Advertisement

ಮೂರು ಕಾಲಘಟ್ಟಗಳ ಸಂಗಮ

10:42 AM May 27, 2018 | Team Udayavani |

ನಾಟಕವೊಂದನ್ನು ಸಿನಿಮಾ ಮಾಡುವಾಗ ಸಾಕಷ್ಟು ಸವಾಲುಗಳಿರುತ್ತದೆ. ಅದರಲ್ಲೂ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಸಿನಿಮಾ ಮಾಡೋದು ಸುಲಭದ ಕೆಲಸವಲ್ಲ. ಕಥೆಯ ಪಕ್ವತೆಯ ಜೊತೆಗೆ ಬಜೆಟ್‌ ವಿಚಾರದಲ್ಲೂ ಈ ಸಿನಿಮಾಗಳು ಸಿಂಹಪಾಲು ಬೇಡುತ್ತವೆ. ಹೀಗಿರುವಾಗಲೇ “ರಾಮಧಾನ್ಯ’ ಸಿನಿಮಾವನ್ನು ನಿರ್ದೇಶಕ ಟಿ.ಎನ್‌.ನಾಗೇಶ್‌ ತಮ್ಮ ಇತಿಮಿತಿಯಲ್ಲಿ ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

Advertisement

ಅದೇ ಕಾರಣದಿಂದ “ರಾಮಧಾನ್ಯ’ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಿನಿಮಾವಾಗಿ ನಿಮಗೆ ಇಷ್ಟವಾಗುತ್ತದೆ. ಒಂದೇ ಸಿನಿಮಾದಲ್ಲಿ ಮೂರು ಕಾಲಘಟ್ಟವನ್ನು ತೋರಿಸೋದು ಸವಾಲಿನ ಕೆಲಸ. “ರಾಮಧಾನ್ಯ’ದಲ್ಲಿ ಆ ಕೆಲಸವನ್ನು ಬಹುತೇಕ ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಕನಕದಾಸರಿಂದ ಹೇಗೆ ಪ್ರೇರೇಪಿತರಾಗುತ್ತಾನೆ ಎಂಬಲ್ಲಿಂದ ಆರಂಭವಾಗುವ ಈ ಸಿನಿಮಾದಲ್ಲಿ ದಂಡನಾಯಕರಾಗಿದ್ದ ಕನಕದಾಸರು ಪೂರ್ವಾಪರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಇಲ್ಲಿ ಸಿನಿಮಾ ಸಾಗುವ ರೀತಿಯೇ ಚೆನ್ನಾಗಿದೆ. ಸಾಮಾನ್ಯ ವ್ಯಕ್ತಿ ಕನಕದಾಸರ ಬಗ್ಗೆ ಕೇಳುತ್ತಾ, ಆ ಪಾತ್ರವಾಗುತ್ತಾ ಸಾಗುವ ಮೂಲಕ ಸಿನಿಮಾ ಪೌರಾಣಿಕ, ಐತಿಹಾಸಿ ಎಂಬ ಮಗ್ಗುಲು ಬದಲಿಸುತ್ತಾ ಸಾಗುತ್ತದೆ. ಕನಕದಾಸರ ಜನನ, ಬೆಳವಣಿಗೆ, ಘಟನೆಗಳು ಹಾಗೂ ಮುಂದಿನ ಪಯಣವೇ ಈ ಸಿನಿಮಾದ ಪ್ರಮುಖ ವಿಚಾರ. ಜೊತೆಗೆ ರಾಗಿ-ಭತ್ತದ ಜಗಳ, ಕೊನೆಗೆ ಶ್ರೀರಾಮಚಂದ್ರನ ತೀರ್ಪು, ರಾಮಧಾನ್ಯ ಎಂಬ ಹೆಸರು ಬಂದ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಚಿತ್ರದಲ್ಲಿನ ಭತ್ತ-ರಾಗಿಯ ಮೇಲು-ಕೀಳು ಸನ್ನಿವೇಶವನ್ನು ತುಂಬಾ ಚೆನ್ನಾಗಿ ಕಟ್ಟಿಕೊಡಲಾಗಿದೆ. ಮೊದಲೇ ಹೇಳಿದಂತೆ ಇಲ್ಲಿ ಮೂರು ಕಾಲಘಟ್ಟಗಳ ಸಂಗಮವಾಗಿದೆ. ಸಾಮಾಜಿಕ ಅಂಶಗಳೊಂದಿಗೆ ಆರಂಭವಾಗುವ ಸಿನಿಮಾ ಮುಂದೆ ಪೌರಾಣಿಕ, ಐತಿಹಾಸಿಕವಾಗಿ ಸಾಗುತ್ತದೆ. ಇಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಿರಬೇಕಾದ ಅದ್ಧೂರಿತನವಿಲ್ಲ ಅನ್ನೋದು ಬಿಟ್ಟರೆ ಕಥೆಯಾಗಿ, ಇಡೀ ಸಿನಿಮಾದ ವೇಗ ಚೆನ್ನಾಗಿದೆ. ಪ್ರತಿ ಸನ್ನಿವೇಶ, ಪಾತ್ರಗಳಿಗೂ ಮಹತ್ವ ಕೊಡಲಾಗಿದೆ. ಚಿತ್ರದಲ್ಲಿನ ಯುದ್ಧದ ಸನ್ನಿವೇಶವನ್ನು ಚೆನ್ನಾಗಿ ಚಿತ್ರೀಕರಿಸಲಾಗಿದೆ.

ಉಳಿದಂತೆ ಸೀಮಿತ ಪಾತ್ರಗಳಲ್ಲಿ ಸಾಗುವ ಸಿನಿಮಾದಲ್ಲಿ ಕಥೆ, ಸನ್ನಿವೇಶಗಳೇ ಹೈಲೈಟ್‌. ದಂಡನಾಯಕನಾಗಿ ಕನಕದಾಸರು ಹೇಗೆ ಶೂರರು, ವೀರರು ಆಗಿದ್ದರು ಎಂಬ ಅಂಶ ಇಡೀ ಸಿನಿಮಾದ ಹೈಲೈಟ್‌. ಇಡೀ ಊರನ್ನು ಕಾಯುವ ದಂಡನಾಯಕ ಕೊನೆಗೆ ಕೃಷ್ಣನ ದಾಸನಾಗಿದ್ದು ಹೇಗೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಮೂರು ಕಾಲಘಟ್ಟಗಳಲ್ಲಿ ಯಶಸ್‌ ಕಾಣಿಸಿಕೊಂಡಿದ್ದಾರೆ.

Advertisement

ಹಾಗೆ ನೋಡಿದರೆ ಯಶಸ್‌ಗೆ ಇದು ಒಳ್ಳೆಯ ಅವಕಾಶ ಎನ್ನಬಹುದು. ಅದಕ್ಕೆ ತಕ್ಕಂತೆ ಯಶಸ್‌ ಕೂಡಾ ಮೂರು ಕಾಲಘಟ್ಟಗಳ ಪಾತ್ರಗಳಿಗೂ ಹೊಂದಿಕೆಯಾಗಿದ್ದಾರೆ. ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಅವರ ಹಾವ-ಭಾವ ಬದಲಾಗಿದೆ. ಇನ್ನು, ನಾಯಕಿ ನಿಮಿಕಾ ರತ್ನಾಕರ್‌ ಮೊದಲ ಸಿನಿಮಾದಲ್ಲೇ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಚಿತ್ರದ ಪ್ರತಿ ಕಲಾವಿದರು ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಚಿತ್ರ: ರಾಮಧಾನ್ಯ
ನಿರ್ಮಾಣ: ದಶಮುಖ ವೆಂಚರ್
ನಿರ್ದೇಶನ: ಟಿ.ಎನ್‌.ನಾಗೇಶ್‌
ತಾರಾಗಣ: ಯಶಸ್‌ ಸೂರ್ಯ, ನಿಮಿಕಾ ರತ್ನಾಕರ್‌, ಮಂಡ್ಯ ರಮೇಶ್‌, ರಮೇಶ್‌ ಪಂಡಿತ್‌, ಸುರೇಶ್‌ ರೈ ಮತ್ತಿತರರು

* ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next