Advertisement

ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿ

12:54 AM Nov 06, 2019 | mahesh |

ಇತ್ತೀಚೆಗೆ ಕೆಲವೊಂದು ವಿದ್ಯಾರ್ಥಿಗಳಲ್ಲಿ ಹಿಂಜರಿಕೆಯ ಮನೋಭಾವ ಅಧಿಕವಾಗಿ ಕಾಣಬಹುದು. ಇದೊಂದು ಮೂಲ ಸಮಸ್ಯೆಯಾಗಿ ಪರಿಣಮಿಸಿದೆ. ಓದು, ಬರೆಹ ಮತ್ತು ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಮುಂದೆ ಇದ್ದರೂ ಕೂಡ ನೈಜ ಜೀವನದಲ್ಲಿ ಅಥವಾ ಯಾವುದೋ ವೇದಿಕೆಯ ಮೇಲೆ ಹೋಗಿ ಒಂದಷ್ಟು ಮಾತನಾಡಿ ಎಂದರೆ ಅಂಜುತ್ತಾರೆ. ಅದೊಂದು ಘೋರ ಶಿಕ್ಷೆ ಎಂಬಂತೆ ವರ್ತಿಸುತ್ತಾರೆ. ಜುಗುಪ್ಸೆಗೆ ಒಳಗಾಗುತ್ತಾರೆ. ಈ ಸಮಸ್ಯೆಗಳು ಇಂದು ಬಹುತೇಕ ವಿದ್ಯಾರ್ಥಿಗಳಲ್ಲಿ ಕಾಣಬಹುದು. ಈ ವಿಚಾರದಲ್ಲಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸೋಲುತ್ತಾರೆ. ಇದರ ನಿವಾರಣೆಗೆ ಹೆತ್ತವರು, ಶಿಕ್ಷಕರು ಹಲವು ರೀತಿಯಲ್ಲಿ ಪ್ರಯತ್ನಿಸುತಿರುವುದು ಗಮನಾರ್ಹ ಸಂಗತಿ. ಭಯ, ಹಿಂಜರಿಕೆಯನ್ನು ಹೋಗಲಾಡಿಸಬೇಕಾದರೆ ಕೆಲವು ಮಾರ್ಗಗಳು ಅನುಸರಿಸುವುದು ಒಳಿತು.

Advertisement

ಸಕರಾತ್ಮಕ ಚಿಂತನೆ
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮೊದಲು ರೂಢಿಸಿಕೊಳ್ಳಬೇಕಾದ ಅಂಶ ಎಂದರೆ ಸಕಾರಾತ್ಮಕ ಚಿಂತನೆ. ಇದು ಕೂಡ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಲು ಕಾರಣವಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ಚಿಂತನೆಗಳನ್ನು ರೂಢಿಸಿಕೊಂಡಾಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲನ್ನು ಸರಾಗವಾಗಿ ಹತ್ತಬಹುದು. ಆತ್ಮವಿಶ್ವಾಸ ಅಥವಾ ಆತ್ಮಸ್ಥೈರ್ಯದಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಸರಾಗವಾಗಿ ಎದುರಿಸಬಲ್ಲರು. ವಿದ್ಯಾರ್ಥಿ ಜೀವನದ ಅನಂತರ ಭವಿಷ್ಯದ ಬಗ್ಗೆ ಮುನ್ನೋಟ ಹರಿಸಲು ಇದು ಸಹಾಯಕವಾಗುತ್ತದೆ.

ಬೇರೆಯವರೊಂದಿಗೆ ಬೆರೆಯಿರಿ
ಇತ್ತೀಚಿನ ವಿದ್ಯಾರ್ಥಿಗಳ ಕೊರತೆಯನ್ನು ಹೇಳುವುದಾದರೆ, ವಿದ್ಯಾರ್ಥಿಗಳು ಯಾರೊಂದಿಗೂ ಬೆರೆಯುವುದಿಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಹೀಗಾದರೆ ಹೇಗೆ, ನಮ್ಮಲ್ಲಿ ಆತ್ಮಸ್ಥೈರ್ಯ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ನಿಟ್ಟಿನಲ್ಲಿ ಹೇಳುವುದಾದರೆ, ನಾವು ನಮ್ಮ ಸ್ನೇಹಿತ, ನೆರೆ-ಹೊರೆಯವರು, ಶಿಕ್ಷಕರು, ಸಂಬಂಧಿಕರೊಂದಿಗೆ ಆದಷ್ಟು ಬೆರೆಯಬೇಕು. ಅವರೊಂದಿಗಿನ ಸಂವಹನ, ಅನುಭವ ಮತ್ತು ಸಲಹೆಗಳನ್ನು ಆಲಿಸಿದಾಗ ನಮ್ಮಲ್ಲೊಂದು ಹೊಸ ಪ್ರಶ್ನೆ ಉದ್ಭವಿಸುತ್ತದೆ. ಇದರಿಂದ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಮ್ಮಲ್ಲಿ ಮೂಡುತ್ತದೆ.

ಕೀಳರಿಮೆ ಬಿಟ್ಟು ಬಿಡಿ
ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಕುಂದಲು ಪ್ರಮುಖವಾದ ಕಾರಣವೆಂದರೆ ಕೀಳರಿಮೆಪಟ್ಟುಕೊಳ್ಳುವುದು. ಯಾವುದೋ ಒಂದು ಕಾರ್ಯವನ್ನು ಮಾಡಬೇಕಾದರೆ ಅವರು ಅವರಿಗಿಂತ ಚೆನ್ನಾಗಿ ಮಾಡಲು ಅಸಾಧ್ಯ, ಇಲ್ಲವೇ ಅದು ನನ್ನಿಂದ ಮಾಡಲು ಅಸಾಧ್ಯ ಎಂಬ ಹಲವು ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಂಡು ಬೇರೆಯವರಷ್ಟು ನಾನು ಚೆನ್ನಾಗಿ ಮಾಡುವುದಿಲ್ಲ ಎಂಬ ಈ ಕೀಳರಿಮೆ ಮನೋಭಾವವನ್ನು ನೀವು ಮೊದಲು ಬಿಟ್ಟು ಬಿಡಬೇಕು.

- ಕವಿರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next