Advertisement

ಕರ್ವಾಲು ಭೇಟಿಯಿಂದ ಆತ್ಮವಿಶ್ವಾಸ: ಶಾಸ್ತ್ರಿ

12:59 PM May 23, 2018 | Team Udayavani |

ಕರ್ವಾಲು (ಕಾರ್ಕಳ): ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಸಾನ್ನಿಧ್ಯಕ್ಕೆ ಪ್ರತೀ ವರ್ಷ ನೀಡುವ ಭೇಟಿ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದು ಭಾರತೀಯ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌, ಪ್ರಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದರು.

Advertisement

ಕರ್ವಾಲು ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಹೂವಿನ ಪೂಜೆ ಮುಂತಾದ ಧಾರ್ಮಿಕ ಸೇವೆಗಳನ್ನು ಸಲ್ಲಿಸಿದರು. ಬಳಿಕ ಮಾಧ್ಯಮ ಹಾಗೂ ಆಹ್ವಾನಿತರ ಜತೆ ಮಾತನಾಡಿ, ಕುಟುಂಬದ ಮೂಲಕ್ಕೆ ಬರುವ ಆಹ್ಲಾದಕರ ಅನುಭವವನ್ನು ನಾನು ಇಲ್ಲಿ ಪಡೆಯುತ್ತಿದ್ದೇನೆ. ಈವರೆಗೆ ಹತ್ತು ಬಾರಿ ಇಲ್ಲಿಗೆ ಬಂದಿದ್ದೇನೆ; ಇನ್ನು ಮುಂದೆಯೂ ಬರುತ್ತೇನೆ. ಕರ್ವಾಲಿನ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದರು.
ಕ್ಷೇತ್ರದ ವತಿಯಿಂದ ಜರಗಿದ ಸಮ್ಮಾನ ಕಾರ್ಯಕ್ರಮದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಮನೋಹರ ಪ್ರಸಾದ್‌ ಸ್ವಾಗತಿಸಿ, ಅಭಿನಂದನಾ ಭಾಷಣ ಗೈದರು. ರವಿ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅಪೂರ್ವ ಯಶಸ್ಸು ಗಳಿಸುತ್ತಿದ್ದು, ಮುಂದಿನ ವಿಶ್ವ ಕಪ್‌ ಜಯಿಸಲಿ ಎಂದು ಹಾರೈಸಿದರು.

ಡಾ| ಸಂತೋಷ್‌ ಕುಮಾರ್‌ ಶಾಸ್ತ್ರಿ ಮಂಗಳೂರು ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಕೆ. ಅನಂತ ಪಟ್ಟಾಭಿ ರಾವ್‌, ಆಡಳಿತ ಸಮಿತಿಯ ಅಧ್ಯಕ್ಷ ಭೋಜ ಶೆಟ್ಟಿ, ಗೌರವಾಧ್ಯಕ್ಷ ಹೆಕ್ಕಡ್ಕ ಯುವರಾಜ ನಾಯ್ಕ ಅವರು ಸಮ್ಮಾನಿಸಿದರು.

– ಯಶಸ್ಸಿನ ಉತ್ತುಂಗದಲ್ಲಿರುವ ಭಾರತೀಯ ಕ್ರಿಕೆಟ್‌ ತಂಡ ಮತ್ತಷ್ಟು ಐತಿಹಾಸಿಕ ಸಾಧನೆಗಳನ್ನು ದಾಖಲಿಸಲಿದೆ.
– ಆಲ್‌ರೌಂಡ್‌ ಸ್ವರೂಪದ ಸಂತುಲಿತ ಸಾಧನೆಯೇ ಟೀಂ ಇಂಡಿಯಾದ ಯಶಸ್ಸಿನ ಮೂಲದ್ರವ್ಯ.
– ದೇಶದಲ್ಲೀಗ ಅಪಾರ ಸಂಖ್ಯೆಯಲ್ಲಿ ಯುವ ಕ್ರಿಕೆಟ್‌ ಪ್ರತಿಭಾವಂತರಿದ್ದಾರೆ. ಅವರಲ್ಲಿ 15 ಮಂದಿಯನ್ನು ಆರಿಸುವ ಹೊಣೆ ಆಯ್ಕೆ ಮಂಡಲಿ ಯದ್ದು, ಆಯ್ಕೆಯಾದ ತಂಡವನ್ನು ನಾನು ಬಲಿಷ್ಠವಾಗಿ ರೂಪುಗೊಳಿಸುತ್ತೇನೆ.
– ಕೋಚ್‌ ಮತ್ತು ಆಟಗಾರರ ನಡುವೆ ಅಪೂರ್ವವಾದ ತಿಳಿವಳಿಕೆ ಇದೆ.
– ಸಾಧಿಸಬೇಕೆಂಬ ಬದ್ಧತೆಯಿಂದಲೇ ಯಶಸ್ಸು.

Advertisement

Udayavani is now on Telegram. Click here to join our channel and stay updated with the latest news.

Next