Advertisement

ಜಾರಿಯಾಗದ ಆದೇಶದಿಂದ ಗೊಂದಲ

10:18 AM Dec 28, 2019 | Team Udayavani |

ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರಕಾರಿ ಶಾಲೆಗಳ ಶಿಕ್ಷಕರ ಸಾಂದರ್ಭಿಕ ರಜೆಯನ್ನು 15ಕ್ಕೆ ಏರಿಕೆ ಮಾಡುವಂತೆ ಹೊರಡಿಸಿದ ಟಿಪ್ಪಣಿ ನಂಬಿ 10ರ ಬದಲಾಗಿ 15 ಸಾಂದರ್ಭಿಕ ರಜೆ ಪಡೆದ ಶಾಲಾ ಶಿಕ್ಷಕರೀಗ ತೊಂದರೆ ಗೀಡಾಗಿದ್ದಾರೆ. ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹೊರತುಪಡಿಸಿ ಬಾಕಿ ಇಲಾಖೆಯ ಸಿಬಂದಿಗೆ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆಯನ್ನು ನಿಗದಿ ಪಡಿಸಿತ್ತು. ಅದರನ್ವಯ ಅವರ ಸಾಂದರ್ಭಿಕ ರಜೆಯನ್ನು 15ರಿಂದ 10ಕ್ಕೆ ಇಳಿಸಲಾಗಿತ್ತು.

Advertisement

ಆದರೆ ಸರಕಾರಿ ಶಾಲೆಗಳ ಶಿಕ್ಷಕರಿಗೆ 2ನೇ ಮತ್ತು 4ನೇ ಶನಿವಾರ ರಜೆ ಇಲ್ಲದ ಕಾರಣ ಹಿಂದಿನಂತೆಯೇ ಸಾಂದರ್ಭಿಕ 15 ರಜೆ ನೀಡುವಂತೆ ಸರಕಾರಿ ಶಾಲೆಗಳ ಶಿಕ್ಷಕರು ಸಿಎಂಗೆ ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿದ ಸಿಎಂ ನ.30ರಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಟಿಪ್ಪಣಿ ಪತ್ರ ಬರೆದಿದ್ದಾರೆ. ಆದರೆ ಶಿಕ್ಷಣ ಇಲಾಖೆಗೆ ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಮತ್ತು ಸುತ್ತೋಲೆ ಬಂದಿಲ್ಲ. ಆದರೆ ಟಿಪ್ಪಣಿಯ ಪ್ರತಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾಗಿದ್ದು, ಶಿಕ್ಷಕರಲ್ಲಿ ಭರವಸೆ ಮೂಡಿಸಿದೆ.

ಅಧಿಕಾರಿಗಳಿಗೆ ಪರದಾಟ
ಶಿಕ್ಷಕರು ಈಗಾಗಲೇ 15 ಸಾಂದರ್ಭಿಕ ರಜೆ ಪಡೆದಿದ್ದಾರೆ. ಈಗ ವರ್ಷ ಕೊನೆಗೊಳ್ಳುತ್ತಿದ್ದು, ಸರಕಾರ ದಿಂದ ಸುತ್ತೋಲೆ ಬಾರದಿರುವುದರಿಂದ ಈ ಹೆಚ್ಚುವರಿ ರಜೆಗಳನ್ನು ಸಾಂದರ್ಭಿಕ ರಜೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಾದ. ಇದರಿಂದ ಹೆಚ್ಚುವರಿ ರಜೆ ಪಡೆದಿರುವ ಶಿಕ್ಷಕರು ತೊಂದರೆಗೀಡಾಗಿದ್ದಾರೆ.

ರಜೆ ಕುರಿತು ಈ ಹಿಂದೆ ಮನವಿ ಸಲ್ಲಿಸಲಾಗಿದೆ. ಟಿಪ್ಪಣಿ ನಂಬಿ ಶಿಕ್ಷಕರು 12ರಿಂದ 14 ಸಾಂದರ್ಭಿಕ ರಜೆ ಮಾಡಿದ್ದಾರೆ. ಪ್ರಸ್ತುತ ಅಧಿಕಾರಿಗಳು ಹೆಚ್ಚುವರಿ ರಜೆಯನ್ನು “ವೇತನ ರಹಿತ’ ಮಾಡುವಂತೆ ತಿಳಿಸಿದ್ದಾರೆ. ಇದರಿಂದಾಗಿ ಅನೇಕ ಶಿಕ್ಷಕರು ಗೊಂದಲಕ್ಕೆ ತುತ್ತಾಗಿದ್ದಾರೆ.
– ಅಶೋಕ ಕುಮಾರ್‌ ಶೆಟ್ಟಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಕಾರ್ಯದರ್ಶಿ

ಸರಕಾರ, ಶಿಕ್ಷಣ ಇಲಾಖೆ ಯಿಂದ ಸಾಂದರ್ಭಿಕ ರಜೆ 15ಕ್ಕೆ ಏರಿಕೆಯಾಗಿರುವ ಕುರಿತು ಯಾವುದೇ ಸುತ್ತೋಲೆ ಬಂದಿಲ್ಲ.
– ಶೇಷಶಯನ ಕಾರಿಂಜ, ವಾಲ್ಟರ್‌ ಡಿ’ಮೆಲ್ಲೋ ಡಿಡಿಪಿಐಗಳು, ಉಡುಪಿ, ದ.ಕ.

Advertisement

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next