Advertisement

ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು

10:27 PM Jul 28, 2019 | Sriram |

ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು. ಹೌದು  ಆತ್ಮವಿಶ್ವಾಸ ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆಗ ನಾವೆಲ್ಲ ಸಾಧನೆಯಿಂದ ಹಿಂದೆ ಸರಿದುಬಿಡುತ್ತೇವೆ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು  ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಪಡಿಸುವವರನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನ ಖುಷಿಯಲ್ಲಿ ಮಿಂದೇಳುತ್ತೇವೆ.

Advertisement

ಆತ್ಮವಿಶ್ವಾಸ ಎಂಬುದು ವ್ಯಕ್ತಿಯ ಬಳಿ ಇರುವ ಅತ್ಯಮೂಲ್ಯ ಆಸ್ತಿಗಳಲ್ಲೊಂದು. ಅದನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಆತನನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ಆತ್ಮವಿಶ್ವಾಸ ವ್ಯಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು ಎನ್ನುತ್ತಾರೆ. ತನ್ನ ಗುಣ – ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು ಮತ್ತು ಸ್ವಸಾಮರ್ಥ್ಯದ ಬಗ್ಗೆ ವ್ಯಕ್ತಿಗಿರುವ ನಂಬಿಕೆಯೇ “ಆತ್ಮವಿಶ್ವಾಸ’.

ಜೀವನದಲ್ಲಿ ಯಾರನ್ನೋ ಅನುಕರಿಸಿ ನಾವೇನೋ ಆಗಲು ಸಾಧ್ಯವಿಲ್ಲ. ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕು. ಕಷ್ಟಪಡಬೇಕು. ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಸಾಧಕರ ಯಶೋಗಾಥೆಗಳನ್ನು ಓದುವುದು, ಸಾಧಕರ ಕಥೆಯಾಧಾರಿತ ಸಿನೆಮಾಗಳನ್ನು ವೀಕ್ಷಿಸುವುದರಿಂದ ಪ್ರೇರಣೆ ದೊರಕುತ್ತದೆ, ಮನೋಬಲ ಹೆಚ್ಚುತ್ತದೆ. ಸಮಸ್ಯೆ, ಸಂಕಷ್ಟಗಳ ಸಂದರ್ಭವನ್ನು ಎದುರಿಸುವ ಬಗೆ, ಪ್ರವಾಹದ ವಿರುದ್ಧ ಈಜುವ ಛಾತಿ, ಆತ್ಮಸ್ಥೈರ್ಯವನ್ನು ಕಥೆಗಳು ನಮ್ಮಲ್ಲಿ ತುಂಬುತ್ತವೆ.

ಯಶಸ್ಸಿಗೆ ಸೋಲಿನ ಕಥೆಯೂ ಮುನ್ನುಡಿ
ಕೆಲವೊಮ್ಮೆ ಸದಾ ವೈಫ‌ಲ್ಯಗಳೇ ಎದುರಾಗಬಹುದು. ಅದರರ್ಥ ನೀವು ಯಶಸ್ಸು ಪಡೆಯುವುದಿಲ್ಲವೆಂದಲ್ಲ. ಬಹುತೇಕ ಜನರು ಯಶಸ್ಸಿನ ಬಾಗಿಲಿನವರೆಗೆ ಬಂದು ತಮ್ಮ ಪ್ರಯತ್ನ ಬಿಡುತ್ತಾರೆ. ಯಶಸ್ಸಿಗೆ ಕೊಂಚ ದೂರದಲ್ಲಿರುವಾಗ ವೈಫ‌ಲ್ಯಕ್ಕೆ ಹೆದರಿ ಪಲಾಯನ ಮಾಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಶಸ್ಸಿಗೆ ಸೋಲಿನ ಕಥೆಯೂ ಮುನ್ನುಡಿಯಾಗಬಹುದು.

ಸೋಲೆದುರಾಗುವುದು ಸಹಜ, ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಪ್ರಯತ್ನದಲ್ಲಿರಬೇಕು. ಪ್ರಯತ್ನ ನಮ್ಮದು, ಫ‌ಲ ನಮ್ಮದಲ್ಲ ಎಂಬುವುದರ ಅರಿವು ಅತಿಮುಖ್ಯ. ನಾವು ಗೆಲ್ಲಲೇಬೇಕೆಂಬ ಸಂಕಲ್ಪದೊಂದಿಗೆ ಮಾಡುವುದೇ ಉತ್ತಮ ಪ್ರಯತ್ನಗಳು ಎಂದಿ¨ªಾರೆ ಅಬ್ರಹಾಂ ಲಿಂಕನ್‌. ಸೋಲನ್ನೇ ಅರಿಯದ ಸ್ಕಾಟ್‌ಲ್ಯಾಂಡಿನ ದೊರೆ ರಾಬರ್ಟ್‌ ಬ್ರೂಸ್‌ ಒಮ್ಮೆ ಸರಣಿ ಸೋಲುಗಳಿಂದ ಹತಾಶರಾಗಿ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ. ಅಲ್ಲಿದ್ದ ಜೇಡವೊಂದು ಗುಹೆಯ ಒಂದು ಬದಿಯಿಂದ ಮತ್ತೂಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಆರು ಬಾರಿ ಕೆಳಗೆ ಬಿದ್ದರೂ ಏಳನೇ ಬಾರಿ ಬಲೆಗಳನ್ನು ನೇಯುತ್ತಾ ಯಶಸ್ವಿಯಾದದ್ದನ್ನು ಕಂಡು ತಾನೂ ಹಾಗೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧ ಮಾಡಿ ಜಯಗಳಿಸಿದನು.

Advertisement

ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯ, ನಮ್ಮ ಬದುಕು ಸಾಗಿಸಲು ಆತ್ಮವಿಶ್ವಾಸವು ಅಷ್ಟೇ ಮುಖ್ಯ. ನಮಗೆ ಎಂಥ ಕಷ್ಟದ ಪರಿಸ್ಥಿತಿ, ಸವಾಲುಗಳನ್ನು ಎದುರಿಸಬಹುದು. ಅಲ್ಲದೆ ಸವಾಲಿನ ಪ್ರಥಮಾರ್ಧವನ್ನು ಗೆದ್ದಂತೆ. ಇಲ್ಲವಾದರೆ ಸವಾಲುಗಳನ್ನು ಕಂಡಕೂಡಲೇ ಗಾಳಿ ತೆಗೆದ ಬಲೂನಿನಂತೆ ಕುಗ್ಗಿ ಬಿಡುತ್ತೇವೆ.
ನಮ್ಮಿಂದ ಈ ಕಾರ್ಯ ನಡೆಸಲು ಸಾಧ್ಯವೋ ಎಂದು ಚಿಂತಿಸುತ್ತಾ ಕೂತರೆ ಯಾವುದೇ ಪ್ರಯೋಜನ ವಿಲ್ಲ. ಬದಲಾಗಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಪ್ರಯತ್ನಶೀಲ  ರಾದಾಗ ಎಂತಹ ಕಠಿನ ಕೆಲಸವಾದರೂ ಸಾಧಿಸುವ ಛಲ, ಧೈರ್ಯ ನಮ್ಮಲ್ಲಿ ಮೂಡಿ ಯಶಸ್ಸು ಹೊಂದಲು ಸಾಧ್ಯವಿದೆ.

ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ. ಧೈರ್ಯದಿಂದ ಮುಂದುವರಿದಾಗ ಜಯ ಖಂಡಿತ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಧೈರ್ಯ, ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ಧೈರ್ಯ ಗೇಡಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಬೇಕಾಗಿ ಬಂದಾಗಲೂ “ನನ್ನಿಂದ ಆಗೋದಿಲ್ಲ’. “ನನಗೆ ಸಾಧ್ಯವಿಲ್ಲ’ ಎನ್ನುವುದೇ ಅವಿಶ್ವಾಸದ ಕುರುಹು. ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿ ಸಲಾಗು ತ್ತದೆ ಅಥವಾ ವ್ಯಕ್ತವಾಗುತ್ತದೆ. ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾ ರಾತ್ಮಕ ಶಕ್ತಿಗಳನ್ನು ಬೆಳೆಸುತ್ತವೆ. ಇದರಿಂದ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.

ಮರಳಿ ಯತ್ನ
ಯಾವುದೇ ಕೆಲಸ – ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವುದಲ್ಲ. “ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದು ಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಬೇಕು.

-   ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next