನಡೆಸಲು ಬುಲಾವ್ ನೀಡಿರುವುದಾಗಿ ವರದಿ ತಿಳಿಸಿದೆ.
ಶತಾಯಗತಾಯ ನಾಲ್ಕನೇ ಬಾರಿಯೂ ಮಧ್ಯಪ್ರದೇಶದ ಮುಖ್ಯಮಂತ್ರಿ ಗಾದಿ ಅಲಂಕರಿಸುವುದಾಗಿ ಭವಿಷ್ಯ ನುಡಿದಿದ್ದ ಶಿವರಾಜ್ ಸಿಂಗ್ ಚೌಹಾಣ್ ಗೆ ಹಿನ್ನಡೆಯಾಗಿದ್ದರೆ, ಬಿಎಸ್ಪಿ, ಎಸ್ಪಿ ಜೊತೆ ಕೈಜೋಡಿಸಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.