Advertisement

ಕ್ಯಾಂಪಸ್‌ ಪ್ಲೇಸ್‌ಮೆಂಟ್‌ಗೆ ಆತ್ಮವಿಶ್ವಾಸವೇ ಮೂಲ

04:27 AM May 08, 2019 | mahesh |

ಶೈಕ್ಷಣಿಕ ಜೀವನದ ಆರಂಭವಿರಲಿ, ಕೊನೆಯ ಹಂತವೇ ಆಗಿರಲಿ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ಗೆ ಸದಾ ಸಿದ್ಧರಾಗಿರುವುದು ಬಹುಮುಖ್ಯ. ಕಾರಣ ಅವಕಾಶಗಳು ಯಾವಾಗ ಬಂದು ಬಾಗಿಲು ಬಡಿಯುತ್ತವೆ ಎಂಬುದು ಗೊತ್ತಿರುವುದಿಲ್ಲ. ಇದಕ್ಕಾಗಿ ನಮ್ಮನ್ನು ನಾವು ಮೊದಲೇ ಸಿದ್ಧ ಮಾಡಿಕೊಂಡರೆ ಕ್ಯಾಂಪಸ್‌ ಪ್ಲೇಸ್‌ಮೆಂಟ್ನಲ್ಲಿ ಸಿಗೋ ಅತ್ಯುತ್ತಮ ಅವಕಾಶ ನಮ್ಮದಾಗಲು ಸಾಧ್ಯವಿದೆ. ಇದಕ್ಕಾಗಿ ಮೊದಲಿಗೆ ಬೆಳೆಸಿಕೊಳ್ಳಬೇಕಿರುವುದು ಆತ್ಮವಿಶ್ವಾಸ.

Advertisement

ಶೈಕ್ಷಣಿಕ ಜೀವನದ ಕೊನೆ ಹಂತ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ಸ್ನೇಹಿತರು, ಕಾಲೇಜು, ನೆಚ್ಚಿನ ಉಪನ್ಯಾಸಕರಿಂದ ದೂರವಾಗುವ ನೋವು ಒಂದೆಡೆಯಾದರೆ, ಭವಿಷ್ಯಕ್ಕೇನು ದಾರಿ ಎಂಬ ಆತಂಕ ಇನ್ನೊಂದೆಡೆ ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿ ಜೀವನದ ಕೊನೆಯ ಕ್ಷಣಗಳಲ್ಲಿ ಎಲ್ಲರಲ್ಲಿಯೂ ಸಹಜವಾಗಿ ಕಾಡುವ ಪ್ರಶ್ನೆ ಎಂದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಹೇಗೆಂಬುದು.

ಉದ್ಯೋಗ ಹುಡುಕುವುದು ಬಹುಶಃ ಈ ಹೊತ್ತಿನಲ್ಲಿ ಅತಿ ದೊಡ್ಡ ಸವಾಲೇ ಸರಿ. ಸ್ಪರ್ಧಾತ್ಮಕ ಯುಗದಲ್ಲಿ ಕಂಪೆನಿಗಳಿಂದ ಕಂಪೆನಿಗಳಿಗೆ ರೆಸ್ಯೂಮ್‌ ಹಿಡಿದುಕೊಂಡು ಹೋಗುವುದೇ ಆಗುತ್ತದೆಯಾದರೂ, ಅಲೆದಾಟಕ್ಕೆ ಸಾರ್ಥಕ್ಯ ಸಿಗದಂತಾಗುತ್ತದೆ. ಕೋರ್ಸ್‌ ಮುಗಿಸಿದ ಬಹುತೇಕ ವಿದ್ಯಾರ್ಥಿಗಳ ಗೋಳೂ ಇದೇ ಆಗಿರುತ್ತದೆ. ಆದರೆ, ಜೀವ ಹಿಂಡುವ ಉದ್ಯೋಗಕ್ಕಾಗಿ ಅಲೆದಾಟದ ನಡುವೆ ಕ್ಯಾಂಪಸ್‌ ಸೆಲೆಕ್ಷನ್‌ ಆಗಿ ಬಿಟ್ಟರೆ ದೀರ್ಘ‌ ನಿಟ್ಟುಸಿರು ಬಿಟ್ಟಂತಾಗುತ್ತದೆ.

ಹೌದು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುವಾಗ ವಿದ್ಯಾರ್ಥಿಗಳು ಬಯಸುವುದೂ ಕ್ಯಾಂಪಸ್‌ ಸೆಲೆಕ್ಷನ್‌. ದೈತ್ಯ ಮತ್ತು ಪ್ರಸಿದ್ಧ ಕಂಪೆನಿಗಳ ಪ್ರಮುಖರು ಶೈಕ್ಷಣಿಕ ಸಂಸ್ಥೆಗಳಿಗೇ ಆಗಮಿಸಿ ತಮ್ಮ ಸಂಸ್ಥೆಯಲ್ಲಿರುವ ಉದ್ಯೋಗಗಳಿಗೆ ಸರಿ ಹೊಂದುವ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಲ್ಲೇ ಆಯ್ಕೆ ಮಾಡಿಕೊಂಡು ಹೋಗುತ್ತಾರೆ. ಇದರಿಂದ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳಿಗೂ ಹಲವಾರು ಪ್ರಯೋಜನಗಳು ಸಿಕ್ಕಂತಾಗುತ್ತದೆ. ಉದ್ಯೋಗಕ್ಕಾಗಿ ವ್ಯರ್ಥ ಅಲೆದಾಟ ತಪ್ಪಿ ನೆಮ್ಮದಿಯಿಂದ ಪರೀಕ್ಷೆ ಬರೆದು, ಬಳಿಕ ಉದ್ಯೋಗಕ್ಕೆ ಸೇರಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಕ್ಯಾಂಪಸ್‌ ಪ್ಲೇಸ್‌ಮೆಂಟ್ ಆಯಾ ಪದವಿಯ ಕೊನೆಯ ಸೆಮಿಸ್ಟರ್‌ನ ಮಧ್ಯಭಾಗದಲ್ಲಿ ನಡೆಯುತ್ತದೆ. ವಿವಿಧ ಸಂಸ್ಥೆಗಳು ಕ್ಯಾಂಪಸ್‌ಗೆ ಆಗಮಿಸಿ ಸಮರ್ಥ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಪರೀಕ್ಷೆಗಳು ಮುಗಿದ ಬಳಿಕದ ಇಂತಿಷ್ಟು ಸಮಯದಲ್ಲಿ ಸೇರ್ಪಡೆಗೊಳ್ಳಲು ಹೇಳಿ ತೆರಳುತ್ತಾರೆ. ಸಾಮಾನ್ಯವಾಗಿ ಎಲ್ಲ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಲಿಖೀತ ಮತ್ತು ಮೌಖೀಕ (ಸಂದರ್ಶನ) ಪರೀಕ್ಷೆಗಳಿರುತ್ತವೆ.

Advertisement

ಎಂಜಿನಿಯರಿಂಗ್‌ ಮತ್ತಿತರ ದೊಡ್ಡ ದೊಡ್ಡ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮೂರ್‍ನಾಲ್ಕು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸಮರ್ಥವಾದವರನ್ನಷ್ಟೇ ಉದ್ಯೋಗಕ್ಕೆ ತೆಗೆದುಕೊಳ್ಳಲಾಗುತ್ತದೆ. ಪರೀಕ್ಷೆ ಮುಗಿಯುತ್ತಿದ್ದಂತೆ ಉದ್ಯೋಗಕ್ಕೆ ಸೇರ್ಪಡೆಗೊಳ್ಳಲು ಆರ್ಡರ್‌ ಲೆಟರ್‌ಗಳನ್ನು ಮನೆಗೇ ಕಳುಹಿಸಿಕೊಡುವ ವ್ಯವಸ್ಥೆಯನ್ನು ಕಂಪೆನಿಗಳೇ ಮಾಡುತ್ತವೆ.

ಯಾರೆಲ್ಲ ಪಾಲ್ಗೊಳ್ಳಬಹುದು?
ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳು ವಂತಿಲ್ಲ. ಅಂತಿಮ ವರ್ಷದ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಪಾಲ್ಗೊಳ್ಳಬಹುದು. ಶೈಕ್ಷಣಿಕ ಸಂಸ್ಥೆಗಳೇ ಏರ್ಪಡಿಸುವ ಕ್ಯಾಂಪಸ್‌ ಸೆಲೆಕ್ಷನ್‌ ಆದಲ್ಲಿ, ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಬಿಬಿಎ, ಬಿಬಿಎಂ, ಡಿಪ್ಲೊಮಾ, ಐಟಿಐ ಸೇರಿದಂತೆ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ. ಆ ಸಂಸ್ಥೆಯಲ್ಲದೇ, ಹೊರಗಿನ ಸಂಸ್ಥೆಯವರಿಗೂ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ಕೌಶಲಗಳಿದ್ದರೆ ಉದ್ಯೋಗ ಸುಲಭ

ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆಗಳೂ ಅಗತ್ಯವಾಗಿರುತ್ತದೆ. ಪ್ರಥಮವಾಗಿ ಯಾವ ಕಂಪೆನಿಗೆ ಆಯ್ಕೆ ಬಯಸುವಿರೋ ಆ ಕಂಪೆನಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕಾಗುತ್ತದೆ. ಜತೆಗೆ ಹುದ್ದೆಯ ಕುರಿತಾಗಿಯೂ ಅಗತ್ಯ ಮಾಹಿತಿ ಇರಬೇಕು. ಸಂದರ್ಶಕರ ಯಾವುದೇ ಪ್ರಶ್ನೆಗಳಿಗೆ ತತ್‌ಕ್ಷಣವೇ ಉತ್ತರಿಸುವ ಕೌಶಲ, ಪ್ರಾಬ್ಲೆಮ್‌ ಸೊಲ್ಯೂಶನ್‌ ಕ್ರಿಯಾಶೀಲತೆ, ಸನ್ನಿವೇಶಕ್ಕೆ ತಕ್ಕಂತೆ ಮಾತಿನಲ್ಲಿ ಏರಿಳಿಕೆ, ಭಾಷಾ ಹಿಡಿತ ಇದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವಲ್ಲ.

ಆತ್ಮವಿಶ್ವಾಸ ಅಗತ್ಯ

ಲಿಖೀತ ಪರೀಕ್ಷೆಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಆತ್ಮವಿಶ್ವಾಸದಿಂದ ಉತ್ತರಿಸಬೇಕು. ಸಂದರ್ಶನದ ಸಮಯದಲ್ಲಿಯೂ ಆದಷ್ಟು 90 ಡಿಗ್ರಿಯಲ್ಲಿಯೇ ಮುಖ ಇರಬೇಕೇ ಹೊರತು, ಆಚೀಚೆ ನೋಡುತ್ತಾ ಉತ್ತರಿಸುವುದು, ಅನಗತ್ಯ ಹಾವಭಾವ, ಕೈ ಚಲನೆ ತೋರ್ಪಡಿಸುವುದು ಮಾಡಬಾರದು. ಸಂದರ್ಶಕರ ಎದುರು ಆತ್ಮವಿಶ್ವಾಸದಿಂದ ಕುಳಿತುಕೊಳ್ಳಬೇಕು. ಧರಿಸುವ ದಿರಿಸು ಆದಷ್ಟು ಘನತೆಯುಳ್ಳದ್ದಾಗಿರಬೇಕು. ಇಷ್ಟೆಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಸಂದರ್ಶನ ಎದುರಿಸಿದರೆ, ಖಂಡಿತ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಭಾಷಾಜ್ಞಾನ
ದೈತ್ಯ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಲು ಭಾಷಾಜ್ಞಾನ ಅಗತ್ಯವಾಗಿ ಬೇಕಾಗುತ್ತದೆ. ಪ್ರಾದೇಶಿಕ, ಮಾತೃ ಭಾಷೆಗಳಷ್ಟೇ ಗೊತ್ತಿದ್ದರೆ, ಇಂತಹ ಕಂಪೆನಿಗಳಲ್ಲಿ ಉದ್ಯೋಗ ಕಷ್ಟ. ಹಿಂದಿ, ಇಂಗ್ಲಿಷ್‌ ಜ್ಞಾನ ಅಗತ್ಯವಾಗಿರಬೇಕು.
Advertisement

Udayavani is now on Telegram. Click here to join our channel and stay updated with the latest news.

Next