ಜೈಪುರ : ”ರಾಜಸ್ಥಾನ ಕಾಂಗ್ರೆಸ್ ಸರಕಾರ ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ ಮತ್ತು ಮುಂದಿನ ಬಜೆಟ್ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮೀಸಲಿಡಲಾಗುವುದು” ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದ್ದಾರೆ.
ಸುದ್ದಿಗಾರರು ‘ಐದನೇ ಬಜೆಟ್ ಅನ್ನು ಮಂಡಿಸುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿ,ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ”ಸರಕಾರವನ್ನು ಬೀಳಿಸುವ ಯೋಜನೆಯಲ್ಲಿ ಬಿಜೆಪಿ ಯಶಸ್ವಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ” ಎಂದರು.
ಇದನ್ನೂ ಓದಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ
ಗ್ರಾಮೀಣ ಯುವ ಒಲಿಂಪಿಕ್ಸ್‌ಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಗೆಹ್ಲೋಟ್ ಬಿಕಾನೇರ್ ವಿಭಾಗದ ಪ್ರವಾಸದಲ್ಲಿದ್ದಾರೆ.
”ನಮ್ಮ ಸರಕಾರವು ಐದು ವರ್ಷಗಳನ್ನು ಪೂರ್ಣಗೊಳಿಸದಂತೆ ನೋಡಿಕೊಳ್ಳಲು ಅವರು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಈ ಹಿಂದೆಯೂ ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಯತ್ನಿಸಿದ್ದರು ಆದರೆ ನಮ್ಮ ಶಾಸಕರು ಒಗ್ಗಟ್ಟಾಗಿದ್ದರು ಮತ್ತು ಅವರು ಕದಲಲಿಲ್ಲ. ಕಳೆದ ಬಾರಿ ಸರಕಾರವನ್ನು ಉಳಿಸಲಾಗಿದೆ ಮತ್ತು ಅದು ಇನ್ನೂ ಬಲವಾಗಿ ಮುಂದುವರಿಯುವುದನ್ನು ನೀವು ನೋಡಬಹುದು” ಎಂದರು.
ಯುವಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ಸಲಹೆಗಳನ್ನು ನೇರವಾಗಿ ಅವರಿಗೆ ಕಳುಹಿಸುವಂತೆ ಗೆಹ್ಲೋಟ್ ಮನವಿ ಮಾಡಿದರು ಇದರಿಂದ ಸರ್ಕಾರವು ಉತ್ತಮ ಯೋಜನೆಗಳೊಂದಿಗೆ ಬರಬಹುದು ಎಂದರು.
ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ ಬಿಜೆಪಿ ಸರಕಾರಕ್ಕೆ ಆಘಾತವನ್ನುಂಟು ಮಾಡಿದೆ ಎಂದರು.