Advertisement

ಆಂಶಿಕ ಸಡಿಲಿಕೆಯಿಂದ ಹೆಚ್ಚದಿರಲಿ ಸೋಂಕು

01:16 AM Apr 19, 2020 | Sriram |

ಬೆಂಗಳೂರು/ಹೊಸದಿಲ್ಲಿ: ಕೋವಿಡ್‌-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ನಡುವೆಯೇ ಎಪ್ರಿಲ್‌ 20ರಿಂದ ಲಾಕ್‌ಡೌನ್‌ ಭಾಗಶಃ ಸಡಿಲವಾಗಲಿದೆ. ಆದರೆ ರಾಜ್ಯದಲ್ಲಿ ಸರಕಾರವು ಕೆಲವು ಸಡಿಲಿಕೆ ಆದೇಶಗಳನ್ನು ಜಾರಿಗೊಳಿಸಲು ಮೊದಲಿಗೆ ನಿರ್ಧರಿಸಿತ್ತಾದರೂ ಬಳಿಕ ವಾಪಸ್‌ ಪಡೆದ ಪರಿಣಾಮ ಗೊಂದಲ ಮುಂದುವರಿದಿದೆ.

Advertisement

ಕೇಂದ್ರ ಸರಕಾರ ಕೆಲವು ವಲಯಗಳಿಗೆ ವಿನಾಯಿತಿ ನೀಡಿರುವಂತೆ ರಾಜ್ಯ ಸರಕಾರವೂ ಐಟಿ-ಬಿಟಿ ಸೇರಿ ಕೆಲವು ವಲಯಕ್ಕೆ ಅವಕಾಶ ನೀಡಿದೆ. ಸಾರ್ವಜನಿಕ ವಲಯ, ಗೃಹ ಇಲಾಖೆ ಮತ್ತು ಕೆಲವು ಸಚಿವರು ಲಾಕ್‌ಡೌನ್‌ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಕೊಡುವ ಆದೇಶವನ್ನು ಹಿಂಪಡೆಯಲಾಯಿತು. ಇಷ್ಟೇ ಅಲ್ಲದೆ ಕಟ್ಟಡ ಮತ್ತು ರಸ್ತೆ ಕಾಮಗಾರಿ, ಬೆಂಗಳೂರು, ರಾಮನಗರ, ಬೆಂ.ಗ್ರಾಮಾಂತರ ಜಿಲ್ಲೆಗಳ ನಡುವಿನ ಸಂಚಾರಕ್ಕೆ ವಿರೋಧ ವ್ಯಕ್ತವಾದ ಕಾರಣ ಆ ಆದೇಶವನ್ನೂ ಪುನರ್‌ ಪರಿಶೀಲಿಸಲು ತೀರ್ಮಾನಿಸಲಾಯಿತು. ಈ ಬಗ್ಗೆ ಕೇಂದ್ರದ ಸಲಹೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಶನಿವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಸಿಎಂ, ಮೇ 3ರ ವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಕಂಟೋನ್‌ಮೆಂಟ್‌ ಝೋನ್‌ಗಳಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ನೀಡಲಾಗುವುದಿಲ್ಲ ಎಂದರು.

ಸಿಎಂ ಹೇಳಿದ್ದೇನು?
1.ಕಂಟೈನ್‌ ಮೆಂಟ್‌ ವಲಯದಲ್ಲಿ ಲಾಕ್‌ಡೌನ್‌ ಇನ್ನಷ್ಟು ಕಟ್ಟುನಿಟ್ಟು ಜಾರಿ. ಯಾರೂ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ರವಾನೆ.
2.ಐಟಿ-ಬಿಟಿ ವಲಯಗಳಲ್ಲಿ ಶೇ. 33ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ.
3.ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ.
4.ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನ ವಲಯದ ಕೈಗಾರಿಕೆಗಳು ಮತ್ತು ನಗರ ಪ್ರದೇಶದಲ್ಲಿ ಎಸ್‌ಇಝಡ್‌ಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್‌ಶಿಪ್‌ಗ್ಳಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಣೆಗೆ ಅವಕಾಶ.
5.ಅಂತರ್‌ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಕೈಗಾರಿಕಾ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಂದು ಜಿಲ್ಲೆಯಾಗಿ ಪರಿಗಣನೆ.
6.ಹಿರಿಯ ನಾಗರಿಕರು ಮನೆಯಿಂದ ಹೊರಬರಲು ಅವಕಾಶವಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಎಲ್ಲೆಂದರಲ್ಲಿ ಉಗುಳುವುದಕ್ಕೆ ನಿಷೇಧ.

ನಿರ್ಮಾಣ ವಲಯಕ್ಕೆ ಅನುಮತಿ
ನಗರ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವ ಕಡೆ ನಿರ್ಮಾಣ ಚಟುವಟಿಕೆ ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ. ನಿರ್ಮಾಣಕ್ಕೆ ಬೇಕಾದ ಸರಕು ಸಾಗಣೆಗೂ ಅವಕಾಶ ಕಲ್ಪಿಸಿದೆ. ಇದರಿಂದ ಪ್ಲಂಬರ್‌, ಪೈಂಟರ್‌, ಎಲೆಕ್ರೀಶಿಯನ್‌ ಮತ್ತು ಇತರ ಕಾರ್ಮಿಕರಿಗೂ ಸಂಚಾರ ಮತ್ತು ಕಾರ್ಯನಿರ್ವಹಣೆಗೆ ಅವಕಾಶ ಕೊಡ ಬೇಕಾಗುತ್ತದೆ. ಆಗ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಅಗತ್ಯ ಉಂಟಾಗಿ ಸಂಚಾರ ಹೆಚ್ಚಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಜತೆಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗ ಪ್ರಸ್ತುತ ಕಾರ್ಮಿಕ ಇಲಾಖೆಯಡಿ ಆಶ್ರಯ ಪಡೆದಿರುವ ಕಾರ್ಮಿಕರು ಕೆಲಸಕ್ಕೆ ಹೋಗಲು ಅವಕಾಶ ಕೊಡಿ ಎಂದು ಪಟ್ಟು ಹಿಡಿದರೆ, ಗುತ್ತಿಗೆದಾರರು ಕಾರ್ಮಿಕರನ್ನು ಹೆಚ್ಚು ಹೆಚ್ಚು ಕೆಲಸಕ್ಕೆ ಕರೆದುಕೊಂಡರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಆತಂಕವೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next