Advertisement

ಮುಗಿಯದ ಆಟೋ ನಿಲ್ದಾಣ ಗೊಂದಲ: “ಕೋಡಿಂಗ್‌’ಗೂ ಅಪಸ್ವರ 

01:00 AM Feb 24, 2019 | Harsha Rao |

ಉಡುಪಿ: ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳಿಗಾಗಿ ಕೆಲವು ರಿಕ್ಷಾ ಚಾಲಕರ ನಡುವಿನ ಸಂಘರ್ಷ ಇನ್ನೂ ಅಂತ್ಯ ಕಂಡಿಲ್ಲ. ಕಲರ್‌ ಕೋಡಿಂಗ್‌ ಮಾಡಬೇಕೆನ್ನುವ ಜಿಲ್ಲಾಡಳಿತದ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ.
ನಗರ ಮತ್ತು ಗ್ರಾಮೀಣ ಪ್ರದೇಶದ ಆಟೋರಿಕ್ಷಾಗಳನ್ನು ಗುರುತಿಸಲು ಸುಲಭವಾಗುವ ಉದ್ದೇಶದಿಂದ ನಗರ ಮತ್ತು ಗ್ರಾಮೀಣ ವಲಯಗಳನ್ನು ವಿಭಜಿಸಿ ಕಲರ್‌ ಕೋಡಿಂಗ್‌ ಮಾಡುವ ಕಾರ್ಯ ಒಂದು ತಿಂಗಳ ಹಿಂದೆ ಆರಂಭಗೊಂಡಿತ್ತು. ಆದರೆ ಆಟೋ ರಿಕ್ಷಾ ಚಾಲಕರ ಸಂಘಗಳ ನಡುವೆ ಒಮ್ಮತ ಮೂಡದೆ ಕೋಡಿಂಗ್‌ ಕೂಡ ವೇಗ ಪಡೆದಿಲ್ಲ. ಒಂದು ಬಣ ಕೋಡಿಂಗ್‌ ಪರವಿದ್ದರೆ ಇನ್ನೊಂದು ಬಣ ವಿರೋಧ ವ್ಯಕ್ತಪಡಿಸುತ್ತಿದೆ.

Advertisement

ಷರತ್ತುಬದ್ಧ ಒಪ್ಪಿಗೆ
ಕೋಡಿಂಗ್‌ ಬೇಕೇ ಬೇಡವೆ? ಎಂಬ ಚರ್ಚೆಗಳು ಬಂದಾಗ ಆರಂಭದಲ್ಲಿ ಕೆಲವು ಸಂಘಗಳು ಬೇಡ ಎಂದಿದ್ದವು. ಅನಂತರ “ಕೋಡಿಂಗ್‌ ಮಾಡುವುದಾದರೆ 2018ರ ವರೆಗೆ ನಗರದಲ್ಲಿ ಆಟೋ ಓಡಿಸಿದ (ಓಡಿಸುತ್ತಿರುವ), ನಗರ ವಾಸಿಗಳಾಗಿರುವವರಿಗೆ ನಗರದ ಪರವಾನಿಗೆ ನೀಡಿ ಅನಂತರ ಕೋಡಿಂಗ್‌ ಮಾಡಬೇಕು ಎಂದು ಕೆಲವು ಸಂಘಗಳು ಷರತ್ತು ವಿಧಿಸಿದ್ದವು. ಆದಾಗ್ಯೂ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೂ ಸಂಘರ್ಷ ಕಡಿಮೆಯಾಗಿಲ್ಲ. ಮತ್ತಷ್ಟು ಗೊಂದಲಗಳನ್ನೇ ಹುಟ್ಟುಹಾಕಿದೆ.

2012ರದ್ದೇ ಅಂತಿಮ
2012ರಲ್ಲಿ ಸುಮಾರು 6,000 ಆಟೋರಿಕ್ಷಾಗಳಿಗೆ ನಗರ ಪರವಾನಿಗೆ ನೀಡಲಾಗಿತ್ತು. ಇವುಗಳು ನಗರ ಮತ್ತು ಗ್ರಾಮೀಣ ಎರಡೂ ಕಡೆ ಕೂಡ ಬಾಡಿಗೆ ಮಾಡುವ ಅವಕಾಶ ನೀಡಲಾಯಿತು. ಅನಂತರ ಇದುವರೆಗೆ ಬೇರೆ ಆಟೋಗಳಿಗೆ ನಗರ ಪರವಾನಿಗೆ ನೀಡಿಲ್ಲ.  ಪರವಾನಿಗೆ ಇಲ್ಲದಿದ್ದರೂ ಅನೇಕರು ಸುಮಾರು 25 ವರ್ಷಗಳಿಂದ ದುಡಿಯುತ್ತಿದ್ದಾರೆ. ಈಗ ಅವರನ್ನು ನಗರದಿಂದ ಹೊರಗೆ ಕಳುಹಿಸಿದರೆ ಅವರು ತುಂಬಾ ತೊಂದರೆಗೊಳಗಾಗುತ್ತಾರೆ ಎಂಬುದು ಕೆಲವು ಸಂಘಗಳ ಪದಾಧಿಕಾರಿಗಳ ಆತಂಕ, ಆಕ್ಷೇಪ.  

1,500 ರಿಕ್ಷಾಗಳಿಗೆ ಪರವಾನಿಗೆ ಬಾಕಿ?
ನಗರದೊಳಗೆ ಈಗ ದುಡಿಯುತ್ತಿರುವ ಸುಮಾರು 1,500 ಆಟೋ ರಿಕ್ಷಾಗಳಿಗೆ ನಗರ ಪರವಾನಿಗೆ ಇಲ್ಲ. ಈ ಪೈಕಿ ಕೆಲವರು ನಿರ್ದಿಷ್ಟ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿದ್ದಾರೆ. ಇನ್ನು ಕೆಲವರು ನಗರದ ವಿವಿಧೆಡೆ ಬಾಡಿಗೆ ಮಾಡುತ್ತಾರೆ. ನಗರದಲ್ಲಿ ಈಗಲೇ ನಿಲ್ದಾಣದ ಕೊರತೆ ಇದೆ. ಎಲ್ಲರಿಗೂ ಪರವಾನಿಗೆ ನೀಡಿದರೆ ಮತ್ತಷ್ಟು ಸಮಸ್ಯೆಯಾಗಬಹುದು ಎಂಬ ಭೀತಿ ಅಧಿಕಾರಿಗಳದ್ದು. ಈಗ ಬಿಗ್‌ಬಜಾರ್‌, ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ, ಮೀನುಮಾರುಕಟ್ಟೆ, ನಗರಸಭೆ ಕಾರ್ಯಾಲಯ ಸಮೀಪ ರಿಕ್ಷಾ ನಿಲ್ದಾಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಅಲ್ಲಿ ಬಾಡಿಗೆ ಮಾಡುತ್ತಿರುವವರು ಹೊಸ ರಿಕ್ಷಾಗಳ ಪ್ರವೇಶಕ್ಕೆ ತಡೆಯೊಡ್ಡುತ್ತಿದ್ದಾರೆ. ಆದರೆ “ಪರವಾನಿಗೆ ಪಡೆದವರು ನಗರದ ಯಾವ ನಿಲ್ದಾಣದಲ್ಲಿಯೂ ಬಾಡಿಗೆ ಮಾಡಬಹುದು’ ಎಂದು ಇನ್ನೊಂದು ಗುಂಪು ವಾದಿಸುತ್ತಿದೆ. ಇದು ಸಮಸ್ಯೆಯನ್ನು ಜಟಿಲವಾಗಿಸಿದೆ.

ಲಾಭವೇನು? 
ನಗರ ಮತ್ತು ಗ್ರಾಮೀಣ ಎಂದು ಗುರುತಿಸಿ ಕೋಡಿಂಗ್‌ ಮಾಡುವುದರಿಂದ ಜನರಿಗೆ ಪ್ರಯೋಜನವಿಲ್ಲ. ಬದಲಾಗಿ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿ/ಸಿಬಂದಿ ಆಟೋ ಸುಲಭವಾಗಿ ಗುರುತಿಸಲು, ನಿಯಮ ಉಲ್ಲಂ ಸಿದರೆ ಕ್ರಮ ಜರುಗಿಸಲು ಸಾಧ್ಯವಿದೆ. ತಪಾಸಣೆ ನಡೆಸಿದರೆ ಕೋಡಿಂಗ್‌ ಇಲ್ಲದೆಯೂ ಪತ್ತೆಹಚ್ಚಬಹುದು ಎನ್ನುತ್ತಾರೆ ಕೆಲವು ರಿಕ್ಷಾ ಸಂಘಟನೆಯವರು.  

Advertisement

ನ್ಯಾಯಾಲಯದ ಆದೇಶ ಉಲ್ಲಂಘನೆ
ಜಿಲ್ಲಾಧಿಕಾರಿ ಆದೇಶದಂತೆ ವಲಯ 1 ಕಲರ್‌ ಕೋಡಿಂಗ್‌ ಸ್ಟಿಕ್ಕರ್‌ ಅಳವಡಿಸಿ ರಿಕ್ಷಾ ನಿಲ್ದಾಣಗಳಿಗೆ ದುಡಿಯಲು ಹೋದರೆ ಅಲ್ಲಿನ ಚಾಲಕರು ಬೆದರಿಸಿ ತೊಂದರೆ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ. ನ್ಯಾಯಾಲಯ ಮತ್ತು ಸಾರಿಗೆ ಇಲಾಖೆಯ ಆದೇಶ ಪ್ರಕಾರ ಉಡುಪಿ ನಗರಸಭೆ ವ್ಯಾಪ್ತಿಯ 7 ಕಿ.ಮೀ. ವ್ಯಾಪ್ತಿಯಲ್ಲಿ ಯಾವ ನಿಲ್ದಾಣದಲ್ಲಿಯೂ ದುಡಿಯಲು ಅವಕಾಶವಿದೆ. ಬಹುಬೇಡಿಕೆ ಇರುವಲ್ಲಿ ಅಲ್ಲಿನ ಚಾಲಕರು ದುಡಿಯಲು ಬಿಡುತ್ತಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದೆ. ನಮಗೆ ಪೊಲೀಸರು ಭದ್ರತೆ ನೀಡುತ್ತಿಲ್ಲ.
-ವಿಟuಲ ಜತ್ತನ್‌, ಪ್ರಧಾನ ಕಾರ್ಯದರ್ಶಿ,
ಆಟೋ ಚಾಲಕರ ಮತ್ತು ಮಾಲಕರ ಸಂಘಟನೆ, (ನಗರಸಭೆ ಪರವಾನಿಗೆ ಆಟೋರಿಕ್ಷಾಗಳು) 

ಜಾಗದ ಕೊರತೆ
2018ರ ವರೆಗಿನವರಿಗೆ ನಗರದಲ್ಲಿಯೇ ಅವಕಾಶ ಕೊಡಬೇಕೆಂಬ ಬೇಡಿಕೆ ಇದೆ. ಆದರೆ ಇವರೆಲ್ಲರಿಗೂ ನೀಡಿದರೆ ಜಾಗದ ಸಮಸ್ಯೆಯಾಗಲಿದೆ. ಈ ಬೇಡಿಕೆಯನ್ನು ಸಾರಿಗೆ ಪ್ರಾಧಿಕಾರದ ಮುಂದಿಟ್ಟು ಆಕ್ಷೇಪಣೆಗಳನ್ನು ಪಡೆದು ಅನಂತರವಷ್ಟೇ ತೀರ್ಮಾನಿಸಬೇಕಾಗಿದೆ. ಈಗ ಸುಮಾರು ಶೇ.5ರಷ್ಟು ಕಲರ್‌ ಕೋಡಿಂಗ್‌ ಆಗಿದೆ.
– ಪ್ರಾದೇಶಿಕ ಸಾರಿಗೆ ಅಧಿಕಾರಿ
ಉಡುಪಿ 

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next