ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದರೂ, ಸಂವಿಧಾನ ಹಾಗೂ ಕಾನೂನಿನಲ್ಲಿರುವ ಲೋಪಗಳು ಹಾಗೂ ವಿಧಾನಸಭೆಯ ನಿಯಮಗಳಲ್ಲಿ ಅಡಕವಾಗಿರುವ ಮಾಹಿತಿ ಬಹಿರಂಗಗೊಳಿಸುವ ಪ್ರಯತ್ನ ನಡೆಯಿತು. ಅಲ್ಲದೇ ಪ‌್ರಜಾಪ್ರಭುತ್ವದ ದೇವಾಲಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರದ ವ್ಯಾಪ್ತಿಯ ಬಗ್ಗೆ ಗಂಭೀರ ಚರ್ಚೆ ನಡೆಯುವ ಮೂಲಕ ಕಾನೂನು ಜ್ಞಾನ ವಿಸ್ತರಣೆಯ ಕಸರತ್ತು ನಡೆದಿರುವುದು ವಿಶೇಷವಾಗಿತ್ತು.
ವಿಶ್ವಾಸ ಮತ ಯಾಚನೆ ಮಾಡಿದ ಮುಖ್ಯಮಂತ್ರಿ ತಮ್ಮ ಸರ್ಕಾರ ಕಳೆದ ಒಂದು ವರ್ಷ ಎರಡು ತಿಂಗಳಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಹೇಳುತ್ತ, 15 ಶಾಸಕರು ಸದನಕ್ಕೆ ಗೈರು ಹಾಜರಾಗಿರುವ ವಿಷಯ ಪ್ರಸ್ತಾಪಿಸಿದರು. ಅದೇ ವಿಷಯಕ್ಕೆ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಂವಿಧಾನದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ ಜಾರಿಗೆ ಬಂದಿತು ಎನ್ನುವುದನ್ನು ವಿವರವಾಗಿ ವಿಶ್ಲೇಷಣೆ ಮಾಡಿದರು.
ಪಕ್ಷಾಂತರ ನಿಷೇಧ ಕಾಯ್ದೆ ವಿವರಣೆ: ಸಿದ್ದರಾಮಯ್ಯ ತಮ್ಮ ಕ್ರಿಯಾ ಲೋಪದಲ್ಲಿ ಹರಿಯಾಣದ ಸಂಸದ ಗಯಾಲಾಲ್ ಎನ್ನುವವರು ಒಂದೇ ದಿನ ಮೂರು ಬಾರಿ ಪಕ್ಷಾಂತರ ಮಾಡಿರುವ ವಿಷಯ ಪ್ರಸ್ತಾಪಿಸುವ ಮೂಲಕ, ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ ಜಾರಿಗೆ ಬಂತು ಎನ್ನುವುದನ್ನು ಸದನದ ಗಮನಕ್ಕೆ ತಂದರು. 1985 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಿ, ರಾಷ್ಟ್ರಪತಿಗಳ ಜಂಟಿ ಅಧಿವೇಶನದ ಭಾಷಣದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಪ್ರಸ್ತಾಪ ಮಾಡಿದರು. ಆ ಸಂದರ್ಭದಲ್ಲಿ ಸಂಸದರಾಗಿದ್ದ ಪ್ರೊ. ಮಧು ದಂಡವತೆ ಅವರು ಮಹಾತ್ಮಾ ಗಾಂಧೀಜಿಯವರಿಗೆ ನಿಜವಾದ ಗೌರವ ಸಲ್ಲಿಸಬೇಕೆಂದರೆ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂದು ಹೇಳಿರುವುದರ ಬಗ್ಗೆ ಬೆಳಕು ಚೆಲ್ಲಿದರು. ಈ ಸಂದರ್ಭದಲ್ಲಿ ಕ್ರಿಯಾ ಲೋಪ ಎತ್ತಲು ಇರುವ ಅವಕಾಶ ಹಾಗೂ ಅದರ ಮೇಲೆ ಚರ್ಚೆ ಮಾಡಲು ಅವಕಾಶ ಇಲ್ಲದಿರುವ ಬಗ್ಗೆಯೇ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ನಡುವೆ ಗಂಭೀರ ಚರ್ಚೆ ನಡೆಯಿತು.
ನಿರ್ದಿಷ್ಠ ವಿಷಯದ ಮೇಲೆ ಕ್ರಿಯಾ ಲೋಪ ಎತ್ತಿ ಅದನ್ನು ಸದನದ ಗಮನಕ್ಕೆ ತರುವುದಷ್ಟನ್ನೇ ಮಾಡ ಬೇಕು ಎನ್ನುವುದು ಪ್ರತಿಪಕ್ಷದ ವಾದ. ಕ್ರಿಯಾಲೋಪಕ್ಕೆ ಏನು ಎಂದು ಹೇಳಲು ಪೂರಕ ಮಾಹಿತಿ ನೀಡು ವುದರಲ್ಲಿ ತಪ್ಪಿಲ್ಲ ಎನ್ನುವುದು ಆಡಳಿತ ಪಕ್ಷದವರ ವಾದ. ಒಬ್ಬರು ಕ್ರಿಯಾ ಲೋಪ ಎತ್ತಿದ ಮೇಲೆ ಮತ್ತೂಬ್ಬರು ಕ್ರಿಯಾ ಲೋಪ ಎತ್ತಲು ಅವಕಾಶವಿಲ್ಲ. ಅಲ್ಲದೇ ಕ್ರಿಯಾ ಲೋಪದ ಮೇಲೆ ಚರ್ಚೆಗೆ ಅವಕಾಶ ವಿಲ್ಲ ಎನ್ನುವುದು ವಿಧಾನಸಭೆಯ ನಿಯಮಾವಳಿಗೆ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆಯಿತು.
ಸ್ಪೀಕರ್- ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಚರ್ಚೆ: ರಾಜ್ಯಪಾಲರು ಸ್ಪೀಕರ್‌ಗೆ ಒಂದೇ ದಿನದಲ್ಲಿ ವಿಶ್ವಾಸ ಮತ ಯಾಚನೆ ಮಾಡಿಸುವಂತೆ ಸೂಚನೆ ನೀಡುವ ಪತ್ರ ಬರೆದಿದ್ದು ಕೂಡ, ರಾಜ್ಯಪಾಲರ ಅಧಿಕಾರ ಹಾಗೂ ಸ್ಪೀಕರ್‌ಗೆ ಅವರು ನಿರ್ದೇಶನ ಮಾಡಲು ಸಾಧ್ಯವಿದೆಯೇ ಎನ್ನುವ ವಿಷಯವೂ ಚರ್ಚೆಗೆ ಗ್ರಾಸವಾಯಿತು. ರಾಜ್ಯಪಾಲರು ಸಂವಿಧಾನದ ನಿಯಮ 175 ರ ಪ್ರಕಾರ ವಿಧೇಯಕರಗಳನ್ನು ಜಾರಿಗೊಳಿಸುವ ವಿಷಯದಲ್ಲಿ ವಿಳಂಬವಾಗುತ್ತಿದ್ದರೆ, ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಸ್ಪೀಕರ್‌ಗೆ ಸೂಚನೆ ನೀಡುವ ಅಧಿಕಾರವಿದೆ ವಿನಃ ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆಯನ್ನು ಮುಕ್ತಾಯಗೊಳಿಸುವ ಅಧಿಕಾರ ಇಲ್ಲ ಎನ್ನುವ ವಿಷಯವನ್ನೂ ಆಡಳಿತ ಪಕ್ಷದ ಶಾಸಕರು ಬಹಿರಂಗ ಪಡಿಸಿದರು. ಸಾಂವಿಧಾನಿಕ ಹುದ್ದೆಯಲ್ಲಿರುವ ಸ್ಪೀಕರ್ ಹಾಗೂ ರಾಜ್ಯಪಾಲರು ಸಮಾನ ಅಧಿಕಾರ ಹೊಂದಿರುತ್ತಾರೆ ಎನ್ನುವ ಮಾಹಿತಿ ಬೆಳಕಿಗೆ ಬರುವಂತಾಯಿತು.
ಆದರೆ, ಸ್ಪೀಕರ್‌ಗೆ ರಾಜ್ಯಪಾಲರು ಸೂಚನೆ ನೀಡಲು ಆಗುವುದಿಲ್ಲ ಎನ್ನುವ ವಿಷಯ ಬಹಿರಂಗವಾಗುವುದರ ಜೊತೆಗೆ ಅದೇ ಸಂವಿಧಾನದ ನಿಯಮ 175(2) ಪ್ರಕಾರ ಮುಖ್ಯಮಂತ್ರಿಗೆ ರಾಜ್ಯಪಾಲರು ನಿರ್ದೇಶನ ನೀಡುವ ಅಧಿಕಾರ ಇದೆ ಎನ್ನುವ ಮಾಹಿತಿಯೂ ಬೆಳಕಿಗೆ ಬಂತು.
ಶಾಸಕಾಂಗ, ನ್ಯಾಯಾಂಗದ ನಡುವಿನ ಸಂಘರ್ಷದ ಚರ್ಚೆ
ಗುರುವಾರದ ಕಲಾಪದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಧಿಕಾರದ ವ್ಯಾಪ್ತಿಯ ಬಗ್ಗೆ ವಿಸ್ತೃತ ಚರ್ಚೆಗೆ ಗ್ರಾಸವಾಯಿತು. ರಾಜೀನಾಮೆ ಸಲ್ಲಿಸಿರುವ 15 ಶಾಸಕರು ಕಡ್ಡಾಯ ಹಾಜರಿಗೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಒಂದು ಪಕ್ಷದ ಶಾಸಕಾಂಗ ಪಕ್ಷದ ನಾಯಕನ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ಮಾಡಿದಂತಾಗಿದೆ. ಇದು ಶಾಸಕಾಂಗದ ಮೇಲೆ ನ್ಯಾಯಾಂಗ ನಿಯಂತ್ರಣ ಹೇರಿದಂತಾಗುತ್ತದೆ ಎನ್ನುವ ವಾದ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ವಿಪ್ ಜಾರಿ ಮಾಡುವ ಶಾಸಕಾಂಗ ಪಕ್ಷದ ನಾಯಕನ ಅಧಿಕಾರವನ್ನು ಸುಪ್ರೀಂ ಕೋರ್ಟ್ ಕಸಿದುಕೊಂಡಂತಾಗುತ್ತದೆ ಎನ್ನುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಪ್ರಶ್ನಿಸಲು ಶಾಸಕಾಂಗಕ್ಕೆ ಅವಕಾಶವಿದೆ ಎನ್ನುವ ವಿಷಯ ಬೆಳಕಿಗೆ ಬರುವಂತಾಯಿತು. ಅಲ್ಲದೇ ಸ್ಪೀಕರ್‌ಗೆ ಸಮಯ ನೀಡಿರುವ ಸುಪ್ರೀಂ ಕೋರ್ಟ್ ವಿಪ್‌ನ ಸಿಂಧುತ್ವದ ಬಗ್ಗೆ ಏನೂ ಹೇಳದಿರುವುದೂ ಕೂಡ ಸ್ಪೀಕರ್ ಅವರ ಕಾರ್ಯ ವೈಖರಿಯ ಮೇಲೆ ಎರಡು ರೀತಿಯ ಪರಿಣಾಮ ಬೀರುವಂತೆ ಮಾಡಿರುವುದು ಸದಸ್ಯರ ಚರ್ಚೆಯಿಂದ ತಿಳಿಯುವಂತಾಯಿತು.