Advertisement

ಪರೀಕ್ಷೆ  ನಡೆಯದೇ ಮುಂದಿನ ಪಾಠ! ರಾಣಿ ಚನ್ನಮ್ಮ ವಿವಿಯಿಂದ ಗೊಂದಲ !

04:15 PM Apr 28, 2021 | Team Udayavani |

ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 12ರವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಬುಧವಾರದಿಂದ ಎಲ್ಲವೂ ಸ್ತಬ್ಧಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿವಿ ಪದವಿ ತರಗತಿ ನಡೆಸುವ ಕುರಿತು ಎರಡೆರಡು ಆದೇಶ ಹೊರಡಿಸುವ ಮೂಲಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದ ಯಾವುದೇ ವಿವಿ ಹೊರಡಿಸದ ಆದೇಶವನ್ನು ರಾಣಿ ಚನ್ನಮ್ಮ ವಿವಿ ಹೊರಡಿಸಿದೆ ಎಂಬ ಮಾತು ಪ್ರಾಧ್ಯಾಪಕರ ವಲಯದಲ್ಲಿ ಕೇಳಿ ಬರುತ್ತಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜುಗಳಿಗೆ ಪ್ರಾಧ್ಯಾಪಕರು ಆಗಮಿಸಿ, ಆನ್‌ ಲೈನ್‌ ತರಗತಿ ನಡೆಸುವಂತೆ ವಿವಿಯ ಕುಲಸಚಿವರು ಆದೇಶಿಸಿದ್ದರು. ಬಳಿಕ ಮತ್ತೂಂದು ಪರಿಷ್ಕೃತ ಆದೇಶ ಹೊರಡಿಸಿ, ಪ್ರಾಧ್ಯಾಪಕರು ಕಾಲೇಜಿಗೆ ಬಾರದೇ ಮನೆಯಿಂದಲೇ ಆನ್‌ಲೈನ್‌ ತರಗತಿ ನಡೆಸಲು ಆದೇಶಿಸಿದ್ದಾರೆ.

ಹಳೆಯ ಪಾಠವೇ ಮುಗಿದಿಲ್ಲ: ಕೊರೊನಾ, ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಹೀಗೆ ಹಲವು ಕಾರಣಗಳಿಂದ ಪದವಿ ಕಾಲೇಜು ವಿದ್ಯಾರ್ಥಿಗಳ ಸೆಮಿಸ್ಟರ್‌ ಪರೀಕ್ಷೆ ನಡೆಸಲಾಗಿಲ್ಲ. ರಾಜ್ಯದ ವಿವಿಯ ಇತಿಹಾಸದೇ ಒಟ್ಟು ಆರು ಬಾರಿ ಪರೀಕ್ಷೆ ಮುಂದೂಡಲಾಗಿದೆ. ಕೊರೊನಾ ಸಂದರ್ಭದಲ್ಲೂ ಪರೀಕ್ಷೆ ನಡೆಸಲು ವಿವಿ ನಿರ್ಧರಿಸಿ, ಪರೀಕ್ಷೆಯ ವೇಳಾಪಟ್ಟಿ ಹೊರಡಿಸಿತ್ತು. ಆದರೆ, ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲ ಸೆಮಿಸ್ಟರ್‌ಗಳ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗಾಗಿ ಪದವಿ ಕಾಲೇಜುಗಳ 1, 3 ಹಾಗೂ 5ನೇ ಸೆಮಿಸ್ಟರ್‌ಗಳ ಪರೀಕ್ಷೆಗಳು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅಲ್ಲದೇ ಈ ಪದವಿ ತರಗತಿಗಳ ಸಿಲೆಬಸ್‌ ಕೂಡ ಈವರೆಗೆ ಪೂರ್ಣಗೊಂಡಿಲ್ಲ.

ಕಳೆದ ವರ್ಷ ಕೆಲ ದಿನಗಳ ಕಾಲ ಆನ್‌ಲೈನ್‌ ಕ್ಲಾಸ್‌ ನಡೆಸಿದರೂ ಸಿಲೆಬಸ್‌ ಪೂರ್ಣಗೊಳ್ಳದ ಕಾರಣ ಪರೀಕ್ಷೆ ಸದ್ಯಕ್ಕೆ ನಡೆಸದಂತೆ ವಿದ್ಯಾರ್ಥಿಗಳ ಸಂಘಟನೆಯಿಂದ ತೀವ್ರ ಒತ್ತಡ ಬಂದಿತ್ತು. ಇಂದಿಗೂ ಈ ಮೂರು ಸೆಮಿಸ್ಟರ್‌ಗಳ ಸಿಲೆಬಸ್‌ ಮುಗಿದಿಲ್ಲ. ಪರೀಕ್ಷೆಗಳೂ ನಡೆದಿಲ್ಲ. ಆದರೆ, ಮುಂದಿನ ತರಗತಿಗಳ ಪಾಠ ಮಾಡಲು ವಿವಿ ಮುಂದಾಗಿದೆ. ಆನ್‌ಲೈನ್‌ ಪಾಠಕ್ಕೆ ಆದೇಶ: ಜಿಲ್ಲೆಯಲ್ಲಿ ವಿವಿ ವ್ಯಾಪ್ತಿಯಲ್ಲಿ 18 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಒಟ್ಟು 63 ಪದವಿ ಕಾಲೇಜುಗಳಿವೆ. ಈ ಕಾಲೇಜುಗಳು ಸೇರಿದಂತೆ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯಲ್ಲಿ 2, 4 ಹಾಗೂ 6ನೇ ಸೆಮಿಸ್ಟರ್‌ ತರಗತಿಗಳನ್ನು ಏ.28ರಿಂದ ಆನ್‌ಲೈನ್‌ನಲ್ಲಿ ನಡೆಸಲು ಕುಲಸಚಿವ ಹುರಕಡ್ಲಿ ಆದೇಶಿಸಿದ್ದಾರೆ.

Advertisement

ಈ ಮೂರು ಸೆಮಿಸ್ಟರ್‌ಗಳ ತರಗತಿಗಳನ್ನು ಪ್ರಾಧ್ಯಾಪಕರು ಮನೆಯಿಂದಲೇ ನಡೆಸಬೇಕು. ಅಲ್ಲದೇ ಆನ್‌ಲೈನ್‌ ತರಗತಿ ಕಡ್ಡಾಯಗೊಳಿಸಬೇಕು, ವಿದ್ಯಾರ್ಥಿಗಳ ಹಾಜರಾತಿಯೂ ಕಡ್ಡಾಯವಾಗಿದ್ದು, ಈ ವಿವರವನ್ನು ಪ್ರತಿ ತಿಂಗಳು ವಿವಿಗೆ ಸಲ್ಲಿಸಬೇಕು. ಆನ್‌ಲೈನ್‌ ತರಗತಿಗಳ ಕುರಿತು ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಸಮಸ್ಯೆ ಬಂದಲ್ಲಿ ಆಯಾ ವಿಭಾಗದ ಮುಖ್ಯಸ್ಥರು ಹಾಗೂ ಆಯಾ ಕಾಲೇಜಿನ ಪ್ರಾಚಾರ್ಯರೇ ಬಗೆಹರಿಸಿ, ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಿದೆ.

ಆನ್‌ಲೈನ್‌ಗೆ ನೂರೆಂಟು ಸಮಸೆ: ಕೊರೊನಾ ಕಠಿಣ ಕರ್ಫ್ಯೂ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರು ಮನೆಯಿಂದಲೇ ಪಾಠ ಮಾಡಲು ಸಿದ್ಧರಿದ್ದಾರೆ. ಆದರೆ, ವಿದ್ಯಾರ್ಥಿಗಳು ನೂರೆಂಟು ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟು 63 ಕಾಲೇಜುಗಳ ವ್ಯಾಪ್ತಿಯ ಅಷ್ಟೂ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲೇ 45 ಸಾವಿರ ದಾಟುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದಿದ್ದು, ಎಲ್ಲ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ ಫೋನ್‌ಗಳಿಲ್ಲ. ಇದ್ದರೂ ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸರಿಯಾಗಿ ಬರಲ್ಲ. ಹೀಗಾಗಿ ಸದ್ಯಕ್ಕೆ ಆನ್‌ಲೈನ್‌ ಕ್ಲಾಸ್‌ ಬೇಡ ಎಂದು ಹಲವಾರು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಆನ್‌ಲೈನ್‌ ಕ್ಲಾಸ್‌ ನಡೆಸಿದರೂ ಶೇ.20 ವಿದ್ಯಾರ್ಥಿಗಳು ಮಾತ್ರ ಭಾಗಹಿಸುತ್ತಾರೆ. ಉಳಿದ ವಿದ್ಯಾರ್ಥಿಗಳು ಭಾಗವಹಿಸಲು ಹಲವಾರು ಸಮಸ್ಯೆ ಇವೆ. ಆನ್‌ಲೈನ್‌ ಕ್ಲಾಸ್‌ ಕಡ್ಡಾಯಗೊಳಿಸಿ, ವಿವಿ ಆದೇಶಿಸಿದೆ.

ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ ಬೇಡ ಅಂತಿದ್ದಾರೆ. ಇದೆಲ್ಲದರ ಮಧ್ಯೆ ಪದವಿ ಕಾಲೇಜುಗಳ ಪ್ರಾಧ್ಯಾಪಕರು, ಪ್ರಾಚಾರ್ಯರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ರಾಣಿ ಚನ್ನಮ್ಮ ವಿವಿ, ದಿನಕ್ಕೊಂದು ಆದೇಶ ಹೊರಡಿಸಿ, ವಿದ್ಯಾರ್ಥಿಗಳಲ್ಲಿ, ಪ್ರಾಧ್ಯಾಪಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಆನ್‌ಲೈನ್‌ ತರಗತಿ ಕಡ್ಡಾಯಗೊಳಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next