Advertisement

ಬಂಡಾಯ ಅಭ್ಯರ್ಥಿ ಬಶೀರ್‌ ಬೂಡಿಯಾರ್‌ ಬೆಂಬಲಿಗರ ಸಭೆ

01:16 PM Apr 29, 2018 | |

ಪುತ್ತೂರು: ಐದು ವರ್ಷದ ಅವಧಿಯಲ್ಲಿ ಪುತ್ತೂರಿನಲ್ಲಿ ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರು ಮುಸ್ಲಿಂ ಸಮುದಾಯಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ. ಈ ಕಾರಣದಿಂದ ಅವರ ವಿರುದ್ಧ ಸ್ಪರ್ಧೆ ಅನಿವಾರ್ಯವಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣದಲ್ಲಿರುವ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಬಶೀರ್‌ ಬೂಡಿಯಾರ್‌ ಹೇಳಿದರು.

Advertisement

ನಗರದ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು. ನಾಮಪತ್ರ ಹಿಂದೆಗೆಯದಿದ್ದರೆ ನಿಮಗೆ ತೊಂದರೆ ಆಗಬಹುದು ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ. ಆದರೆ ನಾನು ಯಾರ ಬೆದರಿಕೆಗೂ ಹೆದರುವುದಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಕುಂತಳಾ ಶೆಟ್ಟಿ ಅವರು ತನ್ನ ಅಧಿಕಾರಾವಧಿಯಲ್ಲಿ ಸ್ಥಳೀಯಾಡಳಿತ ಗಳಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ತೆಗೆಸಿಕೊಡುವ ಪ್ರಯತ್ನ ಮಾಡಿಲ್ಲ. ಅವರು ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದರೂ ಶಾಸಕರು ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಅವರಿಂದ ಮುಸ್ಲಿಂ ಸಮುದಾಯಕ್ಕಾದ ಅನ್ಯಾಯದ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ| ಪರಮೇಶ್ವರ್‌, ಪಕ್ಷದ ನಾಯಕರಾದ ರೋಶನ್‌ ಬೇಗ್‌, ತನ್ವೀರ್‌ ಸೇಠ್ , ಎಸ್‌. ಆರ್‌. ಪಾಟೀಲ್‌ ಅವರಿಗೆ ದೂರು ನೀಡಿ, ಅಭ್ಯರ್ಥಿ ಬದಲಾವಣೆ ಮಾಡುವಂತೆ ಕೇಳಿಕೊಂಡಿದ್ದೆವು. ದೆಹಲಿಗೆ ತೆರಳಿ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಮತ್ತೆ ಶಕುಂತಳಾ ಶೆಟ್ಟಿ ಅವರಿಗೇ ಟಿಕೆಟ್‌ ನೀಡಿರುವುದು ನಮಗೆ ಆಘಾತ ತಂದಿದೆ ಎಂದು ಹೇಳಿದರು.

ನನ್ನದು ಗೆಲ್ಲುವ ವಿಚಾರವಲ್ಲ. ಆದರೂ ನನಗೆ ಮತ ನೀಡಬೇಕು ಎಂದು ವಿನಂತಿಸಿದ ಅವರು ಪ್ರತಿಯೊಂದೂ ಮತಕ್ಕೂ ಬೆಲೆಯಿದ್ದು, ನೀವು 25 ಸಾವಿರ ಮತಗಳನ್ನು ನನಗೆ ತೆಗೆಸಿಕೊಡುವ ಮೂಲಕ ಸಮುದಾಯದ ಶಕ್ತಿ ತೋರಿಸಬೇಕು. ಅಲ್ಪಸಂಖ್ಯಾಕ ಸಮುದಾಯದ ಕೆಲಸವನ್ನು ನಾನು ಮಾಡಿಕೊಡಲು ತಯಾರಾಗಿದ್ದೇನೆ ಎಂದರು.

Advertisement

ನೌಫಲ್‌ ಮುಕ್ವೆ ಮಾತನಾಡಿ, ಇಂದು ನಮ್ಮ ಸಮುದಾಯ ಒಂದಿಷ್ಟು ಸಮಸ್ಯೆ, ಆತಂಕ ಹಾಗೂ ತೊಂದರೆಗಳ ಸುಳಿಯಲ್ಲಿದೆ. ನಮ್ಮ ಸಮುದಾಯಕ್ಕೆ ಸ್ಪಂದಿಸುವ ನಾಯಕ ಬೇಕಾಗಿದ್ದು, ಬಶೀರ್‌ ಬೂಡಿಯಾರ್‌ ಅವರಿಗೆ ಅಧಿಕ ಪ್ರಮಾಣದ ಮತಗಳನ್ನು ನೀಡಿ ಅವರನ್ನು ನಾಯಕರಾಗಿ ರೂಪಿಸಬೇಕೆಂದು ಮನವಿ ಮಾಡಿದರು. ಅಬ್ದುಲ್‌ ರಹಿಮಾನ್‌ ಪರ್ಪುಂಜ, ಇ.ಎಂ.ಹನೀಫ್‌ ತಿಂಗಳಾಡಿ, ಹುಸೈನ್‌ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭರವಸೆ ನೀಡಿ ವಂಚನೆ 
ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಉಪಾಧ್ಯಕ್ಷ ನಝೀರ್‌ ಬಲ್ನಾಡು ಮಾತನಾಡಿ, ಶಾಸಕಿ ಶಕುಂತಳಾ ಶೆಟ್ಟಿ ಅವರು ಮುಸ್ಲಿಂ ಸಮುದಾಯದ ನಾಯಕರಿಗೆ ನಿಗಮ ಮಂಡಳಿಗಳಲ್ಲಿ ಹುದ್ದೆ ನೀಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದಾಗಲೂ ಬಿಡುಗಡೆಗೊಳಿಸುವಂತೆ ಕೇಳಿಕೊಂಡರೆ ನೀವು ಮಾಡುವುದು ಹೀಗೆಯೇ ಎಂದು ಹೀಯಾಳಿಸುವ ಮೂಲಕ ಬಿಜೆಪಿಗರನ್ನು ಸಂತೈಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next