Advertisement
ಪೊಲೀಸ್ ಅಧಿಕಾರಿಗೆ “ಸರ್, ಈ ಕಾಂಪೌಂಡ್ ಮೇಲಿರುವ ಎಲ್ಲಾ ಮಾಧ್ಯಮದವರನ್ನು ದಯವಿಟ್ಟು ಕಳುಹಿಸುತ್ತೀರಾ..’ ಎಂದು ಕೇಳಿಕೊಂಡೆ. “ಇಲ್ಲ ಸರ್, ಅವರು ನಮ್ಮ ಮಾತು ಕೇಳುವುದಿಲ್ಲ, ನೀವೇ ಹೇಳಬೇಕು’ ಎಂದು ಮತ್ತೆ ಕೈತೊಳೆದುಕೊಂಡು ಬಿಟ್ಟರು. ಸರಿ, ನನಗೆ ಮಾಧ್ಯಮಗಳಲ್ಲಿ ಹಲವರು ಪರಿಚಯವಿದ್ದಾರೆ ಅವರನ್ನೇ ಮನವಿ ಮಾಡಿಕೊಳ್ಳುವ ಎಂದು ನನ್ನ ಕೆಲಸಕ್ಕೆ ಮುಂದಾದೆ. ಪಕ್ಕದಲ್ಲಿಯೇ ನನ್ನ ಭದ್ರತೆಗೆ ಉದ್ದದ ಲಾಠಿ ಹಿಡಿದ, ಹೆಚ್ಚು ಕಡಿಮೆ ಆರಡಿ ಎತ್ತರದ, ದಪ್ಪ ಮೀಸೆಯ, ಸ್ಮಾರ್ಟ್ ಇನ್ಸ್ ಪೆಕ್ಟರ್ ಸಾಹೇಬ್ರು ಬೇರೆ ಇದ್ದರು. ದುರ್ಬೀನು ಎದೆಗೆ ಅಡ್ಡಡ್ಡ ಹಾಕಿಕೊಂಡು, ಬಲಗೈನಲ್ಲಿ ಟಾರ್ಚ್ ಹಿಡಿದು ಹೊರಟೆ. ಇಂತಹ ಸನ್ನಿವೇಶಗಳಲ್ಲಿ ಇವೆರಡು ಸಾಧನಗಳು ಬಹು ಮುಖ್ಯ. ಈ ರೀತಿಯ ಸಂದರ್ಭಗಳಲ್ಲಿ ಪ್ರಾಣಿ ಎಲ್ಲಿ ಕುಳಿತಿದೆಯೆಂದು ಹೇಳು ವುದು ಬಹುಕಷ್ಟ, ಅಡಗಿ ಕುಳಿತಿದ್ದರೆ ಕಾಣುವುದೇ ಇಲ್ಲ. ಕಾಡಿನಲ್ಲಾದರೆ ಗಿಡ, ಪೊದೆಯ ಮಧ್ಯೆ ಅವುಗಳ ಚುಕ್ಕೆಯನ್ನು ಕಂಡು ಹಿಡಿಯಬಲ್ಲೆವು. ಇಲ್ಲಿ ಸಂಪೂರ್ಣವಾಗಿ ಎಲ್ಲವೂ ಅಪಾರದರ್ಶಕ ವಸ್ತುಗಳು, ಹಾಗಾಗಿ ದುರ್ಬೀನು ಬಹು ಉಪಯೋಗಿ. ಕತ್ತಲಾ ದರೆ ಟಾರ್ಚ್ ಬೇಕೇ ಬೇಕು.
ನಮ್ಮ ಕೆಲಸ ಮುಂದುವರಿಯಿತು. “ಏನ್ಸಾರ್ ಯಾವ ಚಾನೆಲ್? ನನ್ನ ಪ್ರಶ್ನೆಗೆ “ಟಿವಿ 9′ ಅಂತ ಖಡಕ್ ಉತ್ತರ. ಮತ್ತದೇ ಮನವಿ. “ಸರ್, ನಮ್ ಕೆಲ್ಸ ನಾವು ಮಾಡ್ತೀವಿ, ನಿಮ್ ಕೆಲಸ ನೀವ್ ಮಾಡಿ’ ಅಂತ ಉತ್ತರ ಬಂತು. ಸರಿ ಮಾಧ್ಯಮ ಸ್ನೇಹಿತ ವಿನಯ್ ಇತ್ತೀಚೆಗೆ ಆ ಚಾನೆಲ್‌ಗೆ ಸೇರಿದ್ದು ಜ್ಞಾಪಕ ಬಂದಿತು. ಅವರಿಗೆ ಫೋನಾಯಿಸಿದೆ. ಫೋನಿಗೆ ಉತ್ತರವಿರಲಿಲ್ಲ. ಸರಿಯೆಂದು ಫೋನ್‌ಬುಕ್‌ನಲ್ಲಿ ಹೆಸರುಗಳನ್ನು ಸೊಲ… ಮಾಡಿದೆ. ಕಿರಣ್ ಟಿವಿ 9 ಅಂತ ಕಂಡಿತು. ಕಿರಣ್ ಆ ಚಾನೆಲ್‌ನ ಹಿರಿಯ ವರದಿಗಾರರು, ಹಲವು ವರ್ಷಗಳಿಂದ ಪರಿಚಿತರು. ನಾವು ನಡೆಸಿದ ಮಾಧ್ಯಮ ಕಾರ್ಯಾಗಾರದಲ್ಲೊಮ್ಮೆ ಭಾಗವಹಿಸಿದ್ದರು. ಸರಿ ಅವರಿಗೆ ಫೋನ್ ಹಚ್ಚಿ ಸಹಾಯ ಕೇಳಿದೆ. “ಸರ್, ಈ ತರಹದ ಪರಿಸ್ಥಿತಿಯಿದೆ, ದಯವಿಟ್ಟು ನಿಮ್ಮ ಸಹೋದ್ಯೋಗಿಗೆ ತಿಳಿಸಿರಿ’ ಎಂದು ಮನವಿ ಮಾಡಿದೆ. “ಫೋನ್ ಕೊಡಿ, ನಾನು ಹೇಳ್ತೀನಿ’ ಅಂದರು ಕಿರಣ್. ಸುಮಾರು ಹತ್ತಡಿ ಎತ್ತರದ ಕಾಂಪೌಂಡ್ ಮೇಲೆ ನಿಂತಿದ್ದ ಕ್ಯಾಮೆರಾಮೆನ್ ಕೈಗೆ ನನ್ನ ಫೋನ್ ವರ್ಗಾಯಿಸಿದೆ. ಒಂದೆರೆಡು ನಿಮಿಷ ಫೋನ್‌ನಲ್ಲಿ ಅದೇನೋ ಮಾತಾಡಿ ಹಿಂದಿರುಗಿಸಿದರು. ಆದರೂ ಅವರೇನೂ ಅಲ್ಲಿಂದ ಅಲ್ಲಾಡುವ ಹಾಗೆ ಕಾಣಲಿಲ್ಲ. ಇನ್ನೊಮ್ಮೆ ಸುದೀರ್ಘ ಚರ್ಚೆ, ಏಳೆಂಟು ಜನ ಸೇರಿ ಮನವಿ ಮಾಡುತ್ತಿದ್ದೇವೆ. ಹೀಗೇ ನಡೆಯುತ್ತಿತ್ತು, ಅಷ್ಟರೊಳಗೆ ಚಿರತೆಯಿದ್ದ ಬಚ್ಚಲು ಮನೆಯಿಂದ ಜೋರಾಗಿ ಗರ್ಜನೆ ಕೇಳಿಸಿತು. ಯಾರೋ ಒಳಗಡೆ ಅದಕ್ಕೆ ಗೊಂದಲಗೊಳಿಸಿದ್ದಾರೆಂದು ತಿರುಗಿ ನೋಡಿದೆ ಅಷ್ಟೇ. ಆಗ ಸಮಯ ಸರಿಯಾಗಿ ಸಂಜೆ 6 ಗಂಟೆ ಏಳು ನಿಮಿಷ ನಲವತ್ತಾರು ಸೆಕೆಂಡ್ (ನಂತರ ಸಿ.ಸಿ.ಟಿ.ವಿ. ಫೂಟೇಜ್ ನಿಂದ ತಿಳಿದದ್ದು)
Related Articles
ಬಂದ ಚಿರತೆ ನಾನಿದ್ದ ದಿಕ್ಕಿಗೆ ಬಲಕ್ಕೆ ತಿರುಗಿತು. ಚಿರತೆ ನನ್ನ ಕಡೆ ಬರುತ್ತದೆ ಎಂದು ಮನದಟ್ಟಾಯಿತು. ಸುತ್ತಲೂ ಆಳಿಗಿಂತ ಎತ್ತರದ ಕಾಂಪೌಂಡ್, ಒಂದೆಡೆ ಈಜುಕೊಳ, ಅದು ಬಿಟ್ಟರೆ ಶಾಲಾ ಕೊಠಡಿ. ಮಾಧ್ಯಮದವರೊಡನೆ ವ್ಯವಹಾರ ಮುಗಿಸಿ ಚಿರತೆ ಆಚೆ ಬಂದರೆ ನಮಗೆ ತುರ್ತು ನಿರ್ಗಮನ ಎಲ್ಲೆಂದು ನೋಡಿಕೊಳ್ಳುವ ಎಂದು ಹಾಕಿದ್ದ ನನ್ನ ಯೋಜನೆ ಇನ್ನೂ ಕಾರ್ಯಗತವಾಗಿರಲಿಲ್ಲ. ಚಿರತೆ ಎಲ್ಲಿದೆಯೆಂದು ಗಮನಿಸುತ್ತಾ ಓಡಲು ಪ್ರಾರಂಭಿಸಿದೆ. ನನ್ನ ಜೊತೆಯಲ್ಲಿದ್ದ ನಾಲ್ಕಾರು ಜನ ಉಸೇನ್ ಬೋಲ್ಟ್ನಂತೆ ನನ್ನನ್ನು ಹಿಂದಿಕ್ಕಿ ಓಡಿದರು. ಸುಮಾರು ಇಪ್ಪತ್ತು ಮೀಟರ್ ಓಡಿದವನು ಎಡಗಡೆಯಿದ್ದ ಗೇಟ್ ಹತ್ತಿದೆ. ಒಂದು, ಎರಡು ಪಾವಟಿಗೆ ಹತ್ತಿದೆ. ಗೇಟಿನ ಮೇಲೆ ಸುಮಾರು ಎರಡು ಅಡಿ ಉದ್ದದ, ಚೂಪಾದ ಕಂಬಿಗಳು. ಹಿಡಿದು ಆಚೆ ನೆಗೆಯಲು ಯಾವುದೇ ಆಸರೆಯಿಲ್ಲ. ಒಮ್ಮೆ ಹಾರಲು ಪ್ರಯತ್ನಿಸಿದಾಗ ಆಗಲಿಲ್ಲ. ಮತ್ತೂಮ್ಮೆ ಪ್ರಯತ್ನಿಸುವ ಎಂದು ಇದ್ದ ಎಲ್ಲಾ ಶಕ್ತಿಯನ್ನು ಬಳಸಿ ನನ್ನನ್ನು ಮೇಲಕ್ಕೆತ್ತಿ ಕೊಳ್ಳಲು ಪ್ರಯತ್ನಿಸಿದೆ, ಆಗಲಿಲ್ಲ. ನಾನೇನು ಆಂಜನೇಯನೇ? ಅಲ್ಲಿಗೆ ಹೆಚ್ಚು ಕಡಿಮೆ ನನ್ನ ಮನಸ್ಸಿನಲ್ಲಿ ಖಾತ್ರಿಯಾಗಿತ್ತು, ಚಿರತೆಯೊಡನೆ ಇವತ್ತಿನ ಮುಖಾಮುಖೀ! ಮೂರು ದಿನದ ಹಿಂದೆ ಯೆಷ್ಟೇ ನನ್ನ 46ನೇ ಹುಟ್ಟು ಹಬ್ಬವನ್ನು ಆಚರಿಸಿದ್ದ ಕುಟುಂಬದರು ಕ್ಷಣಾರ್ಧದಲ್ಲಿ ಕಣ್ಣ ಮುಂದೆ ಬಂದು ಹೋದರು.
ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡೆ. ಇನ್ನೊಮ್ಮೆ ಪ್ರಯತ್ನ ಪಡುವ ಮೊದಲು ಚಿರತೆ ಎಲ್ಲಿದೆಯೆಂದು ನೋಡೋಣವೆಂದು ತ್ವರಿತ ವಾಗಿ ವಾರೆಗಣ್ಣಿನಿಂದ ಕೆಳಗೆ ನೋಡಿದರೆ ಎರಡು ಹಸಿರು ಸುಂದರ ಕಣ್ಣುಗಳು ನನ್ನನ್ನೇ ನೋಡುತ್ತಿವೆ. ಇದ್ದಬದ್ದ ಶಕ್ತಿಯನ್ನೆಲ್ಲಾ ಬಿಟ್ಟು ನೆಗೆಯಲು ಪ್ರಯತ್ನಿಸಿದೆ. ಸಮಯ ಮೀರಿ ಹೋಗಿತ್ತು. ನನ್ನ ಬಲ ನಿತಂಬಕ್ಕೆ ಒಟ್ಟಿಗೆ ನಾಲ್ಕು ಬಹು ದೊಡ್ಡ ದಬ್ಬಳಗಳನ್ನು ಚುಚ್ಚಿ ಕೆಳಗೆ ಎಳೆದಂತಾಯಿತು. ದಬ್ಬಳಗಳನ್ನು ತೆಗೆದು ಮತ್ತೆ ಚುಚ್ಚಿದ ಅನುಭವ. ಆದರೆ ಈ ಸಲ ಬಹಳ ಬಲವಾದ ಶಕ್ತಿ ಕೆಳಕ್ಕೆ ಎಳೆದ ಭಾವನೆ. ನನಗೆ ಗೊತ್ತಿಲ್ಲದೇ ಗೇಟನ್ನು ಕೈಯಿಂದ ಬಿಟ್ಟಿದ್ದೆ. ಚಿರತೆಯ ಮೇಲೆ ಬಿದ್ದವನು ಒಂದು ಬಾರಿ ಉರುಳಿದೆ. ತನ್ನ ಮೈಮೇಲೆ 72 ಕೆಜಿ ಬಿದ್ದದ್ದರಿಂದ ಬಹುಶಃ ಚಿರತೆಗೇ ಗಾಬರಿಯಾಗಿರಬೇಕು. ಬಿದ್ದ ಮೇಲೆ ಏಳಲೇಬೇಕಲ್ಲ. ಅರ್ಧ ಎದ್ದು ಕುತ್ತಿಗೆ ತಿರುಗಿಸಿ ಹಿಂದೆ ತಿರುಗಿ ನೋಡಿದರೆ ಚಿರತೆಯಾಗಲೇ ಕಾಂಪೌಂಡ್ ನೆಗೆಯುವ ಯೋಜನೆಯಲ್ಲಿ ಅದರ ಎತ್ತರವನ್ನು ಅವಲೋಕಿಸುತ್ತಿದೆ. ಅದಕ್ಕೂ ಕಾಂಪೌಂಡ್ ಮಧ್ಯೆ ಕೆಲ ಬಾಸ್ಕೆಟ್‌ಬಾಲ್ ಮತ್ತು ನಾಲ್ಕು ಪ್ಲಾಸ್ಟಿಕ್ ಕುರ್ಚಿ ಇದ್ದುದರಿಂದ ಸ್ವಲ್ಪ ತಡವಾಯಿತು. ತಕ್ಷಣ ಹೊಳೆಯಿತು, ಕಾಂಪೌಂಡ್ ಆಚೆ ಹತ್ತಾರು ಮಕ್ಕಳು, ಇನ್ನಿತರ ಜನರಿದ್ದಾರೆಂದು. ಸಹಾಯಕ್ಕೆ ಆಚೀಚೆ ನೋಡಿದೆ. ಪಶುವೈದ್ಯ ಅರುಣ್ ಆಗಲೇ ಅರಿವಳಿಕೆ ಗನ್ ಹಿಡಿದು ಚೈನ್‌ಲಿಂಕ್ ಮೆಶ್ ಅನ್ನು ರಕ್ಷಣಾ ಗೋಡೆಯನ್ನಾಗಿ ಮಾಡಿಕೊಂಡು ಚಿರತೆಯತ್ತ ಓಡಿ ಬರುತ್ತಿದ್ದರು. “ಅರುಣ್ ಮಕ್ಕಳಿದ್ದಾರೆ, ಚಿರತೆ ಆಚೆ ಹೋದರೆ ಕಷ್ಟ. ಅರಿವಳಿಕೆ ಮದ್ದು ಹಾರಿಸಿ’ ಎನ್ನುತ್ತಾ ಎದ್ದು ನಿಂತ ನಾನು ಚಿರತೆಯನ್ನೇ ನೋಡುತ್ತಾ ಹಿಂದೆ ಹೋಗುತ್ತಿದ್ದೆ. ಮೂರು ಹೆಜ್ಜೆ ಹಿಂದೆ ಹೋದಾಗ ತಿಳಿಯಿತು ಚೈನ್ ಲಿಂಕ್ ಮೆಶ್‌ಗೆ ಗೇಟ್ ಇದೆಯೆಂದು, ಗೇಟ್ ಹಾಕಲು ಬಾಗಿಲಿಗೆ ಕೈ ಹಾಕಿದರೆ ಕೈಗೆ ಸಿಕ್ಕಲೇ ಇಲ್ಲ. ಪ್ರಾಣಿಯಿಂದ ನಮ್ಮ ದೃಷ್ಟಿ ತೆಗೆದರೆ ಅದು ಎಲ್ಲಿದೆಯೆಂದು ತಿಳಿಯುವುದಿಲ್ಲ. ಆಗ ಅದು ಹಿಂದಿನಿಂದ ಬಂದು ಮೈಮೇಲೆ ಬಿದ್ದರೆ ಕುತ್ತಿಗೆ ಹಿಡಿಯಬಹುದೆಂದು ಹಿಂದೆ ಹಿಂದೆ ನೋಡುತ್ತಾ ನಡೆಯುತ್ತಿದ್ದೆ.
Advertisement
ಆ ಸಮಯದಲ್ಲಿ “ಟಪ್’ ಎಂದು ಶಬ್ದವಾಯಿತು. ಅರುಣರ ಅರಿವಳಿಕೆಯ ಪಿಚಕಾರಿಯಂತಿದ್ದ ಕೆಂಪು ಬಾಲ ಹೊಂದಿದ್ದ ಸಿರಿಂಜ್ ಚಿರತೆಯ ಎಡ ತೊಡೆಯನ್ನು ಸೇರಿತ್ತು. ಗೋಡೆ ಹಾರುವ ಯೋಜನೆಯಲ್ಲಿದ್ದ ಚಿರತೆಗೆ ಯಾವುದೋ ಬಲವಾದ ಹುಳ ಕಚ್ಚಿರುವ ಅನುಭವವಾಗಿರಬೇಕು ಹಿಂದಿರುಗಿ ಅರುಣ್ ಕಡೆ ಹೋಯಿತು. ಮೆಶ್ ಅಡ್ಡ ಇದ್ದುದರಿಂದ ಅವರನ್ನು ಬಿಟ್ಟು ನನ್ನತ್ತ ಗಮನ ಹಾಕಿತು…(ಮುಂದುವರಿಯುತ್ತದೆ) ಚಿರತೆಯ ದಾಳಿಯನ್ನು ನೋಡಲು ಈ ಲಿಂಕ್ ಟೈಪ್ ಮಾಡಿ: //bit.ly/2FvKPIh