ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿ, ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆತರಲು ಪ್ರಯತ್ನ ನಡೆಸುತ್ತಿರುವ ನಡುವೆಯೇ, ಚೋಕ್ಸಿಯನ್ನು ಶೀಘ್ರವೇ ಡೊಮಿನಿಕಾ ಭಾರತಕ್ಕೆ ಗಡಿಪಾರು ಮಾಡಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವೃದ್ಧೆಯ ಕಣ್ಣಿನಲ್ಲಿದ್ದ 9 ಸೆಂ. ಮೀ. ಹುಳಕ್ಕೆ ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ಮುಕ್ತಿ
ಮೂಲಗಳ ಪ್ರಕಾರ, ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಬೆಳವಣಿಗೆಯನ್ನು ಸರ್ಕಾರದ ಕಾನೂನು ತಜ್ಞರು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ಹೇಳಿದೆ. ಲಭ್ಯವಿರುವ ಅಂಕಿಅಂಶದ ಪ್ರಕಾರ, 2018ರ ಜನವರಿಯಿಂದ 2019ರ ಜುಲೈವರೆಗೆ ಬ್ರಿಟನ್ ನಿಂದ ಒಟ್ಟು 148 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಅಕ್ರಮವಾಗಿ ಬ್ರಿಟನ್ ಪ್ರವೇಶಿಸಿದ್ದರಿಂದ ಇವರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.
ಕೆರಿಬಿಯನ್ ರಾಷ್ಟ್ರ ಆ್ಯಂಟಿಗುವಾದ ಪೌರತ್ವ ಪಡೆದಿದ್ದ ಮೆಹುಲ್ ಚೋಕ್ಸಿ ಏಕಾಏಕಿ ನಾಪತ್ತೆಯಾಗಿದ್ದ. ಆದರೆ ಈತ ಡೊಮಿನಿಕಾ ದ್ವೀಪಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಬಂಧಿಸಿದ್ದರು.
2017ರಲ್ಲಿ ಚೋಕ್ಸಿ ಆ್ಯಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು, 2018ರಿಂದ ಅಲ್ಲೇ ವಾಸ್ತವ್ಯ ಹೂಡಿದ್ದ. ಆದರೆ ಡೊಮಿನಿಕಾದ ಪೌರತ್ವ ಪಡೆಯದ ಕಾರಣ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿದ್ದವು.
ಏತನ್ಮಧ್ಯೆ ಚೋಕ್ಸಿ ಪರ ವಕೀಲ ಈಗಾಗಲೇ ಡೊಮಿನಿಕಾ ಹೈಕೋರ್ಟ್ ಮೆಟ್ಟಿಲೇರಿದ್ದು, ಪೌರತ್ವ ಕಾಯ್ದೆ ಪ್ರಕಾರ ಚೋಕ್ಸಿಯನ್ನು ಆ್ಯಂಟಿಗುವಾಕ್ಕೆ ಗಡಿಪಾರು ಮಾಡಬೇಕೆ ವಿನಃ, ಭಾರತಕ್ಕಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ ಡೊಮಿನಿಕಾ ಅಧಿಕಾರಿಗಳು ಕೂಡಾ ಕಾನೂನು ಬಾಹಿರವಾಗಿ ಪ್ರವೇಶಿಸಿದ್ದಕ್ಕೆ ಕೋರ್ಟ್ ನಲ್ಲಿ ದಾವೆ ಹೂಡಿರುವ ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಗಡಿಪಾರು ಪ್ರಕ್ರಿಯೆ ವಿಳಂಬವಾಗಲಿದೆ ಎಂದು ವರದಿ ತಿಳಿಸಿದೆ.