Advertisement

ಪರ್ಸಿನ್‌-ಆಳಸಮುದ್ರ ಮೀನುಗಾರರ ನಡುವೆ ಘರ್ಷಣೆ

01:00 AM Mar 06, 2019 | Team Udayavani |

ಮಲ್ಪೆ: ಬೆಳಕು ಮೀನುಗಾರಿಕೆ ವಿರೋಧಿಸಿ ಮಂಗಳವಾರ ಮಲ್ಪೆ ಬಂದರಿನಲ್ಲಿ ನಡೆದ ಪ್ರತಿಭಟನೆ ಆಳಸಮುದ್ರ ಮತ್ತು ಪರ್ಸಿನ್‌ ಮೀನುಗಾರರ ಮಧ್ಯೆ ಘರ್ಷಣೆಗೆ ಕಾರಣವಾಯಿತು.

Advertisement

ಕಾನೂನನ್ನು ಉಲ್ಲಂಘಿಸಿ ಪರ್ಸೀನ್‌ ಮೀನುಗಾರರು ಬೆಳಕು ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್‌ ಮೀನುಗಾರರು ಬಂದರಿನ ಮುಖ್ಯ ದ್ವಾರದ ಬಳಿಯ ಉಪನಿರ್ದೇಶಕರ ಕಚೇರಿಯ ಮುಂದೆ ಸೇರಿ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪರ್ಸೀನ್‌ ಮೀನುಗಾರರು ಬಂದು ಮೀನಿನ ಲಾರಿ ಹೋಗಲು ಅವಕಾಶ ನೀಡುವಂತೆ ಪ್ರತಿಭಟನಕಾರರ ಜತೆ ವಾಗ್ವಾದಕ್ಕೆ ಇಳಿದರು. ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿಕೊಂಡದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪೊಲೀಸರ ವಿರುದ್ಧ ಆಕ್ರೋಶ
ಆಳಸಮುದ್ರ ಮೀನುಗಾರರ ಮೇಲೆ ಹಲ್ಲೆ ನಡೆದರೂ ಪೊಲೀಸರು ಯಾವ ಕ್ರಮ ಕೈಗೊಂಡಿಲ್ಲ. ಅಕ್ರಮ ಮೀನುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದಿರುವುದರಿಂದ ಇಷ್ಟೆಲ್ಲ ಸಮಸ್ಯೆ ಆಗಿದೆ ಎಂದು ಆಳಸಮುದ್ರ ಮೀನುಗಾರರು ಪೊಲೀಸರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಮೀನುಗಾರರೋ ರ್ವರು ನೀವು ಈ ಹಿಂದೆ ಹೇಳಿದಂತೆ ನಡೆದುಕೊಂಡಿಲ್ಲ. ಯಾವ ಕೆಲಸವನ್ನು ಮಾಡಿಲ್ಲವೆಂದು ಡಿವೈಎಸ್ಪಿ ಜೈಶಂಕರ್‌ ಮೇಲೆ ಅಕ್ರೋಶ ವ್ಯಕ್ತಪಡಿಸಿದರು. ಕೋಪಗೊಂಡ ಡಿವೈಎಸ್ಪಿ ಅನುಮತಿ ಇಲ್ಲದೆ ಪ್ರತಿಭಟಿಸುವ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾದೀತು ಎಂದರು.

ಬೆದರಿಕೆ: ದೂರು
ಮೀನುಗಾರಿಕೆ ನಿರ್ದೇಶಕರಿಗೆ ಮನವಿ ಸಲ್ಲಿಸಲು ಕಚೇರಿ ಮುಂದೆ ಜಮಾಯಿಸಿದ ಆಳಸಮದ್ರ ಮೀನುಗಾರರಿಗೆ ಪೊಲೀಸ್‌ ಅಧಿಕಾರಿಗಳ ಸಮ್ಮುಖ ನವೀನ್‌ ಕೋಟ್ಯಾನ್‌, ರಾಜೇಶ್‌ ಮೈಂದನ್‌, ಸಂತೋಷ್‌ ಸಾಲ್ಯಾನ್‌, ವಾಸುದೇವ ಖಾರ್ವಿ ಇತರರೊಂದಿಗೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಮೇಲಿನ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದು ಡೀಪ್‌ಸೀ ಟ್ರಾಲ್‌ಬೋಟ್‌ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ಮಲ್ಪೆ  ಠಾಣೆಗೆ ದೂರು ನೀಡಿದ್ದಾರೆ.

ಪ್ರತಿ ದೂರು
ವಿನಾಕಾರಣ ಅವಾಚ್ಯವಾಗಿ ನಿಂದನೆ ಮಾಡಲಾಗಿದೆ ಎಂದು ಪರ್ಸಿನ್‌ ಮೀನುಗಾರರ ಸಂಘದ ನವೀನ್‌ ಕೋಟ್ಯಾನ್‌ ಆವರು ಆಳಸಮುದ್ರ ಮೀನುಗಾರರ ವಿರುದ್ಧ ದೂರು ನೀಡಿದ್ದಾರೆ.

Advertisement

ಆಳಸಮುದ್ರ ಮೀನುಗಾರಿಕೆ ಸ್ಥಗಿತ
ಆಳಸಮುದ್ರ ಮೀನುಗಾರರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಬೆಳಕು ಮೀನುಗಾರಿಕೆ ಸಂಪೂರ್ಣ ನಿಲ್ಲಬೇಕು. ಅಲ್ಲಿಯ ವರೆಗೆ ಮಲ್ಪೆ ಬಂದರಿನ ಎಲ್ಲ ಆಳಸಮುದ್ರ ಬೋಟ್‌ಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿವೆ ಎಂದು ಡೀಪ್‌ಸೀ ಟ್ರಾಲ್‌ಬೋಟ್‌ ಮಾಲಕರ ಮತ್ತು ತಾಂಡೇಲರ ಸಂಘ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next