Advertisement

ಮತಕ್ಕಾಗಿ ಮೋದಿಯಿಂದ ಸಂಘರ್ಷ ಕಥೆ ಸೃಷ್ಠಿ: ಸಿಎಂ

01:08 AM Apr 06, 2019 | Sriram |

ಕೊಪ್ಪ: ಈ ಬಾರಿಯ ಲೋಕಸಭಾ ಚುನಾವಣೆ ಹೊತ್ತಿಗೆ ಪಾಕಿಸ್ತಾನ ಜತೆ ಸಂಘರ್ಷ ಎಂಬ ಕಥೆ ಸೃಷ್ಟಿಸಿ ಜನರ ಹಾದಿ ತಪ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ ಮಾಡುತ್ತಾರೆ ಎನ್ನುವುದು ತಮಗೆ ಎರಡು ವರ್ಷಗಳ ಮೊದಲೇ ತಿಳಿದಿತ್ತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ನಿವೃತ್ತ ಸೇನಾಧಿಕಾರಿಯೊಬ್ಬರು ತಮ್ಮ ಜತೆ ಚರ್ಚಿಸುತ್ತಾ ತಿಳಿಸಿದ್ದರು. ಅವರು ಹೇಳಿದಂತೇ ಆಗಿದೆ. ಸೈನಿಕರ ದಾಳಿಯನ್ನೇರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನಿ ಬೇಕು ಎಂದು ಬಿಂಬಿಸಲಾಗುತ್ತಿದೆ. ಹಾಗಾದರೆ, ಈ ಹಿಂದೆ 70 ವರ್ಷ ದೇಶದಲ್ಲಿ ಅಭದ್ರತೆಯ ಆಡಳಿತವಿತ್ತಾ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿಯಂತಹ ಸ್ವಾರ್ಥಿ ಮತ್ತು ಹೃದಯಹೀನ ರಾಜಕಾರಣಿ ಮತ್ತೆಲ್ಲೂ ಕಾಣಲು ಸಿಗುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಅವರು ಏನನ್ನಾದರೂ ಮಾಡಬಲ್ಲರು ಎಂದು ಟೀಕಿಸಿದರು. ಕನ್ನಡಿಗ, ದೇವೇಗೌಡರು ಪ್ರಧಾನಿಯಾಗಿ ದೇಶದಲ್ಲಿ 10 ತಿಂಗಳು ಕೆಲಸ ಮಾಡಿದ್ದರು. ಆಗ ಎಲ್ಲಾದ್ರೂ ಬಾಂಬ್‌ ದಾಳಿ, ಅಮಾಯಕರ ಬಲಿ ನಡೆದಿತ್ತೇ ಎಂದು ಪ್ರಶ್ನಿಸಿದ ಸಿಎಂ, ಈಗ ಕೆಲವರು ಅವರ ಆಸ್ತಿತ್ವ ಸ್ವಾರ್ಥಕ್ಕಾಗಿ ದೇಶದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುಮಲತಾ ಹೇಳಿಕೆಗೆ ಆಕ್ಷೇಪ
ಬೆಂಗಳೂರು: ಸಾಲಮನ್ನಾ ಕುರಿತು ಸುಮಲತಾ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಣಕಾಸು ಇಲಾಖೆಯ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಸುಮಲತಾ ಆವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.

Advertisement

ಸುಮಲತಾ ಹೇಳಿಕೆಗೆ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನೂ ಕೂಡ ಅವರೊಂದಿಗೆ ಚರ್ಚಿಸಿದ್ದು ತಾವು ಆ ರೀತಿ ಹೇಳಿಲ್ಲ ಎಂದು ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯು ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ, ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳ 15.58 ಲಕ್ಷ ರೈತರಿಗೆ 6223.48 ಕೋಟಿ ರೂ.ಸಾಲ ಮೊತ್ತ ಮಂಜೂರು ಮಾಡಲಾಗಿದೆ. 2019 20 ರ ಬಜೆಟ್‌ನಲ್ಲಿ 12,000 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ಕೃಷಿಕರ ಕುರಿತು ನನ್ನ ಬದ್ಧತೆಯ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಬಜೆಟ್‌ಗಳಲ್ಲಿಯೂ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು
ಘೋಷಿಸಲಾಗಿದೆ. ಮೈತ್ರಿ ಸರ್ಕಾರವು ದೂರದೃಷ್ಟಿ ಕಾರ್ಯಕ್ರಮಗಳ ಮೂಲಕ ರೈತ ಪರ ಎಂಬುದನ್ನು ಸಾಬೀತುಪಡಿಸಲಾಗಿದೆ. ರೈತರಿಗೆ ಬಿತ್ತನೆಯಿಂದ ಎಲ್ಲ ಹಂತದಲ್ಲೂ ನೆರವು ನೀಡಲು ನಮ್ಮ ಸರ್ಕಾರ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 46 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಒದಗಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next