Advertisement
ಅಪಘಾತ, ಬೆಂಕಿ ಅವಘಡ, ಹೃದಯಾಘಾತ, ಪ್ರಾಕೃತಿಕ ವಿಕೋಪಗಳಂತಹ ತುರ್ತು ಸಂದರ್ಭದಲ್ಲಿ ನೆರವು ನೀಡುವ ಸಲುವಾಗಿ ಸರಕಾರ ನಮ್ಮ 100 ಎಂಬ ಹೊಸದೊಂದು ತುರ್ತು ಸೇವೆಯ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಇದು ಈಗಾಗಲೇ ಇದ್ದ ಪೊಲೀಸ್ ಸಹಾಯವಾಣಿಯ ಪರಿಷ್ಕೃತ ರೂಪ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಸ ನಂಬರ್‌ಗೆ ಚಾಲನೆ ಕೊಡುವಾಗ ಹೇಳಿದ್ದಾರೆ. ಸದ್ಯಕ್ಕೆ ಬೆಂಗಳೂರು ನಗರದಲ್ಲಿ ನಮ್ಮ 100 ಸೇವೆ ದೊರೆಯುತ್ತದೆ. ಕ್ರಮೇಣ ರಾಜ್ಯವ್ಯಾಪಿಯಾಗಿ ಜಾರಿಯಾಗಲಿದೆ. ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ಸೇರಿದಂತೆ ಬೇರೆ ಬೇರೆ ಸಹಾಯವಾಣಿಗಳನ್ನು ನಮ್ಮ 100ನಲ್ಲಿ ಅಂತರ್ಗತಗೊಳಿಸಲಾಗಿದೆ. ಅರ್ಥಾತ್ ಏನೇ ಆಪತ್ತಿನ ಸಂದರ್ಭ ಇದ್ದರೂ 100 ನಂಬರ್‌ಗೆ ಕರೆ ಮಾಡಿದರೆ ಸಹಾಯ ಧಾವಿಸಿ ಬರುತ್ತದೆ. 100ಕ್ಕೆ ಕರೆ ಮಾಡಿ ಅನಂತರ ಯಾವ ಇಲಾಖೆಯ ಸೇವೆ ಬೇಕೆಂದು ತೀರ್ಮಾನಿಸಿ ಇನ್ನೊಂದು ನಂಬರ್ ಒತ್ತಬೇಕು.
Related Articles
Advertisement
112 ಎಲ್ಲ ರೀತಿಯ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಮ್ ಇಲ್ಲದಿದ್ದರೂ 112ಕ್ಕೆ ಕರೆ ಮಾಡಬಹುದು. ಇಷ್ಟು ಮಾತ್ರವಲ್ಲದೆ ಮೊಬೈಲ್ ಫೋನ್‌ಗಳು ಲಾಕ್ ಆಗಿದ್ದರೂ 112ಕ್ಕೆ ಕರೆ ಮಾಡಲು ಅಡ್ಡಿಯಿಲ್ಲ. ಜತೆಗೆ ಎಸ್‌ಎಂಎಸ್ ಮೂಲಕವೂ ನೆರವು ಕೇಳಬಹುದು. ಇಷ್ಟೆಲ್ಲ ಸೌಲಭ್ಯವಿರುವ 112ನ್ನು ಅನುಷ್ಠಾನಿಸಿಕೊಳ್ಳಲು ಕರ್ನಾಟಕವೂ ಸೇರಿದಂತೆ ಹೆಚ್ಚಿನೆಲ್ಲ ರಾಜ್ಯಗಳು ವಿಶೇಷ ಆಸ್ಥೆ ತೋರಿಸಿಲ್ಲ. ಇದರ ಬದಲಾಗಿ ಹೊಸ ಹೊಸ ಎಮರ್ಜೆನ್ಸಿ ನಂಬರ್‌ಗಳನ್ನು ಪ್ರಾರಂಭಿಸುತ್ತಿವೆ. ಇದರಿಂದಾಗಿ ಜನರಿಗೆ ಯಾವುದು ನಿಜವಾದ ಎಮರ್ಜೆನ್ಸಿ ನಂಬರ್ ಎನ್ನುವ ಗೊಂದಲವುಂಟಾಗಿದೆ.
ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೂ ಬೇರೆ ಬೇರೆ ಸರಕಾರಿ ಇಲಾಖೆಗಳು ನಾನಾ ರೀತಿಯ ಎಮರ್ಜೆನ್ಸಿ ನಂಬರ್‌ಗಳನ್ನು ಹೊಂದಿವೆ. ಇದರ ಜತೆಗೆ ಎನ್‌ಜಿಒಗಳು, ಖಾಸಗಿ ಆಸ್ಪತ್ರೆಗಳು ಕೂಡ ತಮ್ಮದೇ ಆದ ಎಮರ್ಜೆನ್ಸಿ ನಂಬರ್‌ಗಳನ್ನು ಇಟ್ಟುಕೊಂಡಿವೆ. ಇಷ್ಟೆಲ್ಲ ನಂಬರ್ ಇರುವಾಗ ಜನರು ಯಾವುದಕ್ಕೆಂದು ಕರೆ ಮಾಡುವುದು? ಇನ್ನು ಹಿಂದಿನ ನಂಬರ್‌ಗಳು ಚಾಲನೆಯಲ್ಲಿರುವುದಿಲ್ಲವೇ ಎನ್ನುವದನ್ನು ಸ್ಪಷ್ಟಪಡಿಸಿಲ್ಲ. 100ರಲ್ಲಿ ಒಂದೊಂದು ಇಲಾಖೆಗಾಗಿ ಒಂದೊಂದು ಅಂಕಿಯನ್ನು ಒತ್ತಿಕೊಂಡು ಅದರಿಂದ ಬರುವ ಮಾತನ್ನು ಆಲಿಸಿಕೊಂಡು ಕುಳಿತುಕೊಳ್ಳುವಷ್ಟು ವ್ಯವಧಾನ ತುರ್ತು ಸಂದರ್ಭದಲ್ಲಿ ಇರುತ್ತದೆಯೇ? ರಾಜ್ಯಕ್ಕೆ ಮಾತ್ರ ಸೀಮಿತವಾಗಿ ಹೊಸ ಎಮರ್ಜೆನ್ಸಿ ನಂಬರ್ ಪ್ರಾರಂಭಿಸುವ ತುರ್ತು ಅಗತ್ಯ ಏನಿತ್ತು. ಕೇಂದ್ರ ನೀಡಿದ ನಂಬರನ್ನೇ ಪರಿಣಾಮಕಾರಿಯಾಗಿ ಜಾರಿಗೆ ತಂದು ಇತರ ರಾಜ್ಯಗಳಿಗೆ ಮಾದರಿಯಾಗಬಹುದಿತ್ತಲ್ಲವೆ?