Advertisement
ದೇಹವನ್ನು ಆತ್ಮ ಹೊರುವುದೇ ? ಆತ್ಮವನ್ನು ದೇಹ ಹೊರುವುದೇ ?
ಒಮ್ಮೆ ನನ್ನ ಗುರುಗಳಾದ ಪ್ರೊ| ಕೋದಂಡರಾಮ್ ಅವರ ಕಾರು ಕೆಟ್ಟಿತು. ಅದನ್ನು ರಸ್ತೆ ಬದಿ ನಿಲ್ಲಿಸಿ ಆಸ್ಪತ್ರೆಗೆ ನಡೆದು ಬರುತ್ತಿದ್ದರು. ನಾನು ಕೇಳಿದಾಗ “ನಾನು ಆ ಕಾರನ್ನು ಹೊತ್ತುಕೊಂಡು ಬರುವುದೋ?’ ಎಂದರು. ಆಗ ಅರ್ಥವಾಯಿತು: “ಶರೀರವನ್ನು ಹೊರುವ ಕೆಲಸ ಆತ್ಮದ್ದಲ್ಲ, ಆತ್ಮವನ್ನು ಹೊರುವ ಕೆಲಸ ಶರೀರದ್ದು’. ಅದಕ್ಕೇನು ಮಾಡಬೇಕೆಂದರೆ ಹಳತನ್ನು ಬಿಟ್ಟು ಹೊಸತನ್ನು ಪಡೆಯಬೇಕು.
ನಾವೆಲ್ಲಿಯಾದರೂ ಪರಮಾತ್ಮ ಸತ್ತಿದ್ದಾನೆಂದು ಹೇಳುತ್ತೇವಾ? ಭಗವದ್ಗೀತೆಯಲ್ಲಿ ಹೇಳಿದಂತೆ ಆತ್ಮ- ಪರಮಾತ್ಮ ಮಾತ್ರ ಶಾಶ್ವತ. ಉಳಿದೆಲ್ಲವೂ ಋಣಗಳು, ಜವಾಬ್ದಾರಿಗಳು. ಇವುಗಳನ್ನು (ಕೌಟುಂಬಿಕವೇ ಇರಲಿ, ವೃತ್ತಿವಿಷಯಗಳೇ ಇರಲಿ) ಚಾಚೂತಪ್ಪದೆ ಮಾಡಬೇಕು. ಎಲ್ಲ ಕೆಲಸದಲ್ಲಿಯೂ ಗುಣಮಟ್ಟವಿರಬೇಕು. ನಾವು ಅಭಿಮಾನವನ್ನು ಬಿಟ್ಟರೆ ಮಾನಭೀತಿಯಿಂದ ಬಚಾವಾಗಲು ಸಾಧ್ಯ. “100 ರೂ. ಟಿಕೆಟ್ ಪಡೆದು ನನ್ನ ರೈಲು ಇನ್ನೂ ಬಂದಿಲ್ಲ’ ಎನ್ನುತ್ತೇವೆ. ಅಹಂ- ಇಗೋ ಇಲ್ಲಿವೆ. ಶರೀರ ಮತ್ತು ಪ್ರಾಪಂಚಿಕ ವಸ್ತುಗಳಿಂದ ಸಾಧ್ಯವಾದಷ್ಟು ದೂರ ಉಳಿದರೆ ಮಾನ ಭೀತಿ ತಂತಾನೆ ಹೋಗುತ್ತದೆ. ಬದುಕೆಂದರೆ ಚಲನಶೀಲತೆ. ಯಾವಾಗಲೂ ನಡೆಯುತ್ತ ಇರಬೇಕು. ನಡಿಗೆ ಸ್ಥೈರ್ಯದಿಂದಿರಬೇಕು. ಸ್ಥೈರ್ಯ ತುಂಬಿಸಲು ಒಂದು ವಾಕಿಂಗ್‌ಸ್ಟಿಕ್ ಬೇಕು. ಮಣಿಪಾಲ ಸಂಸ್ಥೆಗಳ ಸಂಸ್ಥಾಪಕರಾದ ಡಾ|ಟಿಎಂಎ ಪೈಯವರು “60ರ ಬಳಿಕ ಒಂದು ವಾಕಿಂಗ್‌ಸ್ಟಿಕ್ ಬೇಕು’ ಎನ್ನುತ್ತಿದ್ದರು. ಶಯನವೆಂದರೆ ನಿದ್ರೆ. ಎಂಟು ಗಂಟೆ ನಿದ್ರೆ (ಬೇಗ ಮಲಗಿ ಬೇಗ ಏಳಬೇಕು) ಅಗತ್ಯ. ಮುಂದಿನದು ಭೋಜನ.
Related Articles
Advertisement
ವ್ಯಾಪಾರಿ ನೀತಿ: ಮಂಗಳೂರು ಹಳೆ ಬಂದರಿನಲ್ಲಿ ವ್ಯಾಪಾರಿಯಾಗಿದ್ದ ಡಾ| ಲಕ್ಷ್ಮಣ ಪ್ರಭುಗಳ ಅಜ್ಜ ದಾಸ ಪ್ರಭು ಅವರು ಸರಿಯಾಗಿ ತೂಕ ಮಾಡಿಕೊಟ್ಟರೂ, ತುಸು ಹೆಚ್ಚಿಗೆ ಸಾಮಾನುಗಳನ್ನು ಕೊಟ್ಟು ಗ್ರಾಹಕರಿಗೆ ಕೈಮುಗಿದು “ನಮ್ಮ ಸಂಸ್ಥೆಗೆ ನೀವು ಆಶೀರ್ವದಿಸಬೇಕು’ ಎಂದು ವಿನೀತರಾಗಿ ಹೇಳುತ್ತಿದ್ದರು.ಉಭಯ ಮಹಾಕುಟುಂಬಗಳು: ಪ್ರಭುಗಳ ಕುಟುಂಬದ ಮೂಲ ಊರು ಗುರುಪುರ. ಆರು ತಲೆಮಾರಿನ ಹಿಂದೆ ಮಂಗಳೂರಿಗೆ ವ್ಯಾಪಾರಕ್ಕೋಸ್ಕರ ಆಗಮಿಸಿ ನೆಲೆ ನಿಂತರು. ಇವರ ಗುಣಗಳನ್ನು ಕಂಡು ಗುರುಪುರದ ಜಂಗಮ ಮಠದವರು “ಗುಣಿ’ ಎಂಬ ಬಿರುದು ನೀಡಿದರು. ಬಳಿಕ “ಗುರುಪುರ ಗುಣಿ’ (ಜಿ.ಜಿ.) ಹೆಸರು ಮುಂದುವರಿ ಯಿತು. ಆ ಕಾಲದಲ್ಲಿ ಕೊಡುತ್ತಿದ್ದ ಬಿರುದುಗಳಿಗೆ ಎಂತಹ ಮಹತ್ವವಿತ್ತು ಎನ್ನುವುದು ತಿಳಿದು ಬರುತ್ತದೆ. ಈ ಕುಟುಂಬದ ಜಿ.ಜಿ.ಶ್ರೀನಿವಾಸ ಪ್ರಭು ಅವರಿಗೆ ಮಣಿಪಾಲದ ಫಿಲಾಂತ್ರಫಿಸ್ಟ್ ಆಗಿದ್ದ ತೋನ್ಸೆ ಉಪೇಂದ್ರ ಪೈಯವರ ಪುತ್ರಿ ವರದಾ ಅವರನ್ನು ಕೊಟ್ಟು ವಿವಾಹ ಮಾಡಲಾಯಿತು. ಇವೆರಡು ದಿಗ್ಗಜ ವಂಶದಲ್ಲಿ ಜನಿಸಿದ ಲಕ್ಷ್ಮಣ ಪ್ರಭು ಜೀವನದಲ್ಲೇ ಫಿಲಾಸಫಿ ಕಂಡರು. ಸಹಕುಟುಂಬದ ಪಾಠ: ಡಾ| ಪ್ರಭುಗಳ ಅಜ್ಜಿ ರಾಜೀವಿ ಮೂಲತಃ ಹಳೆಯಂಗಡಿ ಕಾಮತ್ ಕುಟುಂಬದವರು. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಜಿಜಿ ಕುಟುಂಬಕ್ಕೆ ಬಂದರು. ಮನೆಯಲ್ಲಿಯೇ ಅ, ಆ, ಇ, ಈ ಕಲಿತು ಕೊಂಕಣಿ, ಕನ್ನಡದಲ್ಲಿ ಪಾಂಡಿತ್ಯವನ್ನು ಸಂಪಾದಿಸಿ ದರು. ಇವರೇ ಕೂಡುಕುಟುಂಬದ ರೂವಾರಿಗಳು. ಕೂಡುಕುಟುಂಬದ ಒಳಿತೆಂದರೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಹೀಗೆ ವಿಶಾಲ ಸಂಖ್ಯೆಯ ಸದಸ್ಯರು ಜತೆಗೂಡಿ ಸುಖ ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಲಕ್ಷ್ಮಣ ಪ್ರಭುಗಳ ತಂದೆ ಚಿಕ್ಕಪ್ರಾಯದಲ್ಲಿ ನಿಧನರಾದಾಗ, ಚಿಕ್ಕಪ್ಪನೇ ಕಲಿಸಿ ದೊಡ್ಡವರನ್ನಾಗಿ ಮಾಡಿದರು. ಸ್ವೀಟ್ ಮೆಮರಿ ಹೇಗೆ ಸಾಧ್ಯ?: ಕಾಶೀ ಮಠ ಸಂಸ್ಥಾನದ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿಯವರು ಮುಂಬಯಿ ವಾಲ್ಕೇಶ್ವರ ಮಠದಲ್ಲಿದ್ದಾಗ ಚಿಕಿತ್ಸೆ ಮಾಡಿಸಲೆಂದು ಡಾ| ಪ್ರಭು ಅವರು ಹೋಗಿದ್ದರು. ಅಲ್ಲಿ “ಸ್ವೀಟ್ ಮೆಮರೀಸ್’ ಎಂಬ ಆಲ್ಬಂ ಇತ್ತು. ಆಗ ಸ್ವಾಮೀಜಿಯವರು ಆಡಿದ ಮಾತು ಮನಸ್ಸಿನಲ್ಲಿ ಅಚ್ಚೊತ್ತಿತು. ಅದೆಂದರೆ: “ಸ್ವೀಟ್ ಮೆಮ ರೀಸ್ ಹೇಗೆ ಬರುತ್ತದೆ? ಅದನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು’. ಗುರುಗಳಿಗೆ ತರ್ಪಣ: ಸಿಂಗಲ್ ಡಿಜಿಟ್ ಮಾರ್ಕ್ ಗಳಿಸುತ್ತಿದ್ದ ಪ್ರಭು ಅವರನ್ನು ತಿದ್ದಿದವರು ನಿವೃತ್ತ ಇಂಗ್ಲೀಷ್ ಶಿಕ್ಷಕ ಬಿ.ಕೇಶವ ಬಾಳಿಗಾ. “ಉದ್ಯಮೇನ ಹಿ ಸಿದ್ಧಂತಿ ಕಾರ್ಯಾಣಿ ನ ಮನೋರಥೈಃ| ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ||’ ಎಂದು ಮೊತ್ತ ಮೊದಲು ಬಾಳಿಗಾ ಹೇಳಿದಾಗ ಪ್ರಭು ಕಕ್ಕಾಬಿಕ್ಕಿಯಾದರು. “ವನದ ರಾಜ ಸಿಂಹನಾದರೂ ಸುಮ್ಮನೆ ಕುಳಿತರೆ ಅದರ ಬಾಯಿಗೆ ಯಾವುದೇ ಪ್ರಾಣಿಗಳು ಬಂದು ಬೀಳುವುದಿಲ್ಲ. ಬೇಟೆಯಾಡಲೇಬೇಕು. ಶ್ರಮ ಪಡದೆ ವಿದ್ಯೆ ಬಾರದು ‘- ಈ ಮಾತು ಉತ್ತಮ ಸಂಸ್ಕಾರವನ್ನೇ ಬೀಜಾಂಕುರಿಸಿತು. ದೊಡ್ಡವರಾಗಿ ಬಾಳಿಗರಿಗೆ ಕೃತಜ್ಞತೆ ಸಲ್ಲಿಸಿದಾಗ ಬಾಳಿಗರು ಹೇಳಿದ ಮಾತಿದು: “ನಾವು ತುಂಬಾ ಬೀಜಗಳನ್ನು ಬಿತ್ತುತ್ತೇವೆ. ಯಾವುದೋ ಒಂದು ಸಣ್ಣ ಬೀಜ ದೊಡ್ಡ ವೃಕ್ಷವಾಗಿ ಹಣ್ಣುಗಳನ್ನು ಕೊಡುವಾಗ ಆಗುವ ಸಂತೋಷ ಹೇಳತೀರದು’. ತನ್ನನ್ನು ಬೆಳೆಸಿದ ಕೇಶವ ಬಾಳಿಗಾರಿಗೂ ಡಾ|ಪ್ರಭು ತರ್ಪಣ ಕೊಡುತ್ತಿದ್ದರು. ಹಣೆಬರೆಹ ಅಳಿಸುವ ಇರೇಸರ್ ಇದೆಯೆ?: ಸ್ಕೂಲ್ ಬುಕ್ ಕಂಪೆನಿಯ ಭಂಡಾರ್‌ಮಾಮ್ (ಕಮಲಾಕ್ಷ ಭಂಡಾರಿ) ಅವರಿಂದ ಇರೇಸರ್ ಪಡೆದಾಗ ಭಂಡಾರಿಯವರು ಹೇಳಿದ “ಹಣೆಬರೆಹವನ್ನು ಅಳಿಸಲು ಸಾಧ್ಯವೆ?’ ಎಂಬ ಮಾತು ಬಹಳ ಸತ್ಯ. ಕರ್ಮಯೋಗಿಗಳು: ಚಪ್ಪಲಿ ಹೊಲಿದು ಕೊಡುವ ಮುಸ್ಲಿಂ ವ್ಯಕ್ತಿಯೊಬ್ಬರಲ್ಲಿ ಪಾದರಕ್ಷೆ ಕೊಟ್ಟು ಹೊಲಿದು ಕೊಡಲು ಹೇಳಿದರೆ “ಎರಡು ದಿನ ಹಾಕಿಕೊಂಡು ನೋಡಿ. ನಿಮಗೆ ತೃಪ್ತಿಯಾದರೆ ಹಣ ತಂದು ಕೊಡಿ’ ಎಂದು ಹೇಳುತ್ತಿದ್ದರು. ಮುರಕಲ್ಲು ಕೆತ್ತಿ ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದ ಕೇಶವ ಮೇಸಿŒಯವರು “ನಾನು ಸ್ವಲ್ಪ ಕೆತ್ತುತ್ತೇನೆ. ಬೇಸರ ಮಾಡಿಕೊಳ್ಳಬೇಡ’ ಎಂದು ಕಲ್ಲುಗಳಿಗೆ ಹೇಳುತ್ತಿದ್ದರು. ಇವರಿಬ್ಬರಲ್ಲಿ ಕರ್ಮಯೋಗವನ್ನು ಕಂಡವರು ಡಾ| ಪ್ರಭು. ಪ್ರಾಚೀನತೆಯನ್ನು ಹಾಗೇ ಉಳಿಸಿಕೊಳ್ಳಿ: ಪ್ರಾಚೀನ ಕಟ್ಟಡ ರಚನೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಎಷ್ಟೇ ಖರ್ಚು ಮಾಡಿದರೂ ಹೊಸ ಕಟ್ಟಡಗಳಿಗೆ ಪುರಾತನ ರಚನೆಗಳ ಮಹತ್ವ ಬರುವುದಿಲ್ಲ. ಮದುವೆಯಲ್ಲಿ ಢಂಬಾಚಾರಗಳು ಹೆಚ್ಚುತ್ತಿವೆ. ಪಾರಂಪರಿಕ ತಿನಿಸುಗಳು ಮಾಯವಾಗಿ ಅಲಂಕಾರಿಕ ತಿನಿಸುಗಳು ಬರುತ್ತಿವೆ. ಹಿಂದೆ ಮನೆಯ ಹಿರಿಯರು ಮದುಮಕ್ಕಳಲ್ಲಿ ಲಕ್ಷ್ಮೀನಾರಾಯಣರ ಸನ್ನಿಧಾನವನ್ನು ಆವಾಹಿಸಿಕೊಂಡು ಅಕ್ಷತೆಯನ್ನು ಹಾಕಿ ಆಶೀರ್ವಾದ ಮಾಡುತ್ತಿದ್ದರೆ ಈಗ ಆ ಯಾವ ಚಿಂತನೆ ಇಲ್ಲದೆ ಎಲ್ಲರೂ ಅಕ್ಷತೆ ಹಾಕಿ ಕೈದಿಗಳಂತೆ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾರೆ. ರೋಗಿಗಳಲ್ಲ, ಚಿಕಿತ್ಸಾರ್ಥಿಗಳು: “ರೋಗಿಗಳನ್ನು ಚಿಕಿತ್ಸಾರ್ಥಿಗಳು ಎಂದು ಕರೆಯುತ್ತೇನೆ. ಅವರಲ್ಲಿಯೇ ದೇವರನ್ನು ಕಾಣುತ್ತೇನೆ’ ಎಂದು ಡಾ| ಪ್ರಭು ಹೇಳುತ್ತಿದ್ದರು. ದುಡ್ಡಿನ ಮುಖ ನೋಡದೆ ಎಷ್ಟೋ ಬಡವರಿಗೆ ನೆರವಾಗುತ್ತಿದ್ದರು. ನಗೆಗಳಲ್ಲಿ ತ್ತೈವಿಧ್ಯ: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನಿರ್ವಂಚನೆಯ ಮುಗುಳು ನಗೆ ಇರುತ್ತದೆ. ರಾಕ್ಷಸವೇಷಧಾರಿಗಳ ಅಟ್ಟಹಾಸದ ನಗು ಕರುಳ ನಗೆ. ಕೊರಳ ನಗು ಅಂದರೆ ಎಲ್ಲದಕ್ಕೂ “ಸಾರ್, ಸಾರ್’ (ನಮಸ್ಕಾರ ಸಾರ್, ಹೇಗಿದ್ದೀರಿ ಸಾರ್…) ಎಂಬ ನಗು. ಇದು ಒಳಗೂ ಬರುವುದಿಲ್ಲ, ಹೊರಗೂ ಹೋಗುವುದಿಲ್ಲ, ಕೊರಳಿನಲ್ಲಿಯೇ ಇರುತ್ತದೆ. ಕೃತಕ ನಗು ಇದು. ಡಾ| ಲಕ್ಷ್ಮಣ ಪ್ರಭುಗಳ ಕವನಗಳು
ಸತ್ಯದ ದಾರಿ
ಸತ್ಯದ ದಾರಿಯನ್ನು ಉಪಕ್ರಮಿಸುವುದು ಕಷ್ಟ
ಅನುಭವಿಸಬೇಕು ದಾರಿಯುದ್ದಕ್ಕೂ ಸಂಕಷ್ಟ
ಛಲ ಬಿಡದೆ ಸಾಗಲು ಕರಗುವುದೆಲ್ಲ ಕಷ್ಟ
ಗುರಿ ಮುಟ್ಟಲು ಕೊನೆಗೆ ಸಿದ್ಧಿಸುವುದು ಅಭೀಷ್ಟ
***
ಸಂತೃಪ್ತಿ
ಬೇಡ ಅಯೋಗ್ಯರೊಡನೆ ಒಡನಾಟ
ಬೇಡ ಅತಿಯಾದ ನಿರೀಕ್ಷೆಯ ಓಟ
ಸಾಕು ದೊರಕಿದರೆ ಸದಾ ಸಜ್ಜನರ ಕೂಟ
ತೃಪ್ತಿಯಿಂದಿರಲು ದಿನವೂ ಔತಣದೂಟ
***
ನಾಯಿವೇಷ
ಗೆದ್ದರೆ ಅಟ್ಟಕ್ಕೇರಿಸುವುದು ಜನರು ಹೊಗಳಿ
ಸೋತರೆ ಜರೆದು ಹಿಯಾಳಿಸುವರು ಉಗುಳಿ
ನಾಯಿ ವೇಷ ಹಾಕಿಕೊಂಡು ಬದುಕಬೇಕಾದರೆ ಬಾಳಿ
ದಿನ ಕಳೆಯ ಬೇಕು ಸಂದರ್ಭಕ್ಕೆ ಸರಿಯಾಗಿ ಬೊಗಳಿ