ಹುಬ್ಬಳ್ಳಿ: ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಿಸುವ ಕಲಾವಿದರು ಈ ಬಾರಿ ಗಣೇಶೋತ್ಸವ ಆಚರಣೆ ಮೊದಲಿನಂತೆ ನಡೆಯಲಿದೆಯೇ, ಮೂರ್ತಿಗಳ ಮಾರಾಟ ಆಗಲಿದೆಯೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷವೂ ಗಣೇಶ ಚತುರ್ಥಿ ನಾಲ್ಕೈದು ತಿಂಗಳು ಇರುವಾಗಲೇ ಕಲಾವಿದರು ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗುತ್ತಾರೆ. ಇನ್ನು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುವ ಮಂಡಳದವರೂ ಗೊಂದಲಕ್ಕೆ ಸಿಲುಕಿದ್ದು, ಏನು ಮಾಡುವುದು ಎನ್ನುವ ಚಿಂತನೆಯಲ್ಲಿದ್ದಾರೆ.
ಕೆಲಸವೇ ಆರಂಭವಾಗಿಲ್ಲ: ಅವಳಿನಗರದಲ್ಲಿ ಕೆಲ ವರ್ಷಗಳಿಂದ ಪಿಒಪಿ ಗಣೇಶ ಮೂರ್ತಿಗಳ ಅಬ್ಬರವಿತ್ತು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಮಣ್ಣಿನ ಮೂರ್ತಿಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದ್ದರಿಂದ ನಗರಕ್ಕೆ ಪಿಒಪಿ ಗಣೇಶ ಮೂರ್ತಿಗಳು ಬರುತ್ತಿಲ್ಲ. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ಇವುಗಳ ತಯಾರಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಇನ್ನು ಕೆಲಸವೇ ಆರಂಭವಾಗಿಲ್ಲ. ಮೂರ್ತಿ ಬುಕ್ಕಿಂಗ್ ಮಾಡುವವರು ಸಹ ಮಾಡಿಲ್ಲ. ಇದರಿಂದ ಎಷ್ಟು ಅಳತೆಯ ಗಣೇಶ ಮೂರ್ತಿ ಸಿದ್ಧಪಡಿಸಬೇಕು ಎನ್ನುವ ಗೊಂದಲದಲ್ಲಿ ಕಲಾವಿದರಿದ್ದಾರೆ. ಹೀಗಾಗಿ ಜಿಲ್ಲಾಡಳಿತವೇ ಸ್ಪಷ್ಟತೆ ನೀಡಬೇಕಾಗಿದೆ.
ಮಂಡಳದವರಲ್ಲೂ ಗೊಂದಲ: ಈ ಬಾರಿ ಗಣೇಶೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡುವುದು ಅಷ್ಟಕ್ಕಷ್ಟೆ. ನಗರದಲ್ಲಿ ವಿವಿಧೆಡೆ ಸುಮಾರು 400ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಈ ಬಾರಿ ಎಲ್ಲೆಡೆ ವೈರಸ್ ಭೀತಿ ಇರುವುದರಿಂದ ಎಷ್ಟು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗಲಿವೆ ಎನ್ನುವುದರ ಕುರಿತು ಚಿಂತನೆ ನಡೆದಿವೆ. ಇನ್ನು ಪ್ರತಿಷ್ಠಾಪನೆ ಮಾಡಿದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೀಗಾಗಿ ಮಂಡಳದವರೂ ಗೊಂದಲದಲ್ಲಿದ್ದಾರೆ.
ಬೆಲೆ ಏರಿಕೆ ಬಿಸಿ ಸಾಧ್ಯತೆ: ಗಣೇಶ ಮೂರ್ತಿ ತಯಾರಿಕೆಗೆ ಬೇಕಾಗುವ ಮಣ್ಣು ಸೇರಿದಂತೆ ಕಚ್ಚಾ ವಸ್ತುಗಳ ಕೊರತೆ ಇಲ್ಲ. ಆದರೆ ಬೆಲೆ ಏರಿಕೆಯ ಬಿಸಿ ಎಲ್ಲರಿಗೂ ತಾಗಬಹುದು. ಲಾಕ್ ಡೌನ್‌ನಿಂದಾಗಿ ಅಗತ್ಯ ಕೆಲಸಗಾರರು ಸಿಗದೇ ಕೆರೆ, ಗದ್ದೆಯಿಂದ ಮಣ್ಣು ತರುವುದು ಕಷ್ಟಕರವಾಗಿದೆ. ಮಣ್ಣು, ಬಣ್ಣ ಇತ್ಯಾದಿ ಅಲಂಕಾರಿಕ ಸಾಮಗ್ರಿಗಳ ಬೆಲೆ ಮೇಲೆ ಗಣಪತಿ ಮೂರ್ತಿ ದರ ನಿಗದಿಯಾಗಲಿದೆ. ಬಹುತೇಕ ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ಈ ಬಾರಿ ಬೆಲೆ ಏರಿಕೆ ಬಿಸಿ ತಾಗಬಹುದು.
ಹೊರರಾಜ್ಯದವರಿಗೆ ಬೇಡ ಮಣೆ : ಪ್ರತಿ ವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕೋಲ್ಕತ್ತಾ ಸೇರಿ ಬೇರೆ ಕಡೆಗಳಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಬರುತ್ತಾರೆ. ಅವಸರದಲ್ಲಿ ಪಿಒಪಿ ಮೂರ್ತಿಗೇ ಪ್ರಾಶಸ್ತ್ಯ ಕೊಡುತ್ತಾರೆ. ಆದ್ದರಿಂದ ಹೊರಗಿನವರಿಗೆ ಅವಕಾಶ ಕೊಡಬಾರದು. ಅದರಲ್ಲೂ ಕೋವಿಡ್ ಭಯ ಇನ್ನೂ ದೂರವಾಗಿಲ್ಲ. ಈ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಬಂದು ರೋಗ ಹರಡುವ ಭೀತಿ ಇದೆ. ಈ ಬಗ್ಗೆ ಸ್ಥಳೀಯ ಆಡಳಿತ ಗಮನ ಹರಿಸಬೇಕು ಎನ್ನುತ್ತಾರೆ ಇಲ್ಲಿಯ ಕಲಾವಿದರು.
ಈಗಾಗಲೇ ಮಹಾಮಂಡಳದಿಂದ ಸಭೆ ನಡೆಸಿ ಈ ಬಾರಿ ಗಣೇಶ ಚತುರ್ಥಿಯನ್ನು ಯಾವುದೇ ಆಡಂಬರವಿಲ್ಲದೆ ಸರಳವಾಗಿ ಹಾಗೂ ಕೋವಿಡ್ ವೈರಸ್ ಮುಂಜಾಗ್ರತಾ ಕ್ರಮಗಳೊಂದಿಗೆ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಣೇಶ ಮೂರ್ತಿಗಳ ಅಳತೆ ಕುರಿತು ಕಲಾವಿದರಲ್ಲಿ ಗೊಂದಲಗಳಿದ್ದು, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು.
–ಮೋಹನ ಲಿಂಬಿಕಾಯಿ ಮಹಾಮಂಡಳದ ಗೌರವಾಧ್ಯಕ್ಷ
ಸಣ್ಣ ಗಣಪತಿ ಮೂರ್ತಿಗಳಿಗೆ ಯಾವುದೇ ಕೊರತೆಯಾಗುವುದಿಲ್ಲ. ಆದರೆ ದೊಡ್ಡ ಸಾರ್ವಜನಿಕ ಗಣೇಶ ಮೂರ್ತಿಗಳ ಕೊರತೆ ಎದುರಾಗಬಹುದು. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಸಭೆ ಕರೆದು ಈ ಕುರಿತು ಚರ್ಚಿಸಿ ಸ್ಪಷ್ಟ ನಿರ್ಧಾರ ತಿಳಿಸಬೇಕು.
–ಶ್ರೀನಿವಾಸ ಕಾಂಬ್ಳೆ, ಕಲಾವಿದ
–ಬಸವರಾಜ ಹೂಗಾರ