Advertisement

ಗಣಪತಿ ವಿಸರ್ಜನೆ ವೇಳೆ ಘರ್ಷಣೆ

05:55 PM Sep 04, 2017 | |

ಶಿವಮೊಗ್ಗ: ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ನಗರದ ಎರಡು ಬಡಾವಣೆಗಳಲ್ಲಿ ಶನಿವಾರ ರಾತ್ರಿ ಸಣ್ಣ ಘರ್ಷಣೆ ಮತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.

Advertisement

ಇಲ್ಲಿನ ಗೋಪಾಳ ಶ್ರೀರಾಮ ನಗರ ಬಡಾವಣೆ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಉದಯ ರಾವ್‌ ಎಂಬಾತನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಗೊಂಡಿತ್ತು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ 20 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ರೌಡಿ ಪಟ್ಟಿಯಲ್ಲಿರುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸೀಗೆಹಟ್ಟಿಯ ಶ್ರೀರಾಮ ಸೇವಾ ಸಮಿತಿಯ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮಿನ ಯುವಕರ ನಡುವೆ ಗೊಂದಲ ಏರ್ಪಟ್ಟಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಭಾರೀ ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್‌ ಸಿಬಂದಿಗಳನ್ನು ಕರೆಸಲಾಗಿದೆ. ಈ ಪ್ರದೇಶಗಳಲ್ಲಿ ಭಾನುವಾರ ಸಂಜೆ ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿದರು.

ಸ್ಥಳದಲ್ಲಿ ಎಸ್ಪಿ ಅಭಿನವ ಖರೆ ಖುದ್ದು ಬಂದೋಬಸ್ತ್ ಕಾರ್ಯ ಕೈಗೊಂಡರು. ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಅವರಿಂದ ಮಾಹಿತಿ ಪಡೆದರು. ಭಾನುವಾರ ಸೀಗೆಹಟ್ಟಿ ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಕೂಡಿದ್ದ ಯುವಕರನ್ನು ಚುದುರಿಸಿದ್ದಾರೆ. ಶನಿವಾರ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ಮಾಜಿ ಶಾಸಕ ಸಂಗಮೇಶ್‌ ಮತ್ತು ಹಾಲಿ ಶಾಸಕ ಎಂ.ಜೆ. ಅಪ್ಪಾಜಿ ಬೆಂಬಲಿಗರ ನಡುವೆ ವಾಗ್ಧಾದ, ತಳ್ಳಾಟ ನಡೆದು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ವದಂತಿಗಳನ್ನು ನಂಬದಿರಿ
ಶಿವಮೊಗ್ಗ: ಕೆಲವು ಚಿಕ್ಕಪುಟ್ಟ ಘಟನೆಗಳ ಹೊರತಾಗಿ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್‌.ಪಿ. ಅಭಿನವ್‌ ಖರೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವರು ಅನಗತ್ಯ ಸುದ್ದಿಗಳನ್ನು ಹರಡುತ್ತಿರುವುದರಿಂದ ಗೊಂದಲ ಏರ್ಪಡುತ್ತಿದೆ. ವಾಸ್ತವವಾಗಿ ಯಾವುದೇ ಪರಿಸ್ಥಿತಿ ಏರ್ಪಟ್ಟಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಮಂದಿಯನ್ನು ಬಂಧಿಸಲಾಗಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಬಲವನ್ನು ಕರೆಸಿಕೊಳ್ಳಲಾಗಿದೆ. ಯಾವುದೇ ಗಲಾಟೆಗೆ ಅವಕಾಶ ಕೊಡದಂತೆ ಕ್ರಮ ಕೈಗೊಳ್ಳಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬಿಗು ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಾರ್ವಜನಿಕರು ಯಾವುದೇ ಸುದ್ದಿಗಳಿಗೆ ಕಿವಿಗೊಡಬಾರದು. ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next