Advertisement

ವಿಶ್ವಾಸದಿಂದ ಎಲ್ಲರೂ ಸಾಗೋಣ ವಿಕಾಸದೆಡೆಗೆ!

01:54 AM May 30, 2019 | Team Udayavani |

ಸರಕಾರಕ್ಕಿರುವುದು ಒಂದೇ ಧರ್ಮಭಾರತವೇ ಮೊದಲು. ಪವಿತ್ರ ಗ್ರಂಥವೊಂದಿದ್ದರೆ ಅದು ಸಂವಿಧಾನ ಮಾತ್ರ. ಭಕ್ತಿಯೂ ಭಾರತ ಭಕ್ತಿಯೇ ಆಗಿರಲಿ. ಜನಶಕ್ತಿಯೇ ಸರಕಾರದ ಶಕ್ತಿಯೂ ಆಗಿದೆ. 125 ಕೋಟಿ ಜನರ ಅಭಿವೃದ್ಧಿಯೇ ಸರಕಾರ ಮಾಡಬೇಕಾದ ಪುಣ್ಯಕಾರ್ಯ. ಎಲ್ಲರ ವಿಕಾಸಕ್ಕಾಗಿ ಎಲ್ಲರೂ ಒಗ್ಗೂಡಿ ಸಾಗೋಣ.

Advertisement

– ಇದು (ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌) ನರೇಂದ್ರ ಮೋದಿ ಅವರು 2014ರಲ್ಲಿ ದೇಶಕ್ಕೆ ಕೊಟ್ಟ ಕರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಅಬ್‌ ಕಿ ಬಾರ್‌ ಮೋದಿ ಸರಕಾರ್‌’ ಮಾದರಿಯಲ್ಲಿ ಇದು ಬಿಜೆಪಿ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು. ಈ ಬಾರಿ ಅದಕ್ಕೆ ಮತ್ತೆರಡು ಶಬ್ದಗಳನ್ನು (ಸಬ್‌ ಕಾ ವಿಶ್ವಾಸ್‌) ಸೇರಿಸಿದರು. ಈ ವರೆಗೆ ಕೇವಲ ಮತ ಬ್ಯಾಂಕ್‌ ಆಗಿದ್ದ ಬಡವರು ಮತ್ತು ಅಲ್ಪಸಂಖ್ಯಾಕರನ್ನೂ ಒಳಗೊಂಡು ನವ ಭಾರತದತ್ತ ಸಾಗುವ ಉದ್ದೇಶವನ್ನೂ ಸ್ಪಷ್ಟಪಡಿಸಿದರು. ರಾಜಕಾರಣದಲ್ಲಿ ಇದೊಂದು ಪ್ರಬುದ್ಧ ಯೋಚನೆ. ಏಕತೆ ಹಾಗೂ ಒಳಗೊಳ್ಳುವಿಕೆಗೆ ಅವರು ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ. ‘ಇದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ದೇಶದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸರಕಾರ ತೋರುವ ಬದ್ಧತೆ. ಇದುವೇ ರಾಷ್ಟ್ರಧರ್ಮ’ ಎಂದು ಮುಖ್ತಾರ್‌ ಅಬ್ಟಾಸ್‌ ನಖ್ವೀ ಅವರೂ ಬಣ್ಣಿಸಿದರು.

ಜನ ತಮ್ಮೊಳಗೆ ಕಚ್ಚಾಡುವುದನ್ನು ಬಿಟ್ಟು ಬಡತನದ ವಿರುದ್ಧ ಹೋರಾಡಬೇಕು. ಅಭಿವೃದ್ಧಿಗೆ ಇರುವುದು ಇದೊಂದೇ ಮಾರ್ಗ ಎಂದರು ಮೋದಿ. ಮೇಕ್‌ ಇನ್‌ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಗಳು ಜಾರಿಯಾದವು.

ಬಡತನದ ಘೋರ ಪರಿಣಾಮಗಳಾದ ಅಪೌಷ್ಟಿಕತೆ, ಅನಾರೋಗ್ಯ ಹಾಗೂ ಅನಕ್ಷರತೆ ಮಕ್ಕಳನ್ನೇ ಹೆಚ್ಚಾಗಿ ಕಾಡುವುದು. ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವೆಂದಿದ್ದಾರೆ ಪ್ರಧಾನಿ. ಮಕ್ಕಳು ಹಾಗೂ ತಾಯಂದಿರ ಆರೋಗ್ಯ ರಕ್ಷಣೆಗಾಗಿ ಮಿಷನ್‌ ಇಂದ್ರಧನುಷ್‌ ಜಾರಿ ಮಾಡಿದರು.

‘ನಾನು’ ಎಂಬುದು ‘ನಾವು’ ಎಂಬುದಾಗಿ ಬದಲಾದಾಗ ವ್ಯಕ್ತಿ ತನ್ನ ಬದಲಿಗೆ ಸಮಾಜದ ಕುರಿತಾಗಿ ಯೋಚಿಸಲು ಆರಂಭಿಸುತ್ತಾನೆ. ಸಮಾಜದ ವಿಸ್ತರಿತ ರೂಪವೇ ದೇಶ. ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ನಮ್ಮಲ್ಲಿ ಉಂಟಾದರೆ ಅದುವೇ ಅಭಿವೃದ್ಧಿಯ ಹೆಜ್ಜೆ.

Advertisement

‘ಸಬ್‌ ಕಾ ಸಾಥ್‌…’ ಕೇವಲ ಘೋಷಣೆ ಯಾಗಿ ಉಳಿದಿಲ್ಲ. ಜತೆಗಿದ್ದೇವೆ, ಪರಸ್ಪರ ವಿಶ್ವಾಸವಿದೆ, ವಿಕಾಸ ಆಗೇ ಆಗುತ್ತದೆ ಎಂಬ ದೃಢ ನಂಬಿಕೆಯೊಂದಿಗೆ ಮೋದಿ ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಯಾರೋ ಒಬ್ಬರನ್ನು ಹೊರಗಿಟ್ಟರೂ ಏಕತೆ ಹಾಗೂ ಸಮಗ್ರತೆಗೆ ಅರ್ಥವಿಲ್ಲ. 2024ರಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಮೋದಿ ಈಗಲೇ ಬುನಾದಿ ಹಾಕಿದ್ದಾರೆ. ಈ ಬಾರಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಮಾತುಗಳನ್ನು ಹೆಚ್ಚು ಬದ್ಧತೆಯಿಂದ ಆಡಿದ್ದಾರೆ. ವಿಜಯದ ಬಳಿಕ ಮಾಡಿದ ಮೊದಲ ಟ್ವೀಟ್‌ನಲ್ಲಿ ಸಮಗ್ರ ಭಾರತದ ಪ್ರಸ್ತಾವ ಮಾಡಿದ್ದಾರೆ. ಬಿಜೆಪಿಗೇ ಬಹುಮತವಿದ್ದರೂ ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಮುಂದೆ ಸಾಗುವ ಮಾತುಗಳನ್ನಾಡಿದ್ದಾರೆ. ದ್ವೇಷ, ಕೋಮುಗಲಭೆ ಇತ್ಯಾದಿಗಳಿಂದ ದೂರವಿರುವಂತೆ ತಮ್ಮ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. ಆಡ್ವಾಣಿ, ಮುರಳೀ ಮನೋಹರ ಜೋಶಿ ಅವರಂಥ ಹಿರಿಯ ನಾಯಕರಿಗೂ ಗೌರವ ತೋರಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ವಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿ ಮೋದಿ ಕಾಣಿಸುತ್ತಿದ್ದಾರೆ.

ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌!

– ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next