Advertisement

ಸಂಘರ್ಷಕ್ಕೆಡೆ ಮಾಡಿದ ಸಾಮಾನ್ಯ ಮೀಸಲಾತಿ

08:26 PM Dec 16, 2020 | Adarsha |

ರಾಯಚೂರು: ಗ್ರಾಪಂ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು, ಹಳ್ಳಿಗಳಲ್ಲಿ ಸಂಘರ್ಷಕ್ಕೆಡೆ ಮಾಡಿದೆ. ಆಯಾ ಜಾತಿಗೆ ಮೀಸಲಾದ ಸ್ಥಾನಗಳಲ್ಲಿ ಹೊಂದಾಣಿಕೆ ಕಂಡು ಬಂದರೆ ಸಾಮಾನ್ಯ ವಿಭಾಗದಲ್ಲಿ ಮಾತ್ರ ಜಾತಿಗೊಬ್ಬರಂತೆ ಕಣಕ್ಕಿಳಿದಿದ್ದಾರೆ.

Advertisement

ಹಳ್ಳಿ ಫೈಟ್‌ನಲ್ಲಿ ಅಲಿಖೀತ ಕಾನೂನುಗಳೇ ಹೆಚ್ಚು ಪರಿಣಾಮಕಾರಿ ಎನ್ನುವುದು ಈ ಬಾರಿ ಸಾಬೀತಾಗುತ್ತಿದೆ. ಸಾಕಷ್ಟು ಕಡೆ ಅವಿರೋಧ ಆಯ್ಕೆ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನೂ ಗ್ರಾಪಂ ಚುನಾವಣೆಗಳು ಪಕ್ಷಾಧಾರಿತವಲ್ಲದಿದ್ದರೂ ರಾಜಕೀಯ ಪಕ್ಷಗಳ ಬೆಂಬಲಿತರು ಎಂಬ ಹಣೆಪಟ್ಟಿ ಕಳಚಲು ಯಾರು ಸಿದ್ಧರಿಲ್ಲ. ಕೆಲವೆಡೆ ಜಾತಿ ಆಧಾರದಡಿ ಮೀಸಲಾತಿ ನೀಡಲಾಗಿದೆ. ಅವರವರ ಜಾತಿಯವರಲ್ಲಿ ಹೊಂದಾಣಿಕೆ ಮಾಡಿಕೊಂಡು ಹೊಸಬರಿಗೆ ಅವಕಾಶ ನೀಡುವುದೋ ಇಲ್ಲ, ಹಣ ಪಡೆದೋ ಅವಿರೋಧ ಆಯ್ಕೆ ನಡೆಯುತ್ತಿದೆ. ಆದರೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಳಗಳಲ್ಲಿ ಮಾತ್ರ ಭಾರೀ ಪೈಪೋಟಿ ಇದ್ದು, ಜಾತಿ ಬೆಂಬಲ ಇಲ್ಲದವರೂ ಕಣಕ್ಕಿಳಿದಿದ್ದಾರೆ. ಇದು ಸಂಘರ್ಷಕ್ಕೆಡೆ ಮಾಡಿದಂತಾಗಿದೆ.

ಮನೆ-ಮನೆಗೆ ಭೇಟಿ: ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ಮನೆ-ಮನೆಗೆ ಭೇಟಿ ನೀಡುವ ಮೂಲಕ ಮತಯಾಚಿಸುತ್ತಿದ್ದಾರೆ. ಹಿಂದೆ ಮಾಡಿದ ಸಣ್ಣ ಪುಣ್ಣ ಸಹಾಯ, ಸೇವೆಗಳನ್ನೇ ಸ್ಮರಿಸಿ ಮತದಾರರ ಮನವೊಲಿಸುವ ಯತ್ನದಲ್ಲಿದ್ದಾರೆ. ಒಂದೊಂದು ಸ್ಥಾನಕ್ಕೆ ಐದಾರು ನೂರು ಮತಗಳಿದ್ದರೆ ಹೆಚ್ಚು. ಬಂಧುಗಳು, ಸ್ವ ಜಾತಿಯವರ ಜತೆ ಇತರೆ ಜನರನ್ನು ಒಲಿಸಿಕೊಂಡರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಅಭ್ಯರ್ಥಿಗಳದ್ದು. ಹೀಗಾಗಿ ಬೆಳಿಗ್ಗೆ ಸಂಜೆ ಒಬ್ಬೊಬ್ಬರೇ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ:ಆನೆಕಾಲು ರೋಗದಿಂದ ಮುಕ್ತಿ ಗೆ ಸಹಕಾರ ಅಗತ್ಯ

ಹಳೆಯದನ್ನೆಲ್ಲ ಮೆಲುಕು ಹಾಕುತ್ತಿದ್ದಾರೆ. ನೆರೆ ಹೊರೆಯವರೊಂದಿಗಿದ್ದ ಸಣ್ಣ ಪುಟ್ಟ ವೈಷಮ್ಯಗಳನ್ನು ಬದಿಗೊತ್ತಿ ರಾಜಿ ಸೂತ್ರ ಪಾಲಿಸುತ್ತಿದ್ದಾರೆ. ಆದಾಗ್ಯೂ ಕೆಲವೆಡೆ ಕಣದಲ್ಲಿ ಪೈಪೋಟಿ ಏರ್ಪಟ್ಟಿರುವುದು ಗುಂಪುಗಾರಿಕೆಗೆ ಅನುವು ಮಾಡಿಕೊಟ್ಟಿದೆ.

Advertisement

ಡಿಜಿಟಲ್‌ ಪ್ರಚಾರ: ಡಿಜಿಟಲ್‌ ಇಂಡಿಯಾದ ಪರಿಕಲ್ಪನೆ ಗ್ರಾಪಂ ಚುನಾವಣೆಯಲ್ಲಿ ಮಾತ್ರ ಸರಿಯಾಗಿ ಬಳಕೆಯಾಗುತ್ತಿದೆ. ಕಣದಲ್ಲಿ ಅನಕ್ಷರಸ್ಥರು ಇದ್ದರೂ ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಚಾರಕ್ಕೇನು ಬರ ಕಾಣಿಸುತ್ತಿಲ್ಲ. ಈಗಾಗಲೇ ಚುನಾವಣಾಧಿ ಕಾರಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿದ್ದು, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶೇರ್‌ ಮಾಡಿಕೊಂಡು ಮತ ಯಾಚಿಸುತ್ತಿದ್ದಾರೆ. ಗ್ರಾಮಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ಗಳಲ್ಲಿ, ಜಾತಿಗಳ ಗ್ರೂಪ್‌ಗ್ಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬೇರೆ ಊರುಗಳಲ್ಲಿರುವವರಿಗೆ ಫೋನ್‌ ಮಾಡಿ ಯೋಗ ಕ್ಷೇಮ ವಿಚಾರಿಸುವುದು. ಬಂದು ಮತ ಚಲಾಯಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next